ಫಿಟ್‌ನೆಸ್‌ಗಾಗಿ ಬಸ್ಕಿ ಹೊಡೆಯೋದ್ರಲ್ಲೇನಿದೇರಿ? ಅಂತ ಮೂಗು ಮುರಿಯಬೇಡಿ. ಅದರಿಂದಾಗುವ ಉಪಯೋಗ ತಿಳಿದದ್ದೇ ಆದಲ್ಲಿ ನಿಮ್ಮ ನಿತ್ಯ ಜೀವನದಲ್ಲಿ ಬಸ್ಕಿಗೂ ಒಂದು ಸ್ಥಾನ ಗ್ಯಾರೆಂಟಿ. ದೈಹಿಕವಾಗಿ ಉತ್ತಮವಾಗಿರಬೇಕು ಎನ್ನುವ ಇಚ್ಛೆ ಇರುವವರಿಗೆಲ್ಲ ಖರ್ಚಿಲ್ಲದೆ ಮಾಡಬಹುದಾದ ಉತ್ತಮ ವ್ಯಾಯಾಮ ಇದು. ಎಲ್ಲಾ ಅಂಗಾಂಗಗಳಿಗೂ ಶಕ್ತಿ ತುಂಬುವಲ್ಲಿಯೂ ಇದು ಸಹಕಾರಿ.
ಬಸ್ಕಿ ಹೊಡೆಯೋದು ಹೇಗೆ?
ಸಿಂಪಲ್ಲಾಗಿ ಹೇಳುವುದಾದರೆ, ಕುಳಿತು ನಿಲ್ಲುವ ಪ್ರಕ್ರಿಯೆ ಇದು. ಎರಡೂ ಕೈಗಳನ್ನು ಹೆಗಲಲ್ಲಿಟ್ಟು ಕೂತು-ನಿಂತು ಮಾಡಬಹುದು. ಈ ಪ್ರಕ್ರಿಯೆಯ ಮೂಲಕವೇ ನಮ್ಮ ಮಾಂಸ ಖಂಡಗಳನ್ನು ಆರೋಗ್ಯವಾಗಿಟ್ಟುಕೊಳ್ಳಬಹುದು. ಇದನ್ನು ಬೆಳಗ್ಗಿನ ಜಾವ ಮತ್ತು ಮುಸ್ಸಂಜೆಯ ಹೊತ್ತು ಮಾಡುವ ಹವ್ಯಾಸವನ್ನು ಬೆಳೆಸಿಕೊಂಡೆವು ಎಂದಾದಲ್ಲಿ ನಾವು ಹೆಚ್ಚು ಫಿಟ್ ಆಂಡ್ ಫೈನ್ ಆಗುತ್ತೇವೆ ಎಂಬುದು ಸತ್ಯ.
ಆರಂಭದಲ್ಲಿ ಮೊದಲ ದಿನ ಹತ್ತರಿಂದ ಇಪ್ಪತ್ತು, ಕೆಲವು ದಿನಗಳ ಬಳಿಕ ಮೂವತ್ತರಿಮದ ಐವತ್ತು, ಈ ಅಭ್ಯಾಸ ಸಲೀಸಾಗಿ ಒಲಿಯಿತು ಎಂದಾದ ನಂತರ ದಿನಕ್ಕೆ ನೂರು ಅಥವಾ ಅದಕ್ಕಿಂತ ಹೆಚ್ಚು ಬಸ್ಕಿಗಳನ್ನು ತೆಗೆಯುವುದರಿಂದ ಸ್ನಾಯುಗಳ ಮೇಲೆ ಇದು ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ. ಕಾಲಿನ ಬೆರಳುಗಳು, ಪಾದ, ಮೊಣಕಾಲು, ಮಂಡಿ ಸೇರಿದಂತೆ ಕಾಲಿನ ಪ್ರತಿಯೊಂದು ಸ್ನಾಯುಗಳು, ಕಿಬ್ಬೊಟ್ಟೆ, ಕೈಗಳು ಸೆರಿದಂತೆ ನಮ್ಮ ದೇಹದ ಪ್ರತಿಯೊಂದು ಅಂಗವೂ ಇದರಿಂದ ಪ್ರಯೋಜನ ಪಡೆಯುತ್ತದೆ. ಜತೆಗೆ ಕಣ್ಣಿನ ಚಲನೆ, ಕತ್ತಿಗೂ ಬಸ್ಕಿ ಉಪಯೋಗಕಾರಿಯೇ ಹೌದು.
ಇದು ದೈಹಿಕ ಸದೃಢತೆಯ ಜತೆಗೆ ಮಾನಸಿಕ ಆರೋಗ್ಯವನ್ನು ಕಾಪಾಡುವಲ್ಲಿಯೂ ಕೆಲಸ ಮಾಡುತ್ತದೆ. ಮಾನವನ ಮೆದುಳು ಹೆಚ್ಚು ತೀಕ್ಷ್ಣವಾಗಿ ಕೆಲಸ ಮಾಡುವುದಕ್ಕೂ, ದಿನವೆಲ್ಲಾ ನಮ್ಮಲ್ಲಿ ಉತ್ಸಾಹ, ಲವಲವಿಕೆ ತುಂಬುವ ನಿಟ್ಟಿನಲ್ಲಿಯೂ ಸಹಾಯ ಮಾಡುತ್ತದೆ.
ಮಕ್ಕಳ ಬುದ್ಧಿಮತ್ತೆಯನ್ನು ಹೆಚ್ಚಿಸುವುದಕ್ಕೆ ಮತ್ತು ಅವರಲ್ಲಿ ಚೈತನ್ಯ ವೃದ್ಧಿಸಬೇಕು ಎನ್ನುವ ದೃಷ್ಟಿಯಿಂದ ಹಿಂದೆಲ್ಲಾ ಶಾಲೆಗಳಲ್ಲಿಯೂ ಅಧ್ಯಾಪಕರು ಬಸ್ಕಿ ತೆಗೆಸುತ್ತಿದ್ದರು. ಹೀಗೆ ವೈಜ್ಞಾನಿಕ ದೃಷ್ಟಿಕೋನದಿಂದಲೂ ನಮ್ಮ ದೈಹಿಕ ಮತ್ತು ಮಾನಸಿಕ ಕ್ಷಮತೆಗೆ ಸಹಾಯ ಮಾಡುವ ಬಸ್ಕಿ ಇಂದಿನಿಂದಲೇ ನಮ್ಮ ರೂಢಿಗಳಲ್ಲಿ ಸೇರಿಕೊಳ್ಳಲಿ. ಆ ಮೂಲಕ ಆರೋಗ್ಯಪೂರ್ಣ ಜೀವನ ನಮ್ಮದಾಗಲಿ.
-ಭುವನ ಬಾಬು, ಪುತ್ತೂರು