ಶ್ರೀರಂಗಪಟ್ಟಣ: ಚಾರಣ ಮಾಡುವುದರಿಂದ ಆರೋಗ್ಯ ವೃದ್ಧಿಸಲಿದೆ. ಆದ್ದರಿಂದ ಇಂತಹ ಕಾರ್ಯಕ್ರಮಗಳಲ್ಲಿ ಯುವಜನತೆ ಹೆಚ್ಚಾಗಿಭಾಗವಹಿಸಬೇಕು ಎಂದು ಜಿಲ್ಲಾಧಿಕಾರಿ ಡಾ. ಎಂ.ವಿ.ವೆಂಕಟೇಶ್ ತಿಳಿಸಿದರು.
ಜಿಲ್ಲಾಡಳಿತ, ತಾಲೂಕು ಆಡಳಿತ ಮತ್ತು ಇತರ ಸಂಸ್ಥೆಗಳಿಂದ ಕರಿಘಟ್ಟ ಚಾರಣಕ್ಕೆ ಚಾಲನೆ ನೀಡಿ ಮಾತನಾಡಿ, ಕೋವಿಡ್ ಬಗ್ಗೆ ಜಾಗೃತಿ ಮೂಡಿಸಲಿಎಂಬ ಘೋಷವಾಕ್ಯದೊಂದಿಗೆ ಚಾರಣ ಮತ್ತು ಯೋಗಾಸನ ಹಮ್ಮಿಕೊಳ್ಳಲಾಗಿದೆ. ಎಲ್ಲ ಅಧಿಕಾರಿಗಳು, ಸಾರ್ವಜನಿಕರು, ವಿದ್ಯಾರ್ಥಿ, ವಿದ್ಯಾರ್ಥಿನಿಯರು ಸಂಭ್ರಮದಿಂದ ಚಾರಣದಲ್ಲಿ ಭಾಗವಹಿಸಬೇಕು ಎಂದು ತಿಳಿಸಿದರು.
ಪ್ರಕೃತಿಯ ಸೊಬಗು: ಕರಿಘಟ್ಟದ ತುಟ್ಟ ತುದಿಯಿಂದ ಪ್ರಕೃತಿಯ ಸೊಬಗನ್ನು ನೋಡಿದರೆ ಬಹಳ ಸಂತೋಷ ವಾಗುತ್ತದೆ. ಇಡೀ ಮೈಸೂರು,ಶ್ರೀರಂಗಪಟ್ಟಣ, ಗಂಜಾಂ, ಕಾವೇರಿ ನದಿ ಸಂಪೂರ್ಣವಾಗಿ ವೀಕ್ಷಣೆ ಮಾಡಬಹುದು. ಇದು ಅದ್ಭುತವಾದ ಸೌಂದರ್ಯದಿಂದ ಕೂಡಿದ ಪ್ರದೇಶವಾಗಿದ್ದು, ಇಲ್ಲಿ ನಿಸರ್ಗದ ಪ್ರಕೃತಿ ಅತ್ಯುತ್ತಮವಾಗಿದೆ. ಇದು ನಿಜವಾದ ಅರ್ಥಪೂರ್ಣ ಕಾರ್ಯಕ್ರಮವಾಗಿದೆ. ಪುಟ್ಟ ಮಕ್ಕಳು ಕೂಡ ಭಾಗವಹಿಸಿರುವುದು ಸಂತೋಷವಾಗಿದೆ. ಈ ಚಾರಣ ಎಲ್ಲರಿಗೂ ಅವಿಸ್ಮರಣೀಯ ಎಂದು ಹೇಳಿದರು.
ಎಲ್ಲರಿಗೂ ನೆಗೆಟಿವ್: ಸಾರ್ವಜನಿಕರು ಈ ಚಾರಣ ಕಾರ್ಯಕ್ರಮವನ್ನು ಉಪಯೋಗಿಸಿಕೊಂಡು ತಮ್ಮ ಆರೋಗ್ಯ ಕಾಪಾಡಿಕೊಳ್ಳಬೇಕು. ಮಾಸ್ಕ್, ಸಾಮಾಜಿಕ ಅಂತರ ಕಾಪಾಡಿಕೊಳ್ಳಬೇಕು. ಸ್ಯಾನಿಟೈಸರ್ ಬಳಸುವ ಮೂಲಕ ಕೋವಿಡ್ ಬಗ್ಗೆ ಜಾಗೃತಿಮೂಡಿಸಲಾಗುತ್ತಿದೆ. ಚಾರಣದಲ್ಲಿ ಭಾಗವಹಿಸಿದವರಿಗೆ ಕೋವಿಡ್ ಟೆಸ್ಟ್ ಮಾಡಿಸಲಾಗಿದ್ದು, ಎಲ್ಲರಿಗೂ ನೆಗೆಟಿವ್ ಬಂದಿದೆ ಎಂದು ಹೇಳಿದರು.
