ಬೆಂಗಳೂರು: ಉದ್ಯೋಗ ಭದ್ರತೆ, ಆರೋಗ್ಯ ಕ್ಷೇತ್ರಕ್ಕೆ ನಿಗದಿಪಡಿಸಿರುವ ಅನುದಾನ ಹೆಚ್ಚಿಸುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಆರೋಗ್ಯ ಇಲಾಖೆಯ ಗುತ್ತಿಗೆ ನೌಕರರ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಪ್ರತಿಭಟಿಸಲಾಯಿತು. ನಗರದ ಮೌರ್ಯ ವೃತ್ತದಲ್ಲಿ ಪ್ರತಿಭಟನೆ ನಡೆಸಿದ ನೂರಾರು ಗುತ್ತಿಗೆ ನೌಕರರು ತಮ್ಮ ಬೇಡಿಕೆಗಳ ಈಡೇರಿಕೆಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಮುಂದಾಗಬೇಕು ಎಂದು ಆಗ್ರಹಿಸಿದರು.
ಹರ್ಯಾಣ ಮತ್ತು ದೆಹಲಿ ರಾಜ್ಯ ಸರ್ಕಾರಗಳು ತಮ್ಮಲ್ಲಿ ಕೆಲಸ ಮಾಡುವ ಗುತ್ತಿಗೆ ಆಧಾರಿತ ನೌಕರರ ವೇತನವನ್ನು ದುಪ್ಪಟ್ಟು ಮಾಡಿದ್ದು, ಅದೇ ಮಾದರಿಯಲ್ಲಿ ರಾಜ್ಯ ಸರ್ಕಾರವೂ ಸಹ ಗುತ್ತಿಗೆ ನೌಕರರ ವೇತನ ಪರಿಷ್ಕರಿಸಬೇಕು. ಇದರೊಂದಿಗೆ ಸಿಬ್ಬಂದಿಗೆ ಅಗತ್ಯ ಸೌಕರ್ಯ ಹಾಗೂ ಕೆಲಸ ಮಾಡಲು ಆರೋಗ್ಯಕರ ವಾತಾವರಣ ನಿರ್ಮಿಸಬೇಕೆಂದರು.
ಸಂಘದ ಅಧ್ಯಕ್ಷ ಡಾ.ವಾಸು ಮಾತನಾಡಿ, ಸರ್ಕಾರಿ ನೌಕರರಿಗೆ ನೀಡುವಂತಹ ಜ್ಯೋತಿ ಸಂಜೀವಿನಿ, ವೈದ್ಯಕೀಯ ಯೋಜನೆಗಳನ್ನು ಎಲ್ಲಾ ಗುತ್ತಿಗೆ ನೌಕರರಿಗೂ ವಿಸ್ತರಿಸಬೇಕು. ಜತೆಗೆ ಕಾರಣ ನೀಡದೆ ಕೆಲಸದಿಂದ ತೆಗೆದಿರುವ ಗುತ್ತಿಗೆ ನೌಕರರನ್ನು ಮರು ನೇಮಿಸಿಕೊಳ್ಳಬೇಕು ಎಂದರು.
ಗುತ್ತಿಗೆ ನೌಕರರು ಪ್ರತಿಭಟನೆ ನಡೆಸಿದರಿಂದ ಗುರುವಾರ ಆರೋಗ್ಯ ಇಲಾಖೆಯ ರಾಷ್ಟ್ರೀಯ ಆರೋಗ್ಯ ಮಿಷನ್ ಕಚೇರಿ ಸೇರಿದಂತೆ ಹೆಚ್ಚಿನ ಸಂಖ್ಯೆಯ ಗುತ್ತಿಗೆ ನೌಕರರು ಕೆಲಸ ಮಾಡುವ ಆರೋಗ್ಯ ಇಲಾಖೆ ಕಚೇರಿಗಳು ಬಿಕೋ ಎನ್ನುತ್ತಿದ್ದವು. ಆದರೆ, ತುರ್ತು ಸೇವೆ 108 ಆ್ಯಂಬುಲೆನ್ಸ್‌ಗಳು ಎಂದಿನಂತೆಯೇ ಸಂಚಾರಿಸಿದವು.
ಸಾರ್ವಜನಿಕರ ಪರದಾಟ: ಕೆ.ಸಿ.ಜನರಲ್ ಆಸ್ಪತ್ರೆಗೆ ಬರುತ್ತಿದ್ದ ಸಾರ್ವಜನಿಕರಿಗೆ ಅಲ್ಲಿನ ಸಿಬ್ಬಂದಿ ಹೊರರೋಗಿ ವಿಭಾಗ ಸೇವೆಯಿಲ್ಲವೆಂದು ವಾಪಸ್ ಕಳುಹಿಸುತ್ತಿದ್ದರಿಂದ ಆಸ್ಪತ್ರೆಗೆ ಚಿಕಿತ್ಸೆಗಾಗಿ ಬಂದ ಸಾರ್ವಜನಿಕರು ತೊಂದರೆ ಅನುಭವಿಸುವಂತಾಯಿತು. ಇದರೊಂದಿಗೆ ಆರೋಗ್ಯ ಕಾರ್ಡ್ ವಿತರಣೆ ಮಾಡುವುದು ಸ್ಥಗಿತಗೊಳಿಸಿದರಿಂದ ಆರೋಗ್ಯ ಕಾರ್ಡ್ ಪಡೆಯಲು ಬಂದ ಜನರು ವಾಪಸ್ ಹೋದರು.
ಆರೋಗ್ಯ ಇಲಾಖೆಯಲ್ಲಿ ಶೇ.70ರಷ್ಟು ಕಾಯಂ ನೌಕರರು ಇರುವುದರಿಂದ ಪ್ರತಿಭಟನೆಯಿಂದ ಯಾವುದೇ ತೊಂದರೆಯಾಗಿಲ್ಲ. ಕಾಯಂ ನೌಕರರಿಗೆ 2 ಗಂಟೆ ಹೆಚ್ಚುವರಿಯಾಗಿ ಕೆಲಸ ಮಾಡುವಂತೆ ತಿಳಿಸಲಾಗಿತ್ತು. ಕಾಯಮಾತಿ ನಿರ್ಧಾರ ಸರ್ಕಾರಕ್ಕೆ ಬಿಟ್ಟಿದ್ದು.
-ಪಂಕಜ್ ಕುಮಾರ್ ಪಾಂಡೆ, ಆರೋಗ್ಯ ಇಲಾಖೆ ಆಯುಕ್ತ