Advertisement

ಆರೋಗ್ಯ, ಶಿಕ್ಷಣ ಇಲಾಖೆಯಲ್ಲಿ ಉತ್ತಮ ಪ್ರಗತಿ

08:51 AM Mar 11, 2017 | Team Udayavani |

ಬೆಂಗಳೂರು: ಆರೋಗ್ಯಕರ ಹಾಗೂ ಪ್ರಗತಿದಾಯಕ ಸಮಾಜಕ್ಕೆ ಭದ್ರ ಅಡಿಪಾಯ ಇಡಬೇಕಾಗಿರುವ ಆರೋಗ್ಯ ಮತ್ತು ಶಿಕ್ಷಣ ಇಲಾಖೆ ಪ್ರಸಕ್ತ ಆರ್ಥಿಕ ವರ್ಷದಲ್ಲಿ ಈವರೆಗೆ ಸಾಕಷ್ಟು ಪ್ರಗತಿ ಸಾಧಿಸಿದ್ದರೂ, “ಛಾಯೆ’ ಕಾಣದಂತಾಗಿದೆ.

Advertisement

ಲಾಭದಾಯಕವಲ್ಲದ ಸೇವಾ ಕ್ಷೇತ್ರ ಎನಿಸಿಕೊಂಡಿರುವ ಆರೋಗ್ಯ ಮತ್ತು ಶಿಕ್ಷಣ ಇಲಾಖೆಗಳು ಆರ್ಥಿಕ ಮತ್ತು ಭೌತಿಕವಾಗಿ “ಆರೋಗ್ಯಕರ’ ಪ್ರಗತಿ ದಾಖಲಿಸಿವೆ. ಪ್ರಸಕ್ತ ಆರ್ಥಿಕ ವರ್ಷದ ಬಜೆಟ್‌ನಲ್ಲಿ ಈ ಎರಡೂ ಇಲಾಖೆಗಳಿಗೆ ಹಂಚಿಕೆಯಾದ ಅನುದಾನ,
ಬಿಡುಗಡೆಯಾದ ಅನುದಾನ ಮತ್ತು ಜನವರಿ ಮತ್ತು ಫೆಬ್ರವರಿವರೆಗೆ ಆಗಿರುವ ಒಟ್ಟು ವೆಚ್ಚದ ಶೇಕಡವಾರು ಪ್ರಗತಿ ಉಳಿದ ಇಲಾಖೆಗಳಿಗಿಂತ ಉತ್ತಮವಾಗಿದೆ. ಆದರೆ ಜನರ ನಿರೀಕ್ಷೆ ತಲುಪಿಲ್ಲ.

2016-17ನೇ ಸಾಲಿನ ಬಜೆಟ್‌ನಲ್ಲಿ ಘೋಷಣೆಯಾದ ಎರಡೂ ಇಲಾಖೆ ಯೋಜನೆ ಮತ್ತು ಕಾರ್ಯಕ್ರಮಗಳು ಅಗತ್ಯತೆ ಇರುವವರಿಗೆ ಪರಿಣಾಮಕಾರಿಯಾಗಿ ತಲುಪಿಲ್ಲ. ಆರೋಗ್ಯ ಮತ್ತು ಶಿಕ್ಷಣ ಇಲಾಖೆಗೆ ಈ ವರ್ಷ ಸರ್ಕಾರ ಯಥೇತ್ಛವಾಗಿ ಅನುದಾನ ಕೊಟ್ಟಿತ್ತು. ಅದರಂತೆ ಬಜೆಟ್‌ನಲ್ಲಿ ಘೋಷಣೆ ಮಾಡಿದ್ದ ಅನೇಕ ಕಾರ್ಯಕ್ರಮ ಹಾಗೂ ಯೋಜನೆಗಳು ಬಂದಿವೆ. ಹಣವೂ ಖರ್ಚಾಗಿದೆ. ಆದರೆ, ಕಳೆದೊಂದು ವರ್ಷದಿಂದ ಈ ಎರಡೂ ಇಲಾಖೆಗಳು ಎದುರಿಸುತ್ತಿರುವ ಸಮಸ್ಯೆಗಳು ಮತ್ತು ಸವಾಲುಗಳು ಪ್ರಗತಿಯನ್ನು “ನಗಣ್ಯ’ವಾಗಿಸಿದೆ.

