Advertisement
ಕೊರೊನಾದಿಂದ ಶಾಲೆಗಳ ಆರಂಭ ವಿಳಂಬವಾಗುತ್ತಿದೆ. ಇಂದಿನ ಪರಿಸ್ಥಿತಿಯಲ್ಲಿ ಮಕ್ಕಳ ಆರೋಗ್ಯದ ಬಗ್ಗೆ ಅತಿಯಾದ ಗಮನ ಅಗತ್ಯವಾಗಿರುವುದರಿಂದ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾನಿಲಯವು ಸರಕಾರಿ ಶಾಲಾ ಮಕ್ಕಳ ಆರೋಗ್ಯ ತಪಾಸಣೆ ಮತ್ತು ಸ್ವಾಸ್ಥ್ಯ ನಿಗಾವಣೆಗೆ ಯೋಜನೆ ಸಿದ್ಧಪಡಿಸಿದೆ. ಪ್ರತಿ ವಿದ್ಯಾರ್ಥಿಯ ಆರೋಗ್ಯ ತಪಾಸಣೆ, ಚಿಕಿತ್ಸೆ ಮತ್ತು ಉತ್ತಮ ಆರೋಗ್ಯ ಕಾಪಾಡಿಕೊಳ್ಳುವ ಮಾಹಿತಿಯನ್ನು ವಿ.ವಿ.ಯು ತನ್ನ ಅಂತಿಮ ವರ್ಷದ ವಿದ್ಯಾರ್ಥಿಗಳ ಸಹಯೋಗದಲ್ಲಿ ನೀಡಲಿದೆ.
ವಿದ್ಯಾರ್ಥಿಗಳ ಆರೋಗ್ಯ ತಪಾಸಣೆ ಅತ್ಯಂತ ಸೂಕ್ಷ್ಮ ವಿಚಾರವಾಗಿದ್ದು, ವಿ.ವಿ.ಯು ಅಂತಿಮ ಸೆಮಿಸ್ಟರ್ ವಿದ್ಯಾರ್ಥಿಗಳಿಗೆ ಇಂಟರ್ನ್ಶಿಪ್ ಕಾರ್ಯಕ್ರಮದಲ್ಲಿ ಕಮ್ಯೂನಿಟಿ ಮೆಡಿಸಿನ್ ಭಾಗವಾಗಿ ನಡೆಸಲಿದೆ. ಇದೊಂದು ನಿರಂತರ ಪ್ರಕ್ರಿಯೆ ಆಗಿರುತ್ತದೆ ಎಂದು ವಿ.ವಿ. ಉಪ ಕುಲಸಚಿವ ಡಾ| ವಸಂತ ಶೆಟ್ಟಿ ಹೇಳಿದ್ದಾರೆ.
Related Articles
ಕೆಲವು ವರ್ಷಗಳ ಹಿಂದೆ ಶಾಲೆಗಳಲ್ಲಿ ಆರೋಗ್ಯ ತಪಾಸಣೆ ನಡೆಯುತ್ತಿತ್ತು. ಕೊರೊನಾ ಆತಂಕ ಹೆಚ್ಚಾಗುವ ಜತೆಗೆ ಆರೋಗ್ಯದ ಕಾಳಜಿಯೂ ಹೆಚ್ಚುತ್ತಿರುವುದರಿಂದ ಶಾಲಾ ಮಕ್ಕಳ ನಿರಂತರ ಆರೋಗ್ಯ ತಪಾಸಣೆಗೆ ಸರಕಾರ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆ ಚಿಂತನೆ ನಡೆಸುತ್ತಿವೆ ಎಂದು ಇಲಾಖೆಯ ಹಿರಿಯ ಅಧಿಕಾರಿ ಮಾಹಿತಿ ನೀಡಿದ್ದಾರೆ.
Advertisement
ಉನ್ನತ ಚಿಕಿತ್ಸೆಗೂ ಶಿಫಾರಸುತಪಾಸಣೆ ಸಂದರ್ಭ ಯಾವುದೇ ವಿದ್ಯಾರ್ಥಿಯ ಆರೋಗ್ಯ ಏರುಪೇರಾಗಿರುವುದು ಕಂಡುಬಂದರೆ ಅಲ್ಲಿಯೇ ಚಿಕಿತ್ಸೆಯನ್ನೂ ನೀಡುತ್ತಾರೆ. ಉನ್ನತ ಚಿಕಿತ್ಸೆಯ ಅಗತ್ಯ ಕಂಡುಬಂದಲ್ಲಿ ಜಿಲ್ಲಾ ಆಸ್ಪತ್ರೆಗೆ ಶಿಫಾರಸು ಮಾಡುತ್ತಾರೆ. ತಪಾಸಣೆ ವೇಳೆ ನೀಡುವ ಮಾಹಿತಿ ಪತ್ರದ ಆಧಾರದಲ್ಲಿ ಮಕ್ಕಳು ಪಾಲಕರೊಂದಿಗೆ ಜಿಲ್ಲಾಸ್ಪತ್ರೆಗೆ ದಾಖಲಾಗಿ ಉನ್ನತ ಮಟ್ಟದ ಚಿಕಿತ್ಸೆ ಪಡೆಯಬಹುದು. ಅಲ್ಲದೆ ಯಾವ ಕಾಲೇಜು ಮತ್ತು ಆಸ್ಪತ್ರೆಯಿಂದ ತಪಾಸಣೆಗೆ ಬಂದಿರುತ್ತಾರೋ ಅಲ್ಲಿಯೂ ಚಿಕಿತ್ಸೆ ಪಡೆಯಲು ಅವಕಾಶ ಇರುತ್ತದೆ ಎಂದು ಡಾ| ವಸಂತ ಶೆಟ್ಟಿ ಮಾಹಿತಿ ನೀಡಿದರು. ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾನಿಲಯದ ಅಧೀನದ ಕಾಲೇಜುಗಳು ಆಯಾ ಜಿಲ್ಲೆಯಲ್ಲೇ ಈ ಕಾರ್ಯ ಮಾಡಲಿವೆ. ಅಂತಿಮ ವರ್ಷದ ಅಂತಿಮ ಸೆಮಿಸ್ಟರ್ ವಿದ್ಯಾರ್ಥಿಗಳು ಕಮ್ಯೂನಿಟಿ ಮೆಡಿಸಿನ್ ಇಂಟರ್ನ್ಶಿಪ್ ಕಾರ್ಯಕ್ರಮವಾಗಿ ನಿರಂತರವಾಗಿ ನಡೆಸಲಿದ್ದಾರೆ.
– ಡಾ| ಎಸ್. ಸಚ್ಚಿದಾನಂದ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿ.ವಿ. ಕುಲಪತಿ ರಾಜು ಖಾರ್ವಿ ಕೊಡೇರಿ