Advertisement

Kapu; ಕೊರಗರ ಹಾಡಿಗಳಲ್ಲಿ ಆರೋಗ್ಯ ತಪಾಸಣೆ

12:58 AM Jan 16, 2024 | Team Udayavani |

ಕಾಪು: ಉಡುಪಿ ಜಿಲ್ಲೆಯಲ್ಲಿ ಆದಿವಾಸಿ ಕೊರಗ ಸಮುದಾಯದ 283 ಹಾಡಿಗಳಿದ್ದು 8,500ಕ್ಕೂ ಅಧಿಕ ಮಂದಿ ವಾಸಿಸುತ್ತಿದ್ದಾರೆ. ಕೆಲವರಲ್ಲಿ ಸಿಕಲ್‌ಸೆಲ್‌ ಅನೀಮಿಯ (ಅಪೌಷ್ಟಿಕತೆ) ಕಂಡುಬಂದಿದ್ದು ಮಕ್ಕಳು ಅಸಹಜ ಸಾವನ್ನಪ್ಪುತ್ತಿದ್ದಾರೆ. ಈ ಬಗ್ಗೆ ಪರಿಶೀಲಿಸಲು ಎಲ್ಲ ವಯೋ ಮಾನದವರ ಆರೋಗ್ಯ ತಪಾಸಣೆ ಮಾಡುವ ಕಾರ್ಯ ಎಲ್ಲ ಹಾಡಿಗಳಲ್ಲಿ ಕೈಗೊಳ್ಳಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಕೆ. ವಿದ್ಯಾ ಕುಮಾರಿ ಹೇಳಿದರು.

Advertisement

ಪ್ರಧಾನಮಂತ್ರಿ ಜನ್‌ ಜಾತಿ ಆದಿವಾಸಿ ನ್ಯಾಯ ಮಹಾ ಅಭಿ ಯಾನ ಯೋಜನೆಯಡಿ ಉಡುಪಿ ಜಿಲ್ಲಾಡಳಿತ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಐಟಿಡಿಪಿ ಉಡುಪಿ, ಮಜೂರು ಗ್ರಾ.ಪಂ. ಸಂಯುಕ್ತ ಆಶ್ರಯದಲ್ಲಿ ಪಾದೂರು ವಿಶ್ವನಾಥ ಲಚ್ಚಿಲ್‌ನಲ್ಲಿ ಸೋಮವಾರ ಆಯೋಜಿಸಲಾಗಿದ್ದ ಆಯುಷ್ಮಾನ್‌ ಭಾರತ್‌ ಪ್ರಧಾನಮಂತ್ರಿ ಜನ ಆರೋಗ್ಯ ಯೋಜನೆ – ಮುಖ್ಯ ಮಂತ್ರಿಗಳ ಆರೋಗ್ಯ ಕರ್ನಾಟಕ ಯೋಜನೆ ಸವಲತ್ತು ವಿತರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಕೇಂದ್ರದ ಸೂಚನೆಯಂತೆ ಸಮುದಾಯ ಸೌಲಭ್ಯಗಳನ್ನು ಒದಗಿಸಲು ಜಿಲ್ಲಾದ್ಯಂತ ಕೊರಗ ಸಮುದಾಯದ ಹಾಡಿಗಳಲ್ಲಿ ಸರ್ವೇ ನಡೆಸಲಾಗುವುದು. ಫಲಿತಾಂಶ ಆಧರಿಸಿ ಮುಂದೆ ಯೋಜನೆಗಳನ್ನು ರೂಪಿಸಲಾಗುವುದು. ಈ ಬಗ್ಗೆ ಹತ್ತತ್ತು ಹಾಡಿಗಳಿಗೊಬ್ಬ ನೋಡೆಲ್‌ ಅಧಿಕಾರಿಯನ್ನು ನಿಯೋಜಿಸಿ ಅವರ ಸ್ಥಿತಿಗತಿಗಳ ಬಗ್ಗೆ ಅವಲೋಕಿಸಲಾಗುತ್ತಿದೆ ಎಂದರು.

ಅಭಿವೃದ್ಧಿಗೆ ಪಣ
ಕಾರ್ಯಕ್ರಮ ಉದ್ಘಾಟಿಸಿ, ಸಂಚಾರಿ ವೈದ್ಯಕೀಯ ಘಟಕ ವಾಹನ ಲೋಕಾರ್ಪಣೆ ಹಾಗೂ ಆಯುಷ್ಮಾನ್‌ ಕಾರ್ಡುಗಳನ್ನು ವಿತರಿಸಿದ ಶಾಸಕ ಗುರ್ಮೆ ಸುರೇಶ್‌ ಶೆಟ್ಟಿ ಮಾತನಾಡಿ, ನಮ್ಮ ನೆಲದ ಮಣ್ಣಿನ ಮೂಲ ನಿವಾಸಿಗಳಾದ ಕೊರಗ ಜನಾಂಗದ ಸಂಖ್ಯೆ ಕ್ಷೀಣಿಸುತ್ತಿದೆ. ಅವರ ಆರೋಗ್ಯದ ಬಗ್ಗೆ ವಿಶೇಷ ಗಮನ ಹರಿಸುವ, ಕಾಳಜಿ ವಹಿಸುವ ಅಗತ್ಯವಿದೆ. ಸಮಾಜದ ಜನರಿಗೆ ಅಗತ್ಯವಿರುವ ಮೂಲ ಸೌಕರ್ಯ, ಸರಕಾರದ ಸವಲತ್ತುಗಳನ್ನು ರಾಜಕೀಯ ಮರೆತು ಅವರಿಗೆ ಒದಗಿಸಬೇಕಿದೆ. ಅಧಿಕಾರಿಗಳು ಕೂಡ ಸಮುದಾಯದ ಜನರ ಬೇಡಿಕೆಗಳಿಗೆ ಪೂರಕವಾಗಿ ತ್ವರಿತ ಸ್ಪಂದನೆ ನೀಡಬೇಕು ಎಂದರು.