ವೈದ್ಯರ ಕೊರತೆ, ಮೂಲಸೌಕರ್ಯಗಳ ಅಭಾವದಂತಹ ಸಮಸ್ಯೆಗಳು ಇಡೀ ವರ್ಷ ಆರೋಗ್ಯ ಇಲಾಖೆಗೆ ಮಗ್ಗಲು ಮುಳ್ಳಾಗಿ ಕಾಡಿದರೆ, ಪ್ರಶ್ನೆಪತ್ರಿಕೆ ಸೋರಿಕೆ, ಪರೀಕ್ಷಾ ಅಕ್ರಮಗಳು ಶಿಕ್ಷಣ ಇಲಾಖೆಯ ನಿದ್ದೆಗೆಡಿಸಿದ್ದವು. ಹಾಗಾಗಿಯೇ ಬಜೆಟ್‌ ಪ್ರಗತಿ ಗೋಚರಿಸುತ್ತಿಲ್ಲ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಬಜೆಟ್‌ ವೆಚ್ಚದ ಜನವರಿವರೆಗಿನ ಒಟ್ಟಾರೆ ಪ್ರಗತಿ ಶೇ.80ಕ್ಕೂ ಹೆಚ್ಚಾಗಿದ್ದರೆ, ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಇಲಾಖೆಯ ಫೆಬ್ರವರಿವರೆಗಿನ ಒಟ್ಟಾರೆ ಪ್ರಗತಿ ಶೇ.92 ಆಗಿದೆ. ಆರೋಗ್ಯ ಇಲಾಖೆಯಲ್ಲಿ ಈ ವರ್ಷದ ರಾಜ್ಯ ವಲಯ ಯೋಜನೆಗಳು ಮತ್ತು ಕೇಂದ್ರ ಪ್ರಾಯೋಜಿತ ಯೋಜನೆಗಳಡಿ ಆರೋಗ್ಯ ಮತ್ತು
ಕುಟುಂಬ ಕಲ್ಯಾಣ, ಆಯುಷ್‌ ಹಾಗೂ ಔಷಧ ನಿಯಂತ್ರಣ ಇಲಾಖೆಯಲ್ಲಿ 3,109 ಕೋಟಿ ರೂ. ಗಳಲ್ಲಿ 2,160 ಕೋಟಿ ರೂ. ಬಿಡುಗಡೆ ಆಗಿದ್ದು, ಅದರಲ್ಲಿ ಜನವರಿವರೆಗೆ 1,670 ಕೋಟಿ ರೂ. ವೆಚ್ಚ ಮಾಡಲಾಗಿದೆ. ಅದೇ ರೀತಿ ರಾಜ್ಯ ವಲಯ, ಜಿಲ್ಲಾ ವಲಯ, ಎಸ್‌ಸಿಪಿ-ಟಿಎಸ್‌ಪಿ, ವಿಶೇಷ ಅಭಿವೃದ್ಧಿ ಯೋಜನೆ ಇನ್ನಿತರ ಕಾರ್ಯಕ್ರಮಗಳ ಬಾಬಿ¤ನ 3,833 ಕೋಟಿ ರೂ. ಅನುದಾನದಲ್ಲಿ 2,021 ಕೋಟಿ ರೂ. ವೆಚ್ಚ ಮಾಡಲಾಗಿದೆ.

