ಬೆಂಗಳೂರು: ಬೆಂಗಳೂರು ವಿಶ್ವವಿದ್ಯಾಲಯ ರಾಜ್ಯದಲ್ಲೇ ಮೊದಲ ಬಾರಿಗೆ ವಿದ್ಯಾರ್ಥಿಗಳಿಗೆ ಆರೋಗ್ಯ ವಿಮೆ ಕಲ್ಪಿಸುವ ವಿಭಿನ್ನ ಯೋಜನೆ ಜಾರಿಗೆ ಮುಂದಾಗಿದೆ. ಪ್ರಸಕ್ತ ಸಾಲಿನಿಂದ ಜ್ಞಾನಭಾರತಿ ವಿವಿಯಲ್ಲಿ ಸ್ನಾತಕೋತ್ತರ ಪದವಿ ವ್ಯಾಸಂಗ ಮಾಡುವ ಎಲ್ಲಾ 10 ಸಾವಿರ ವಿದ್ಯಾರ್ಥಿಗಳಿಗೆ ಆರೋಗ್ಯ ಕವಚ ಒದಗಿಸಲು ಸಿದ್ಧತೆ ನಡೆಸಿದೆ.
ಜ್ಞಾನಭಾರತಿ ವಿವಿ ಆವರಣದಲ್ಲಿ ಸುಮಾರು 52 ವಿವಿಧ ಕೋರ್ಸ್‌ಗಳಿದ್ದು, 8,500 ರಿಂದ 10,000 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಈ ಎಲ್ಲಾ ವಿದ್ಯಾರ್ಥಿಗಳಿಗೆ ಆರೋಗ್ಯ ವಿಮೆ ಮಾಡಿಸಲು ವಿವಿ ಸಿದ್ಧವಾಗಿದೆ.
ವಿವಿಯಲ್ಲಿ ವ್ಯಾಸಂಗ ಮಾಡುವ ವಿದ್ಯಾರ್ಥಿಗಳ ಪೈಕಿ ಬಹುತೇಕ ಗ್ರಾಮೀಣ ಭಾಗ ಮತ್ತು ಮಧ್ಯಮ ವರ್ಗದವರೇ ಆಗಿದ್ದಾರೆ. ಇವರಲ್ಲಿ ಬಹಳಷ್ಟು ವಿದ್ಯಾರ್ಥಿಗಳು ದೂರದ ಊರಿನಿಂದ ಬರುವವರಿದ್ದಾರೆ. ಕಳೆದ ವರ್ಷವಷ್ಟೇ 5 ವಿದ್ಯಾರ್ಥಿಗಳು ರಸ್ತೆ ಅಪಘಾತಕ್ಕೀಡಾಗಿದ್ದರು. ಹಾಗಾಗಿ ವಿದ್ಯಾರ್ಥಿಗಳ ಆರೋಗ್ಯದ ದೃಷ್ಟಿಯಿಂದ ಆರೋಗ್ಯ ವಿಮೆ ಅತಿ ಅವಶ್ಯಕವಾಗಿತ್ತು. ಈ ನಿಟ್ಟಿನಲ್ಲಿ ಪ್ರಸಕ್ತ ಶೈಕ್ಷಣಿಕ ವರ್ಷದಿಂದಲೇ ವಿಮೆ ಜಾರಿಗೊಳಿಸಲು ತೀರ್ಮಾನಿಸಿರುವುದಾಗಿ ವಿವಿ ಸಿಂಡಿಕೇಟ್ ಸದಸ್ಯ ಶಿವಣ್ಣ ತಿಳಿಸಿದರು.
