ಬೆಂಗಳೂರು: ವಿಕ್ಟೋರಿಯಾ ಆಸ್ಪತ್ರೆ ಆವರಣದಲ್ಲಿ “ಹೆಲ್ತ್ ಕೇರ್ ಮ್ಯೂಸಿಯಂ’ ಸ್ಥಾಪಿಸಿ ವೈದ್ಯಕೀಯ ಶಿಕ್ಷಣದ ಕನಸು ಕಾಣುವ ಎಲ್ಲ ವಿದ್ಯಾರ್ಥಿಗಳಿಗೆ ಕಲಿಕಾ ತಾಣವಾಗಿಸುತ್ತೇವೆ ಎಂದು ಉಪಮುಖ್ಯಮಂತ್ರಿ ಡಾ. ಅಶ್ವತ್ಥನಾರಾಯಣ ತಿಳಿಸಿದರು.
ಮಂಗಳವಾರ ವಿಕ್ಟೋರಿಯಾ ಆಸ್ಪತ್ರೆ ಹಾಗೂ ಕಿದ್ವಾಯಿ ಆಸ್ಪತ್ರೆಗೆ ಭೇಟಿ ನೀಡಿ ಅಲ್ಲಿನ ವ್ಯವಸ್ಥೆ ಪರಿಶೀಲಿಸಿ ಮಾತನಾಡಿದ ಅವರು, ವಿಕ್ಟೋರಿಯಾ ಆಸ್ಪತ್ರೆ ಆವರಣದಲ್ಲಿ ಸಾವಿರ ಹಾಸಿಗೆ ಸಾಮರ್ಥ್ಯದ ಹೊಸ ಕಟ್ಟಡ ನಿರ್ಮಾಣವಾಗುತ್ತಿದ್ದು, ಅದರಲ್ಲಿ ಸೇವೆ ಆರಂಭಿಸಿದ ನಂತರ ವಿಕ್ಟೋರಿಯಾ ಆಸ್ಪತ್ರೆಯ ಹಳೆಯ ಕಲ್ಲು ಕಟ್ಟಡವನ್ನು ‘ಹೆಲ್ತ್ ಕೇರ್ ಮ್ಯೂಸಿಯಂ’ ಆಗಿ ಪರಿರ್ವತಿಸಲಾಗುವುದು.
ಮ್ಯೂಸಿಯಂನಲ್ಲಿ ಇಡಿ ವೈದ್ಯಕೀಯ ಶಿಕ್ಷಣ ವ್ಯವಸ್ಥೆಯ ಚಿತ್ರಣ ಕಟ್ಟಿಕೊಡಲಾಗುವುದು. ಹಿಂದಿನ ವೈದ್ಯಕೀಯ ತಂತ್ರಜ್ಞಾನ ಹಾಗೂ ಮುಂದಿನ ಆವಿಷ್ಕಾರಗಳ ಕುರಿತ ಮಾಹಿತಿ ಲಭ್ಯವಾಗಲಿದೆ. ವೈದ್ಯಕೀಯ ವಿದ್ಯಾರ್ಥಿಗಳಿಗೆ ಮ್ಯೂಸಿಯಂನಲ್ಲಿ 1 ತಿಂಗಳ ತರಬೇತಿಗೆ ಅವಕಾಶ ಕಲ್ಪಿಸಲಾಗುತ್ತದೆ ಎಂದರು.
ವಿದ್ಯಾರ್ಥಿಗಳ ಕಲಿಕೆ ಹಾಗೂ ಪ್ರಯೋಗಕ್ಕೆ ಅನುಕೂಲವಾಗುವಂತೆ ಎಲ್ಲ 17 ಮೆಡಿಕಲ್ ಕಾಲೇಜುಗಳಿಗೆ ಸ್ಕಿಲ್ ಲ್ಯಾಬ್ ವ್ಯವಸ್ಥೆ ಒದಗಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು. ವಿದ್ಯಾರ್ಥಿಗಳು ನೇರವಾಗಿ ರೋಗಿಗಳ ಮೇಲೆ ಪ್ರಯೋಗ ಮಾಡುವುದಿಕ್ಕಿಂತ ಸ್ಕಿಲ್ ಲ್ಯಾಬ್‌ಗಳಲ್ಲಿ ಮ್ಯಾನಿಕ್ವಿನ್ಸ್ ಮೇಲೆ ಪ್ರಯೋಗ ನಡೆಸಿ, ಕಲಿಕೆಯ ಗುಣಮಟ್ಟ ಹೆಚ್ಚಿಸಿಕೊಳ್ಳಬಹುದು ಎಂದು ಹೇಳಿದರು.
