ವಿಧಾನಸಭೆ: ಆರೋಗ್ಯ ಇಲಾಖೆಯಲ್ಲಿ 10 ವರ್ಷ ಮತ್ತು ಅದಕ್ಕಿಂತ ಹೆಚ್ಚು ಅವಧಿ ಒಂದೇ ಕಡೆ ಠಿಕಾಣಿ ಹೂಡಿರುವ ವೈದ್ಯರು ಮತ್ತು ಇತರೆ ಸಿಬ್ಬಂದಿಯನ್ನು ಬೇರೆಡೆ ಕಡ್ಡಾಯವಾಗಿ ವರ್ಗಾವಣೆ ಮಾಡಲು ಅನುಕೂಲವಾಗುವಂತೆ ವರ್ಗಾವಣೆ ಮಿತಿಯನ್ನು ಶೇ.5ರಿಂದ 15ಕ್ಕೆ ಏರಿಸುವ ವಿಧೇಯಕಕ್ಕೆ ವಿಧಾನಸಭೆ ಅನುಮೋದನೆ ನೀಡಿದೆ.
ಈ ಕುರಿತಂತೆ ಆರೋಗ್ಯ ಸಚಿವ ರಮೇಶ್‌ಕುಮಾರ್ ಮಂಡಿಸಿದ ರಾಜ್ಯ ಸಿವಿಲ್ ಸೇವೆಗಳ(ವೈದ್ಯಾಧಿಕಾರಿಗಳು ಮತ್ತು ಇತರೆ ಸಿಬ್ಬಂದಿಯ ವರ್ಗಾವಣೆ ನಿಯಂತ್ರಣ) ತಿದ್ದುಪಡಿ ವಿಧೇಯಕಕ್ಕೆ ಸದನ ಮಂಗಳವಾರ ಸರ್ವಾನುಮತದ ಅಂಗೀಕಾರ ನೀಡಿತು.
ವಿಧೇಯಕವನ್ನು ಪರ್ಯಾವಲೋಚನೆಗೆ ಮಂಡಿಸಿದ ಸಚಿವ ರಮೇಶ್ ಕುಮಾರ್, ಸರ್ಕಾರ ಗ್ರಾಮೀಣ ಪ್ರದೇಶದಲ್ಲಿ ವೈದ್ಯರು ಮತ್ತು ಸಿಬ್ಬಂದಿ ಭರ್ತಿಗೆ ಕ್ರಮ ಕೈಗೊಳ್ಳುತ್ತಿದ್ದರೂ ಕೆಲವರು ಪ್ರಭಾವ ಬಳಸಿ ನಗರ ಅಥವಾ ಪಟ್ಟಣ ಪ್ರದೇಶಗಳಲ್ಲೇ ಉಳಿದುಕೊಳ್ಳುತ್ತಾರೆ. ಈ ಸಮಸ್ಯೆ ಬಗೆಹರಿಸಲು ಹತ್ತು ವರ್ಷ ಅಥವಾ ಅದಕ್ಕಿಂತ ಹೆಚ್ಚು ಅವಧಿ ಒಂದೇ ಕಡೆ ಗೂಟ ಹೊಡೆದುಕೊಂಡಿರುವವರನ್ನು ವರ್ಗಾವಣೆ ಮಾಡಲು ಸರ್ಕಾರ ನಿರ್ಧರಿಸಿದೆ, ಪ್ರಸ್ತುತ ವರ್ಗಾವಣೆ ಮಿತಿ ಇರುವುದರಿಂದ ಹತ್ತು ವರ್ಷ ಮತ್ತು ಅದಕ್ಕಿಂತ ಹೆಚ್ಚು ವರ್ಷ ಒಂದೇ ಕಡೆ ಇರುವವರನ್ನು ವರ್ಗಾಯಿಸಲು ಸಾಧ್ಯವಾಗುತ್ತಿಲ್ಲ. ಅದಕ್ಕಾಗಿ ವರ್ಗಾವಣೆ ಮಿತಿಯನ್ನು ಶೇ.15ಕ್ಕೆ ಹೆಚ್ಚಿಸಲು ವಿಧೇಯಕದಲ್ಲಿ ಅವಕಾಶ ಮಾಡಿಕೊಡಲಾಗುತ್ತಿದೆ ಎಂದು ವಿವರಿಸಿದರು.
ವಿಧೇಯಕದ ಕುರಿತಂತೆ ವಿಶ್ವೇಶ್ವರ ಹೆಗಡೆ ಕಾಗೇರಿ ಮಾತನಾಡಿ, ಗ್ರಾಮಾಂತರ ಆಸ್ಪತ್ರೆಗಳಲ್ಲಿ ವೈದ್ಯರಿಗಿಂತ ನರ್ಸ್‌ಗಳು, ಕೆಳ ಹಂತದ ಸಿಬ್ಬಂದಿ ಹಿಡಿತವೇ ಹೆಚ್ಚಾಗಿದೆ. ಒಟ್ಟಾರೆ ವ್ಯವಸ್ಥೆಯನ್ನು ಸರಿಪಡಿಸಬೇಕೆಂದು ಸಲಹೆ ನೀಡಿದರು. ಮಧ್ಯಪ್ರವೇಶಿಸಿದ ಕಾಂಗ್ರೆಸ್‌ನ ಶಿವಾನಂದ ಪಾಟೀಲ್, ಗ್ರಾಮೀಣ ಪ್ರದೇಶಕ್ಕೆ ವೈದ್ಯರು ಬರುತ್ತಿಲ್ಲ ಎಂದು ಆರೋಪ ಮಾಡುವುದು ಸರಿಯಲ್ಲ. ಹೆಚ್ಚು ವೇತನ ನೀಡಿದರೆ ಅವರು ಗ್ರಾಮೀಣ ಪ್ರದೇಶಕ್ಕೆ ಬರುತ್ತಾರೆ ಎಂದಾಗ ಅಸಮಾಧಾನಗೊಂಡ ಸಚಿವ ರಮೇಶ್‌ಕುಮಾರ್, ಸರ್ಕಾರ ವೈದ್ಯರಿಗೆ ಕಡಿಮೆ ವೇತನ ನೀಡುತ್ತಿಲ್ಲ.
ಅಲ್ಲದೆ, ನಮಗೆ ವೈದ್ಯರ ಕೊರತೆಯೂ ಹೆಚ್ಚಿಲ್ಲ. ಸದ್ಯ ಅಗತ್ಯವಿರುವುದು ತಜ್ಞ ವೈದ್ಯರಷ್ಟೇ. ಉಳಿದ ಸಿಬ್ಬಂದಿ ಭರ್ತಿ
ಮಾಡಲಾಗುತ್ತಿದೆ ಎಂದರು. ನಂತರ ವಿಧೇಯಕವನ್ನು ಸ್ಪೀಕರ್ ಕೆ.ಬಿ.ಕೋಳಿವಾಡ ಅವರು ಮತಕ್ಕೆ ಹಾಕಿದಾಗ ಸದನ
ಧ್ವನಿಮತದಿಂದ ಅಂಗೀಕಾರ ನೀಡಿತು.