ಹೊಸದಿಲ್ಲಿ: ಎಲ್ಲ ಹಿರಿಯ ನಾಗರಿಕರಿಗೂ ಆಯುಷ್ಮಾನ್ ಭಾರತ್ ವಿಮೆ ಯೋಜನೆಯನ್ನು ಕೇಂದ್ರ ಸರಕಾರ ವಿಸ್ತರಿಸಿದ ಒಂದೇ ವಾರದಲ್ಲಿ ಸುಮಾರು 2.16 ಲಕ್ಷ ಹೊಸ ಫಲಾನುಭವಿಗಳು ಈ ಯೋಜನೆಗೆ ಸೇರ್ಪಡೆಗೊಂಡಿದ್ದಾರೆ. ಕರ್ನಾಟಕದಿಂದ 11,613 ಮಂದಿ ಸೇರ್ಪಡೆಯಾಗಿದ್ದು, ಅತೀ ಹೆಚ್ಚು ನೋಂದಣಿ ಆಗಿರುವ ರಾಜ್ಯಗಳ ಪೈಕಿ ಕರ್ನಾಟಕ 4ನೇ ಸ್ಥಾನ ಪಡೆದಿದೆ.
ಹೊಸ ಫಲಾನುಭವಿಗಳ ಪೈಕಿ ಅತೀ ಹೆಚ್ಚು ಮಂದಿ ಕೇರಳಿಗರಾಗಿದ್ದು, ಇಲ್ಲಿನ 89,800 ಮಂದಿಗೆ ಕಾರ್ಡ್ ವಿತರಿಸಲಾಗಿದೆ ಎಂದು ರಾಷ್ಟ್ರೀಯ ಆರೋಗ್ಯ ಪ್ರಾಧಿಕಾರ ಹೇಳಿದೆ. 2 ಮತ್ತು 3ನೇ ಸ್ಥಾನವನ್ನು ಕ್ರಮವಾಗಿ ಮಧ್ಯಪ್ರದೇಶ (53,000) ಮತ್ತು ಉತ್ತರ ಪ್ರದೇಶ (47,000) ಪಡೆದುಕೊಂಡಿವೆ.
4ನೇ ಸ್ಥಾನದಲ್ಲಿ ಕರ್ನಾಟಕವಿದ್ದು, 11,613 ಮಂದಿ ಹೊಸ ಫಲಾನುಭವಿ ಗಳು ಸೇರ್ಪಡೆಗೊಂಡಿದ್ದಾರೆ. ತಮಿಳುನಾಡು (3156), ತೆಲಂಗಾಣ (3056) ಮತ್ತು ಆಂಧ್ರಪ್ರದೇಶ (3488) ಮಂದಿ ನೋಂದಣಿ ಮಾಡಿಕೊಂಡಿದ್ದು, ಈ ರಾಜ್ಯಗಳಲ್ಲಿ ನೋಂದಣಿ ಪ್ರಮಾಣ ಕಡಿಮೆ ಇದೆ ಎಂದು ದತ್ತಾಂಶಗಳಿಂದ ತಿಳಿದುಬಂದಿದೆ.
ಏನಿದು ಯೋಜನೆ?
ಆದಾಯದ ಮಾನದಂಡದಲ್ಲಿ ಈಗಾಗಲೇ ನೋಂದಣಿ ಮಾಡಿಕೊಂಡಿದ್ದ 70 ವರ್ಷ ದಾಟಿರುವ ಸುಮಾರು 32 ಸಾವಿರ ಮಂದಿ, ಆದಾಯದ ಮಿತಿ ಇಲ್ಲದ ವಿಸ್ತರಿತ ಯೋಜನೆಗೆ (5 ಲಕ್ಷ ರೂ.) ಹೆಚ್ಚುವರಿ ಫಲಾನುಭವಿಗಳಾಗಿ ಸೇರ್ಪಡೆಗೊಂಡಿದ್ದಾರೆ. ಆಪ್ ಅಧಿಕಾರದಲ್ಲಿರುವ ದಿಲ್ಲಿ ಮತ್ತು ಟಿಎಂಸಿ ಅಧಿಕಾರದಲ್ಲಿರುವ ಪಶ್ಚಿಮ ಬಂಗಾಲದಲ್ಲಿ ಈ ಯೋಜನೆ ಜಾರಿಯಾಗಿಲ್ಲದ ಕಾರಣ ಇಲ್ಲಿ ಯಾವುದೇ ನೋಂದಣಿಗಳು ನಡೆದಿಲ್ಲ.
ಆದರೆ ಆಪ್ ಅಧಿಕಾರದಲ್ಲಿರುವ ಪಂಜಾಬ್‌ನಲ್ಲಿ ಈ ಯೋಜನೆಯನ್ನು ಜಾರಿ ಮಾಡಲಾಗಿದ್ದು, 5,697 ಹೊಸ ಕಾರ್ಡ್‌ಗಳನ್ನು ವಿತರಣೆ ಮಾಡಲಾಗಿದೆ. ಹೊಸ ಯೋಜನೆಯ ಮೂಲಕ 4.5 ಕೋಟಿ ಕುಟುಂಬಕ್ಕೆ ಸಹಾಯವಾಗಲಿದ್ದು, 6 ಕೋಟಿ ಹಿರಿಯ ನಾಗರಿಕರು ಇದರ ಪ್ರಯೋಜನ ಪಡೆದುಕೊಳ್ಳಲಿದ್ದಾರೆ ಎಂದು ಕೇಂದ್ರ ಸರಕಾರ ತಿಳಿಸಿದೆ.