ಮಜೂರು ಗ್ರಾ.ಪಂ. ಅಧ್ಯಕ್ಷ ಪ್ರಸಾದ್‌ ಶೆಟ್ಟಿ ವಳದೂರು ಅಧ್ಯಕ್ಷತೆ ವಹಿಸಿದ್ದರು. ಕಾಪು ತಾ.ಪಂ. ಕಾರ್ಯ ನಿರ್ವಹಣಾದಿಕಾರಿ ಜೇಮ್ಸ್‌ ಡಿ’ಸಿಲ್ವಾ, ತಾಲೂಕು ಆರೋಗ್ಯಾದಿಕಾರಿ ಡಾ| ವಾಸುದೇವ ಎಂ. ರಾವ್‌, ಕಾಪು ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾದಿಕಾರಿ ಡಾ| ರೋಶನಿ ಪೂಂಜ, ಮಜೂರು ಗ್ರಾ. ಪಂ. ಉಪಾಧ್ಯಕ್ಷೆ ಮಂಜುಳಾ ಆಚಾರ್ಯ, ಸದಸ್ಯೆ ವನಿತಾ ಉಪಸ್ಥಿತರಿದ್ದರು. ಡಾ| ಲತಾ ನಾಯಕ್‌ ಸ್ವಾಗತಿಸಿದರು. ಡಿಎಚ್‌ಒ ಡಾ| ಐ.ಪಿ. ಗಡಾದ್‌ ಪ್ರಸ್ತಾವನೆಗೈದರು. ಜಿಲ್ಲಾ ಅರೋಗ್ಯ ಶಿಕ್ಷಣಾಧಿಕಾರಿ ಶಶಿಧರ್‌ ಎಚ್‌. ನಿರ್ವಹಿಸಿದರು. ತಾಲೂಕು ಆರೋಗ್ಯ ಶಿಕ್ಷಣಾಧಿಕಾರಿ ಚಂದ್ರಕಲಾ ವಂದಿಸಿದರು.

Advertisement

ಉಡುಪಿ ಜಿಲ್ಲೆಯಾದ್ಯಂತ ಸಂಚಾರಿ ವೈದ್ಯಕೀಯ ಘಟಕದ ಮೂಲಕ ವಿಶೇಷ ದುರ್ಬಲ ಬುಡಕಟ್ಟು ಗುಂಪಿಗೆ ಸೇರಿದ ಕೊರಗ ಜನಾಂಗದವರು ಹೆಚ್ಚಾಗಿ ವಾಸಿಸುವ ಹಳ್ಳಿಗಳಿಗೆ ಭೇಟಿ ನೀಡಿ ಆವಶ್ಯಕ ಆರೋಗ್ಯ ಸೇವೆಗಳಾದ ಕ್ಷಯರೋಗ ತಪಾಸಣೆ, ಸಿಕಲ್‌ ಸೆಲ್‌ ಅನಿಮಿಯ ತಪಾಸಣೆ, ಡಯಾಲಿಸಿಸ್‌ ಸೇವೆ, ಮಧುಮೇಹ ಮತ್ತು ರಕ್ತದೊತ್ತಡ ಪರೀಕ್ಷೆ, ಆಯುಷ್ಮಾನ್‌ ಭಾರತ್‌ ಪ್ರಧಾನಮಂತ್ರಿ ಜನಆರೋಗ್ಯ ಯೋಜನೆ- ಮುಖ್ಯಮಂತ್ರಿಗಳ ಆರೋಗ್ಯ ಕರ್ನಾಟಕ ಯೋಜನೆ ಅಡಿ ಆಯುಷ್ಮಾನ್‌ ಕಾರ್ಡ್‌ ವಿತರಣೆ, ಗರ್ಭಿಣಿಯರ ಆರೋಗ್ಯ ತಪಾಸಣೆ ಮತ್ತು ಲಸಿಕೀಕರಣ ಮುಂತಾದ ಸೇವೆಗಳನ್ನು ಒದಗಿಸಲಾಗುತ್ತದೆ.
-ಡಾ| ಐ.ಪಿ. ಗಡಾದ್‌, ಡಿಎಚ್‌ಒ, ಉಡುಪಿ

Advertisement

Udayavani is now on Telegram. Click here to join our channel and stay updated with the latest news.

Next