ಶಿರಸಿ: ನಾಲ್ಕು ಜನರಿಗೆ ಅನುಕೂಲ ಆಗಬೇಕಿದ್ದ ಇಲಾಖೆ ಸಿಬ್ಬಂದಿಗೆ ನೆರವಾಗಬೇಕಿದ್ದ ಕಟ್ಟಡಗಳು ಅನಾಥವಾಗಿ ಶಿಥಿಲವಾಗುತ್ತಿವೆ. ಇಲಾಖೆ ವ್ಯವಸ್ಥೆಗೆ ಕನ್ನಡಿಯಂತಿರುವಈ ಕಟ್ಟಡಗಳ ತೆರವಿಗೆ ಇನ್ನೂ ಮುಹೂರ್ತ ಕೂಡಿಬಂದಿಲ್ಲ. ಹೆಗಡೆಕಟ್ಟಾ ಪ್ರಾಥಮಿಕ ಆರೋಗ್ಯ ಕೇಂದ್ರದ ಸಿಬ್ಬಂದಿ ವಸತಿಗೃಹ ಕಟ್ಟಡಗಳ ಸ್ಥಿತಿ ಇದಾಗಿದೆ.
ಐದಾರು ದಶಕಗಳ ಹಿಂದೆ ಆರೋಗ್ಯ ಕೇಂದ್ರ ಸ್ಥಾಪನೆಯಸಂದರ್ಭದಲ್ಲಿಯೇ ಕಟ್ಟಲಾಗಿರುವ ಹತ್ತು ವಸತಿ ಗೃಹ ಕಟ್ಟಡಗಳು ಇದ್ದು ಇವುಗಳಲ್ಲಿ ಎರಡು ಹೊರತುಪಡಿಸಿ ಉಳಿದವು ಶಿಥಿಲವಾಗಿದೆ. ಅಪಾಯದ ಕರಗಂಟೆ ಬಾರಿಸುತ್ತಿದೆ. ಅನುದಾನ ಅಲಭ್ಯತೆ ಮತ್ತಿತರ ತಾಂತ್ರಿಕ ಕಾರಣದಿಂದ ಈ ಕೆಲಸ ನೆನಗುದಿಗೆ ಬಿದ್ದಿದೆ.
ತಾಲೂಕಿನ ಪ್ರಮುಖ ಗ್ರಾಮೀಣ ಪ್ರದೇಶದಲ್ಲಿ ಒಂದಾದ ಹೆಗಡೆಕಟ್ಟಾದ ವೈದ್ಯರ, ಸಿಬಂದಿ ವಸತಿ ಕಟ್ಟಡ ಇದಾಗಿದೆ. ವೈದ್ಯಾಧಿಕಾರಿ ಸೇರಿದಂತೆ ಮೂವರು ಸಿಬ್ಬಂದಿ ಕಾರ್ಯ ಮಾಡುತ್ತಾರೆ. ನಿತ್ಯ ಸುತ್ತಮುತ್ತಲಿನ ಹಳ್ಳಿಗಳ 50ಕ್ಕೂ ಹೆಚ್ಚು ಮಂದಿ ಚಿಕಿತ್ಸೆಗೆ ಬರುತ್ತಾರೆ. ಇಷ್ಟೊಂದು ಸಂಖ್ಯೆಯಲ್ಲಿ ರೋಗಿಗಳು ಬರುವ ಆಸ್ಪತ್ರೆ ಸಿಬ್ಬಂದಿಗೆ ವ್ಯವಸ್ಥಿತ ವಸತಿಗೃಹವಿಲ್ಲ. ಎರಡು
ಹಳೆಯ ಕಟ್ಟಡದಲ್ಲಿ ಕಷ್ಟಪಟ್ಟು ವಸತಿ ಮಾಡುತ್ತಿದ್ದಾರೆ. ಮನೆಯ ಪಕ್ಕವೇ ಪಾಳು ಬಿದ್ದಿರುವ ಎಂಟು ಕಟ್ಟಡಗಳು ಭಯ ಆವರಿಸುವಂತಿದೆ. ಕಿಟಕಿ, ಬಾಗಿಲು ಇಲ್ಲದ, ಆಗಲೋ ಈಗಲೋ ಬೀಳುವಂತಿರುವ, ಸುತ್ತಲೂ ಗಿಡಗಂಟಿಗಳು ಬೆಳೆದು ನಿಂತಿರುವ ಪಾಳು ಕಟ್ಟಡಗಳು ಕೆಲವರಿಗೆ ಮೋಜು ಮಸ್ತಿನಡೆಸುವುದಕ್ಕೆ ಕಾರಣವಾಗುವಂತಿದೆ.
ಹಾವು, ಹರಣೆಗಳ ವಾಸ ಸ್ಥಾನವಾಗುವಂತಾಗಿದೆ. ವರ್ಷದ ಹಿಂದೆ ಜಿಲ್ಲಾ ಪಂಚಾಯತ್ ಇಂಜಿನೀಯರಿಂಗ್ ವಿಭಾಗದಿಂದ ಇಲ್ಲಿನ ಪಾಳು ಬಿದ್ದ ಮೂರು ವಸತಿಗೃಹ ತೆರವಿಗೆಪ್ರಸ್ತಾವನೆ ಕಳುಹಿಸಲಾಗಿತ್ತು. ಅದಕ್ಕಾಗಿ 50ಸಾವಿರ ರೂ.ಮಂಜೂರಾಗಿದೆ. ಇನ್ನಷ್ಟೇ ಆರೋಗ್ಯ ಇಲಾಖೆಯಿಂದ ಅನುಮತಿ ದೊರೆಯಬೇಕಿದೆ. ಕೇವಲ 50 ಸಾವಿರ ರೂ. ಮಾತ್ರ ಬಿಡುಗಡೆ ಆಗಿದ್ದರಿಂದ ಒಂದೆರಡು ವಸತಿಗೃಹ ಕಟ್ಟಡ ಮಾತ್ರ ತೆರವುಗೊಳಿಸಬಹುದು. ಉಳಿದವುಗಳಿಗೆ ಏನು ಎಂಬ ಪ್ರಶ್ನೆ ಕೂಡ ಎದುರಾಗಿದೆ.