ಸುವರ್ಣ ಆರೋಗ್ಯ ಸುರಕ್ಷಾ ಯೋಜನೆಯಲ್ಲಿ ಅತಿ ಹೆಚ್ಚು ಪ್ರಗತಿ ಆಗಿದ್ದು, ಶೇ.99.90ರಷ್ಟು ಗುರಿ ಸಾಧಿಸಲಾಗಿದೆ. ಈ ಯೋಜನೆಗೆ ಹಂಚಿಕೆಯಾದ 198.83 ಕೋಟಿ ರೂ. ಅನುದಾನದಲ್ಲಿ 198.63 ಕೋಟಿ ರೂ.ಗಳನ್ನು ವೆಚ್ಚ ಮಾಡಲಾಗಿದೆ. ಆದರೆ, ರಾಷ್ಟ್ರೀಯ ಸ್ವಾಸ್ಥ್ಯ ವಿಮಾ ಯೋಜನೆ ಹಾಗೂ ಆಸ್ಪತ್ರೆಗಳ ನಿರ್ಮಾಣ ಹಾಗೂ ನವೀಕರಣದ ಪ್ರಗತಿಯಲ್ಲಿ ಕಳಪೆ ಸಾಧನೆಯಾಗಿದೆ. ರಾಷ್ಟ್ರೀಯ 
ಆರೋಗ್ಯ ವಿಮಾ ಯೋಜನೆಯ 212 ಕೋಟಿ ರೂ. ಅನುದಾನದಲ್ಲಿ ಖರ್ಚಾಗಿದ್ದು 48 ಕೋಟಿ ರೂ. ಮಾತ್ರ. ಅದೇ ರೀತಿ ಆಸ್ಪತ್ರೆ ನಿರ್ಮಾಣ ಮತ್ತು ನವೀಕರಣಕ್ಕೆ ಮೀಸಲಿಟ್ಟ 277 ಕೋಟಿ ರೂ. ಅನುದಾನದಲ್ಲಿ 121 ಕೋಟಿ ರೂ. ಮಾತ್ರ ಖರ್ಚು ಮಾಡಲಾಗಿದೆ. ಶುಚಿ ಯೋಜನೆಯಡಿ 31 ಕೋಟಿ ರೂ. ವೆಚ್ಚ ಮಾಡಿ ಶೇ.65ರಷ್ಟು ಪ್ರಗತಿ ಸಾಧಿಸಲಾಗಿದೆ. 

Advertisement

ಎಲ್ಲ ಯೋಜನೆಗಳೂ ಜಾರಿ: ಬಜೆಟ್‌ ಭಾಷಣದಲ್ಲಿ ಘೋಷಣೆ ಮಾಡಲಾಗಿದ್ದ ಜನೋಪಕಾರಿ ಯೋಜನೆಗಳು ಮತ್ತು 
ಕಾರ್ಯಕ್ರಮಗಳಿಗೆ ಆರೋಗ್ಯ ಇಲಾಖೆ ಕಂಡಿಕೆವಾರು ಆದೇಶಗಳನ್ನು ಹೊರಡಿಸಿದೆ. ಅದರಂತೆ “ಇಂದಿರಾ
ಸುರಕ್ಷಾ’, “ಆರೈಕೆ’, “ಆಪದ್ಭಾಂಧವ’, “ಸಮಗ್ರ ಮಾತೃ ಆರೋಗ್ಯ ಪಾಲನಾ’, “ಉಚಿತ ಪ್ರಯೋಗ ಶಾಲೆ ಸೇವೆ’, “ವಿರಳ’, “ಅಭಯ’ ಯೋಜನೆಗಳನ್ನು ಜಾರಿಗೆ ತರಲಾಗಿದೆ.

