ಬೆಂಗಳೂರು: ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯದ ಸ್ವಾಯತ್ತತೆಗೆ ಧಕ್ಕೆ ತುರುತ್ತಿರುವ ರಾಜ್ಯ ಸರ್ಕಾರದ ನಿಲುವನ್ನು ಖಂಡಿಸಿ ಅಖೀಲ ಭಾರತೀಯ ವಿದ್ಯಾರ್ಥಿ ಪರಿಷತ್ ಕಾರ್ಯಕರ್ತರು ಹಾಗೂ ಆರೋಗ್ಯ ವಿವಿ ವಿದ್ಯಾರ್ಥಿಗಳು ಸೋಮವಾರ ನಗರದ ಮೌರ್ಯ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು.
ಸಮಸ್ಯೆಗೆ ಪರಿಹಾರ ನೀಡುವಂತೆ ರಾಜ್ಯಪಾಲರಿಗೆ ಮನವಿ ಸಲ್ಲಿಸಲು ಹೊರಟಿದ್ದ ಪ್ರತಿಭಟನಾಕಾರರನ್ನು ತಡೆದ ಪೊಲೀಸರು, ವಿದ್ಯಾರ್ಥಿಗಳು ಮತ್ತು ಎಬಿವಿಪಿ ಕಾರ್ಯಕರ್ತರನ್ನು ಬಂಧಿಸಿ, ಬಿಡುಗಡೆ ಮಾಡಿದರು.
ಎಬಿವಿಪಿ ರಾಜ್ಯ ಸಂಘಟನಾ ಕಾರ್ಯದರ್ಶಿ ಸ್ವಾಮಿ ಮರಳಾಪುರ ಮಾತನಾಡಿ, ಆರೋಗ್ಯ ವಿಜ್ಞಾನ ವಿವಿಯ ಕ್ಯಾಂಪಸ್ ಅನ್ನು ವಿವಾದಿತ ಭೂಮಿಯಾದ ಅರ್ಚಕರ ಹಳ್ಳಿಗೆ ಸ್ಥಳಾಂತರಿಸಲು ಸರ್ಕಾರ ಏಕಪಕ್ಷೀಯ ನಿರ್ಧಾರ ಕೈಗೊಂಡಿದೆ. ಸಂಬಂಧಿಸಿದವರೊಂದಿಗೆ ಯಾವುದೇ ಚರ್ಚೆ ಮಾಡದೆ, ಶಿಕ್ಷಣ ತಜ್ಞರ ಸಲಹೆ ಸೂಚನೆ ಪಡೆಯದೆ ರಾಜ್ಯ ಸರ್ಕಾರ ತೆಗೆದುಕೊಂಡಿರುವ ಈ ನಿರ್ಧಾರ ಭ್ರಷ್ಟಾಚಾರಕ್ಕೆ ದಾರಿ ಮಾಡಿಕೊಟ್ಟಂತಿದೆ ಎಂದು ದೂರಿದರು.
ಆರೋಗ್ಯ ವಿಜ್ಞಾನ ವಿವಿಯ ಕುಲಪತಿಗಳ ಹುದ್ದೆ ಖಾಲಿ ಇದೆ. ನಿಯಾಮಾವಳಿಗಳನ್ನು ಗಾಳಿಗೆ ತೂರಿ, ಶೈಕ್ಷಣಕ ಉದ್ದೇಶಕ್ಕೆ ವಿದ್ಯಾರ್ಥಿಗಳಿಂದ ಸಂಗ್ರಹಿಸಿರುವ ಹಣದಲ್ಲಿ ಹೊಸ ಕ್ಯಾಂಪಸ್ ನಿರ್ಮಿಸಲು ಮುಂದಾಗಿದ್ದಾರೆ. ಇದರಿಂದ ವಿವಿಯ ಸಂಶೋಧನಾ ಹಾಗೂ ಶೈಕ್ಷಣಕ ಉನ್ನತಿಗೆ ಧಕ್ಕೆಯಾಗುವ ಸಾಧ್ಯತೆ ಇದೆ ಎಂದು ಆತಂಕ ವ್ಯಕ್ತಪಡಿಸಿದರು.
ವಿವಿಯ ಹೊಸ ಜಾಗವು 216.09 ಎಕರೆಯಿದ್ದು, ಈ ಜಮೀನಿಗೆ ಸಂಬಂಧಿಸಿದಂತೆ ನ್ಯಾಯಾಲಯದಲ್ಲಿ ವಿಚಾರಣೆ ಬಾಕಿ ಇದೆ. ಸರ್ಕಾರ ವಿದ್ಯಾರ್ಥಿಗಳ ಹಣದಲ್ಲಿ ಹೆಲ್ತ್‌ಸಿಟಿ ನಿರ್ಮಾಣ ಮಾಡಲು ಹೊರಟಿರುವುದು ಅವೈಜ್ಞಾನಿಕ. ಆಡಳಿತ ಭವನ ಹಾಗೂ ಹೆಲ್ತ್ ಸಿಟಿ ನಿರ್ಮಾಣಕ್ಕಾಗಿ ಗ್ಲೋಬಲ್ ಟೆಂಡರ್ ಕರೆಯಲು ಸಿಂಡೀಕೆಟ್ ಸಭೆ ತಿರ್ಮಾನಿಸಿದ್ದರೂ ರಾಜ್ಯ ಸರ್ಕಾರ ಖಾಸಗಿ ಕಂಪನಿಗೆ ಟೆಂಡರ್ ನೀಡಿದೆ.
ರಾಜ್ಯಪಾಲರು ಮಧ್ಯಪ್ರವೇಶಿಸಿ ಈ ಅಕ್ರಮ ತಡೆಯಬೇಕು ಮತ್ತು ವಿವಿಯ ಸ್ವಾಯತ್ತತೆ ಉಳಿಸಿಕೊಡಬೇಕು ಎಂದು ಆಗ್ರಹಿಸಿದರು. ಎಬಿವಿಪಿ ಪ್ರಮುಖರಾದ ಸುನಿಲ್ ಪ್ರಸಾಸ್, ಡಾ. ಅಮಿತ್ ಹೆಗಡೆ, ಡಾ. ಅಕ್ಷಯ್, ಜಯಪ್ರಕಾಶ, ಸುರ್ಜಿತ್, ಪ್ರಶಾಂತ, ಮಂಜುನಾಥ ರೆಡ್ಡಿ, ಚರಣ್ ರೆಡ್ಡಿ, ಗುರುಪ್ರಸಾದ, ತೇಜ, ವೆಂಕಟೇಶ, ಕನ್ನಿಕಾ, ಜಯಶ್ರೀ, ಪ್ರವಲಿಕಾ, ಸೂರಜ, ಮಹೇಶ, ಮೂರ್ತಿ, ಐಶ್ವರ್ಯ ಸೇರಿ 3 ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳು ಪ್ರತಿಭಟನೆಯಲ್ಲಿದ್ದರು.