ಸೂಕ್ತ ಚಿಕಿತ್ಸೆ ಪಡೆಯಿರಿ: ಯಾರಿಗಾದರೂ ರೋಗ ಲಕ್ಷಣಗಳು ಕಂಡು ಬಂದರೆ ಸ್ಥಳೀಯ ಆಸ್ಪತ್ರೆಗಳು, ಮೊಬೈಲ್ ಯೂನಿಟ್‌ಗಳು, ತಾಲೂಕು ಆಸ್ಪತ್ರೆಗಳಲ್ಲಿ ಪರೀಕ್ಷೆಯನ್ನು ಮಾಡಿಸಿಕೊಳ್ಳಬೇಕು. ಮನೆಯಲ್ಲಿ ವಯಸ್ಸಾದವರು, ಸಕ್ಕರೆ ಖಾಯಿಲೆ, ಬಿಪಿ, ಕಿಡ್ನಿ ತೊಂದರೆಯಿಂದ ಬಳಲುತ್ತಿರುವವರು 15 ದಿನಗಳಿಗೊಮ್ಮೆ ಪರೀಕ್ಷೆ ಮಾಡಿಸಿಕೊಂಡರೆ ಕೋವಿಡ್ ಶೀಘ್ರ ಪತ್ತೆ ಹಚ್ಚಿ ಚಿಕಿತ್ಸೆ ಪಡೆಯುವ ಮೂಲಕ ಗುಣಮುಖರಾಗಲು ಸಾಧ್ಯವಿದೆ ಎಂದು ತಿಳಿಸಿದರು.
ಚಾರಣದಲ್ಲಿ ಉಪವಿಭಾಗಾಧಿಕಾರಿ ಶಿವಾನಂದಮೂರ್ತಿ, ತಹಶೀಲ್ದಾರ್ ಎಂ.ವಿ.ರೂಪಾ, ಆಯುಷ್ ಅಧಿಕಾರಿ ಡಾ.ಪುಷ್ಪ, ತಾಲೂಕು ಆರೋಗ್ಯಾಧಿಕಾರಿ ಡಾ.ವೆಂಕಟೇಶ್ ಸೇರಿದಂತೆ ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ಅಧಿಕಾರಿಗಳು ಭಾಗವಹಿಸಿದ್ದರು.
ಒಂದು ತಾಸು ಯೋಗಾಸನ : ಗುರುವಾರ ಕರಿಘಟ್ಟದ ತಾಳು ಬೆಟ್ಟದಿಂದ ಚಾರಣ ಮಾಡಿದ ಅಧಿಕಾರಿಗಳು, ಸಾರ್ವಜನಿಕರು, ಯುವಕರು ಒಂದೂವರೆ ಕಿ.ಮೀ ದೂರದವರೆಗೆ ಹೆಜ್ಜೆ ಹಾಕಿದರು. ಶಿಖರದ ತುದಿ ತಲುಪಿದರು. ನಂತರ ಕರಿಘಟ್ಟದ ಶ್ರೀನಿವಾಸ ದೇವಾಲಯದ ಆವರಣದಲ್ಲಿ ಒಂದು ತಾಸು ಯೋಗಾಸನ ಮಾಡಲಾಯಿತು. ಆಯುಷ್ ಇಲಾಖೆಯ ಡಾ.ಶ್ರೀನಿವಾಸ್ ಯೋಗ ಹೇಳಿಕೊಟ್ಟರು. ಸುಮಾರು 10ಕ್ಕೂ ಹೆಚ್ಚು ವಿವಿಧ ರೀತಿಯ ಯೋಗಾಸನ ಮಾಡಲಾಯಿತು.