ಬಜೆಟ್‌ ಕೊಡುಗೆ ಅನುಷ್ಠಾನ ಅಷ್ಟಕ್ಕಷ್ಟೇ..
ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಇಲಾಖೆಗೆ ಹಂಚಿಕೆ ಮಾಡಲಾಗಿದ್ದ ಒಟ್ಟು 15,966 ಕೋಟಿ ರೂ. ಗಳಲ್ಲಿ ಫೆಬ್ರವರಿವರೆಗೆ 14,767 ಕೋಟಿ ರೂ. ವೆಚ್ಚ ಮಾಡಿ, ಶೇ.92.49ರಷ್ಟು ಪ್ರಗತಿ ತೋರಿಸಲಾಗಿದೆ. ಆದರೆ, ಇದರಲ್ಲಿ ಬಹುತೇಕ ಸಮವಸ್ತ್ರ, ಪಠ್ಯಪುಸ್ತಕ ವಿತರಣೆಯಂತಹ ಹಿಂದಿನಿಂದಲೂ ಜಾರಿಯಲ್ಲಿರುವ ಯೋಜನೆಗಳು ಮತ್ತು ವೇತನ-ಭತ್ಯೆಯಂತಹ ಯೋಜನೇತರ ವೆಚ್ಚಗಳೇ ಹೆಚ್ಚಾಗಿದ್ದು, ಉಳಿದಂತೆ ಈ ಬಾರಿಯ ಬಜೆಟ್‌ ಘೋಷಣೆ ಅನುಷ್ಠಾನ ಅಷ್ಟಕ್ಕಷ್ಟೇ. ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆಗೆ
ಈ ಬಾರಿಯ ಬಜೆಟ್‌ನಲ್ಲಿ ಒಟ್ಟು 10 ಹೊಸ ಕಾರ್ಯಕ್ರಮಗಳ ಘೋಷಣೆ ಮಾಡಲಾಗಿತ್ತು. ಅದರಲ್ಲಿ ಬಿಸಿಯೂಟ ಅಡುಗೆ ತಯಾರಕರ ಗೌರವಧನ 300 ರೂ.ಗೆ ಹೆಚ್ಚಿಸಲಾಗುವುದು ಎಂದು ಹೇಳಿದ್ದು, ಬಿಟ್ಟರೆ, ಉಳಿದ ಯಾವ ಕಾರ್ಯಕ್ರಮಗಳಿಗೂ ಇಂತಿಷ್ಟು ಅನುದಾನ ಎಂದು ನಿಗದಿಪಡಿಸಿಲ್ಲ.

ಕೃಷಿ ಪರ ಬಜೆಟ್‌: ಕೃಷ್ಣ ಭೈರೇಗೌಡ ವಿಶ್ವಾಸ ಕಲಬುರಗಿ: ಮಾ. 15ರಂದು ಕಾಂಗ್ರೆಸ್‌ ಸರ್ಕಾರದ ಕೊನೇ ಬಜೆಟ್‌ 
ಮಂಡನೆಯಾಗಲಿದ್ದು, ಇದರಲ್ಲಿ ಕೃಷಿ ಪರ ಬಜೆಟ್‌ ಬಗ್ಗೆ ಹೆಚ್ಚಿನ ವಿಶ್ವಾಸ ಹೊಂದಲಾಗಿದೆ ಎಂದು ಕೃಷಿ ಸಚಿವ ಕೃಷ್ಣ
ಭೈರೇಗೌಡ ಹೇಳಿದರು. ಜಿಲ್ಲೆ ಯ ಫರಹಾಬಾದ ಹೋಬಳಿಯಲ್ಲಿ ಶುಕ್ರವಾರ ಕೃಷಿ ಹೊಂಡ ನಿರ್ಮಾಣ ಕಾಮಗಾರಿ ವೀಕ್ಷಿಸಿ, ಕೃಷಿ
ಯಂತ್ರಧಾರೆ ಕೇಂದ್ರ ಉದ್ಘಾಟಿಸಿ ಮಾತನಾಡಿ, ಕೃಷಿಗೆ ಉತ್ತೇಜನ ನೀಡಲು ಹೆಚ್ಚಿನ ಅನುದಾನ  ಹಾಗೂ ಒಳ್ಳೆಯ ಕಾರ್ಯಗಳನ್ನು ರೂಪಿಸುವ ಬಗ್ಗೆ ಇಲಾಖೆಯಿಂದ ಮುಖ್ಯ ಮಂತ್ರಿಗಳಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಕೃಷಿಪರ ಬಜೆಟ್‌ನಲ್ಲಿ ಹೆಚ್ಚಿನ ಅಂಶಗಳಿರಲಿವೆ ಎಂದು ತಿಳಿಸಿದರು. 

ರಫೀಕ್‌ ಅಹ್ಮದ್‌

Advertisement

Udayavani is now on Telegram. Click here to join our channel and stay updated with the latest news.

Next