ಈ ಹಿಂದೆ ಎರಡು ವರ್ಷಗಳಿಂದ ಆರೋಗ್ಯ ವಿಮೆ ವಿಷಯ ಚರ್ಚೆಗೆ ಬರುತ್ತಿದ್ದು, ಸೂಕ್ತ ವಿಮಾ ಕಂಪನಿಗಳು ಸಿಗದ ಕಾರಣ ವಿಳಂಬವಾಗಿತ್ತು. ಸದ್ಯ ಈ ಬಾರಿ ವಿಮಾ ಕಂಪನಿಗಳು ಹೆಚ್ಚು ಆಸಕ್ತಿ ತೋರುತಿದ್ದು, ವಿದ್ಯಾರ್ಥಿಗಳಿಂದ ಸ್ವಲ್ಪ ಮೊತ್ತ ಸಂಗ್ರಹಿಸಿ ಬಾಕಿ ಮೊತ್ತವನ್ನು ವಿಶ್ವವಿದ್ಯಾಲಯ ಅಥವಾ ವಿಮಾ ಕಂಪನಿಗಳೇ ತುಂಬಲಿವೆ. ಇದರ ದರಗಳನ್ನು ತೀರ್ಮಾನಿಸಲು ಶಿಕ್ಷಣ ವಿಭಾಗದ ಡೀನ್ ಪ್ರೊ. ಉಮಿಯಾ ನೇತೃತ್ವದ ಸಮಿತಿ ರಚಿಸಲಾಗಿದೆ. ಈ ಸಮಿತಿಯಲ್ಲಿ ಇನ್ನುಳಿದ ವಿಭಾಗದ ಮುಖ್ಯಸ್ಥರು ಸದಸ್ಯರಾಗಿ ತಮ್ಮ ಸಲಹೆಗಳನ್ನು ನೀಡಲಿದ್ದಾರೆ ಎಂದು ವಿವಿಯ ಕುಲಸಚಿವ ಪ್ರೊ.ಬಿ.ಕೆ.ರವಿ ತಿಳಿಸಿದರು.
ವಿಮೆಯಲ್ಲಿ ಕನಿಷ್ಠ ಒಂದು ಲಕ್ಷ ರೂ. ಕವರೇಜ್ ನೀಡಲು ತೀರ್ಮಾನಿಸಿದ್ದು, ಇದಕ್ಕಿಂತ ಒಳ್ಳೆಯ ಸ್ಕೀಮ್ ಸಿಕ್ಕಲ್ಲಿ ಅದನ್ನು ಆಯ್ಕೆ ಮಾಡಲಾಗುವುದು. ವಿಮೆ ಒಪ್ಪಂದ ಯಾವ ಕಂಪನಿ ಜತೆ ಮಾಡಿಕೊಳ್ಳಬೇಕು ಎಂಬುದು ಇನ್ನೂ ತೀರ್ಮಾನಿಸಿಲ್ಲ. ಯಾವ ಕಂಪನಿ ಹೆಚ್ಚಿನ ಸೌಲಭ್ಯ ನೀಡಲಿದೆ ಎಂಬುದನ್ನು ಪರಿಶೀಲಿಸಿ ಒಪ್ಪಂದ ಮಾಡಿಕೊಳ್ಳಲಾಗುವುದು. ಪ್ರತಿ ವರ್ಷ ಬೆಂಗಳೂರು ವಿವಿಗೆ 10ಸಾವಿರ ಮಕ್ಕಳು ವ್ಯಾಸಂಗಕ್ಕೆ ಸೇರ್ಪಡೆಯಾಗುತ್ತಾರೆ. ಇವರು ಎರಡು ವರ್ಷಗಳಲ್ಲಿ ತಮ್ಮ ಕೋರ್ಸ್ ಮುಗಿಸುತ್ತಾರೆ. ಹಾಗಾಗಿ ವಿಮೆ ಅವಧಿ ಎರಡು ವರ್ಷದ ಅವಧಿಗೆ ಸೀಮಿತವಾಗಿದ್ದು, ಪ್ರತಿ ವರ್ಷ 10ಸಾವಿರ ಹೊಸ ವಿಮೆಗಳು ಕಂಪನಿಗಳಿಗೆ ಸಿಗಲಿವೆ. ಇದನ್ನು ಗಮನದಲ್ಲಿಟ್ಟುಕೊಂಡು ಒಳ್ಳೆಯ ವಿಮಾ ಕಂಪನಿ ಜತೆ ಒಪ್ಪಂದ ಮಾಡಿಕೊಳ್ಳಲಾಗುವುದು ಎನ್ನುತ್ತಾರೆ ಬೆಂಗಳೂರು ವಿವಿ ಕುಲಪತಿ ಪ್ರೊ.ಕೆ.ಆರ್ . ವೇಣುಗೋಪಾಲ್.
● ಲೋಕೇಶ್ ರಾಮ್