ದುರಸ್ತಿಗೆ ಸೂಚನೆ: ಆಸ್ಪತ್ರೆಗೆ ಬರುವ ರಸ್ತೆಯನ್ನು ದುರಸ್ತಿಗೊಳಿಸಲು ಬಿಬಿಎಂಪಿಗೆ ಈ ಕೂಡಲೇ ಆದೇಶಿಸುತ್ತೇನೆ. ಜತೆಗೆ, ಆಸ್ಪತ್ರೆ ಒಳಗಿನ ಪಾದಚಾರಿ ರಸ್ತೆಯನ್ನು ಸರಿಪಡಿಸಿ ಕ್ಯಾಂಪಸ್‌ನಲ್ಲಿ ಸುಲಭವಾಗಿ ಓಡಾಡುವಂತಾಗಬೇಕು. ಎಲ್ಲ ಅಗತ್ಯ ಸೌಲಭ್ಯ ಕಲ್ಪಿಸುವ ಮೂಲಕ ಆಸ್ಪತ್ರೆಗೆ ಬರುವ ರೋಗಿಗಳಿಗೆ ವಿಶ್ವಾಸ, ನೆಮ್ಮದಿಯ ವಾತಾವರಣ ಸೃಷ್ಟಿಸಿ, ಉತ್ತಮ ಆರೋಗ್ಯ ಸೇವೆ ಒದಗಿಸಲು ಸೂಚಿಸಿದ್ದೇನೆ.
ಬೆಂಗಳೂರು ಮೆಡಿಕಲ್ ಕಾಲೇಜಿನಲ್ಲಿ ಪಾರ್ಕಿಂಗ್ ವ್ಯವಸ್ಥೆ ಸುಧಾರಣೆ ಆಗಬೇಕು. ಕ್ಯಾಂಪಸ್ ಒಳಗೆ ಯಾವುದೇ ವಾಹನ ಬರಬಾರದು. ಅದಕ್ಕಾಗಿ ಆಸ್ಪತ್ರೆಯ ಪ್ರವೇಶ ದ್ವಾರದ ಬಳಿಯೇ ಬಹುಮಹಡಿ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಲು ಸೂಚಿಸಿದ್ದೇನೆ ಎಂದು ತಿಳಿಸಿದರು.
ಅವ್ಯವಸ್ಥೆಗೆ ಅಸಮಾಧಾನ: ಆಸ್ಪತ್ರೆಯ ರಕ್ತನಿಧಿ ಕೇಂದಕ್ಕೆ ಭೇಟಿ ನೀಡಿದ ಸಚಿವರು ಅಲ್ಲಿನ ಹಳೆಯ ಬೋರ್ಡ್ ದುಸ್ಥಿತಿ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು. ಅಲ್ಲಿನ ಅಧಿಕಾರಿಗಳಿಗೆ “ಸರ್ಕಾರಿ ಆಸ್ಪತ್ರೆ ಬಗ್ಗೆ ಇರುವ ಧೋರಣೆ ಹೋಗಲಾಡಿಸಿ. ರಕ್ತದ ಮಾದರಿ ಸಂಗ್ರಹಿಸಿ ಅದನ್ನು ಸಂಸ್ಕರಿಸುವ ವ್ಯವಸ್ಥೆ ಹೆಚ್ಚು ಮಾಡಿ’ ಎಂದು ಸೂಚಿಸಿದರು. ಬಳಿಕ ವಾರ್ಡ್‌ಗಳಿಗೆ ತೆರಳಿ ರೋಗಿಗಳು ಹಾಗೂ ಅವರ ಕುಟುಂಬದವರನ್ನು ಭೇಟಿ ಮಾಡಿ ಕುಂದುಕೊರತೆ ವಿಚಾರಿಸಿದರು.