Advertisement

ಗ್ರಾಮೀಣ ಪತ್ರಕರ್ತರಿಗೆ ಹೆಲ್ತ್‌ ಕಾರ್ಡ್‌, ಬಸ್‌ ಪಾಸ್‌: ಸಿಎಂ

08:44 PM Jan 04, 2022 | Team Udayavani |

ಕಲಬುರಗಿ: ಮಾರುಕಟ್ಟೆ ಆಧಾರಿತ ವ್ಯವಹಾರದ ನಡುವೆಯೂ ಜನಪರ ಆದ್ಯತೆಗಳು ಮತ್ತು ಅಂತಃಕರಣವನ್ನು ಪತ್ರಿಕೆಗಳು ಕಾಯ್ದುಕೊಳ್ಳುತ್ತಿವೆ. ತಮ್ಮ ಲೇಖನಗಳ ಮೂಲಕ ಆಡಳಿತ ವರ್ಗವನ್ನೂ ಪತ್ರಿಕೆಗಳು ಎಚ್ಚರದ ಸ್ಥಿತಿಯಲ್ಲಿ ಇಟ್ಟಿವೆ. ಗ್ರಾಮೀಣ ಪತ್ರಕರ್ತರಿಗೆ ಹೆಲ್ತ್‌ ಕಾರ್ಡ್‌ ಮತ್ತು ಬಸ್‌ಪಾಸ್‌ ವಿತರಣೆಗೆ ಚಿಂತನೆ ಇದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪ್ರಕಟಿಸಿದರು.

Advertisement

ನಗರದ ಬಸವರಾಜಪ್ಪ ಅಪ್ಪ ಸ್ಮಾರಕ ಭವನದಲ್ಲಿ ಮಂಗಳವಾರ ನಡೆದ 36ನೇ ರಾಜ್ಯ ಪತ್ರಕರ್ತರ ಸಮ್ಮೇಳನ ಉದ್ಘಾಟಿಸಿ ಮಾತನಾಡಿದ ಅವರು, ಖಾಸಗೀಕರಣ, ಉದಾರೀಕರಣ, ಜಾಗತೀಕರಣದಿಂದ ಮಾರುಕಟ್ಟೆ ಆಧಾರಿತ ವ್ಯವಹಾರ ಇದೆ. ಇಂತಹ ಸಂದರ್ಭದಲ್ಲಿ ರಾಜ್ಯದ ಯಾವ ಪತ್ರಿಕೆ ಕೂಡ ಆರ್ಥಿಕ ಬಿಕ್ಕಟ್ಟಿನಿಂದ ಪ್ರಕಟಣೆ ಸ್ಥಗಿತಗೊಳಿಸುವ ಪರಿಸ್ಥಿತಿ ಬರಬಾರದು. ಈ ನಿಟ್ಟಿನಲ್ಲಿ ಸರ್ಕಾರ ಕಾಳಜಿ ವಹಿಸಿ ಪತ್ರಿಕೆಗಳಿಗೆ ಅಗತ್ಯವಿರುವ ಜಾಹೀರಾತು ಬಿಡುಗಡೆ ಮಾಡಲಾಗುತ್ತದೆ. ಜತೆಗೆ ಪತ್ರಕರ್ತರಿಗೆ ಅಗತ್ಯವಾದ ಸೌಕರ್ಯಗಳನ್ನು ಒದಗಿಸಲು ಸರ್ಕಾರದ ಬದ್ಧವಾಗಿದ್ದು, ಹೆಲ್ತ್‌ ಕಾರ್ಡ್‌ ಮತ್ತು ಬಸ್‌ ಪಾಸ್‌ ಬಗ್ಗೆ ಮುಂದಿನ ಬಜೆಟ್‌ನಲ್ಲಿ ಕ್ರಮ ವಹಿಸಲಾಗುವುದು ಎಂದರು.

ಕೊರೊನಾ ಸಂದರ್ಭದಲ್ಲಿ ಪತ್ರಕರ್ತರು ಕೂಡ ಮುಂಚೂಣಿಯಲ್ಲಿ ನಿಂತು ಹೋರಾಟ ಮಾಡಿ ಕಾರ್ಯ ನಿರ್ವಹಿಸಿದ್ದಾರೆ. ಇದರಲ್ಲಿ ಹಲವು ಜನ ಪ್ರಾಣ ಕಳೆದುಕೊಂಡಿದ್ದಾರೆ. ಈ ಹಿಂದೆ ಬಿ.ಎಸ್‌.ಯಡಿಯೂರಪ್ಪ ಅವರು ಐದು ಲಕ್ಷ ರೂ. ಪರಿಹಾರ ನೀಡಿದ್ದರು. ಇದನ್ನು ನಾನೂ ಮುಂದುವರಿಸುತ್ತಿದ್ದೇನೆ. ಪತ್ರಕರ್ತರು-ರಾಜಕಾರಣಿಗಳು ಪರಸ್ಪರ ಅವಿನಾಭಾವ ಸಂಬಂಧ ಹೊಂದಿರುತ್ತಾರೆ. ಇದು ಸಮಾಜದ ಒಳಿತಿಗೆ ಬಳಕೆಯಾಗಬೇಕೆಂದು
ಪ್ರತಿಪಾದಿಸಿದರು.

ಇದನ್ನೂ ಓದಿ:ಚಿಕಿತ್ಸೆಯಲ್ಲಿ ನಿರ್ಲಕ್ಷ್ಯ : ವೈದ್ಯರಿಗೆ ಜೈಲು ಶಿಕ್ಷೆ ವಿಧಿಸಿ ತೀರ್ಪು ನೀಡಿದ ನ್ಯಾಯಾಲಯ

ಇದೇ ಸಂದರ್ಭದಲ್ಲಿ ಹಿರಿಯ ಪತ್ರಕರ್ತರಾದ ಹುಣಸವಾಡಿ ರಾಜನ್‌, ದಿನೇಶ ಅಮಿನ್‌ಮಟ್ಟು, ಎಂ.ಕೆ. ಭಾಸ್ಕರರಾವ್‌, ಟಿ.ವಿ.ಶಿವಾನಂದನ್‌ ಸೇರಿ ಹಲವರಿಗೆ ರಾಜ್ಯ ಮಟ್ಟದ ವಿವಿಧ ಪ್ರಶಸ್ತಿಗಳನ್ನು ಸಿಎಂ ಬೊಮ್ಮಾಯಿ ಪ್ರದಾನ ಮಾಡಿ ಗೌರವಿಸಿದರು.

Advertisement

ಶರಣಬಸವೇಶ್ವರ ಸಂಸ್ಥಾನದ ಪೀಠಾಧಿ ಪತಿ ಡಾ.ಶರಣಬಸವಪ್ಪ ಅಪ್ಪ ಸಾನಿಧ್ಯ ವಹಿಸಿದ್ದರು. ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಸಚಿವ ಭಗವಂತ ಖೂಬಾ, ಸಂಸದ ಡಾ| ಉಮೇಶ ಜಾಧವ, ಸಚಿವ ಮುರುಗೇಶ ನಿರಾಣಿ, ಅರಣ್ಯ ಪ್ರಾ ಧಿಕಾರದ ಅಧ್ಯಕ್ಷೆ ತಾರಾ ಅನುರಾಧ, ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು, ಜಿಲ್ಲಾಧ್ಯಕ್ಷ ಭವಾನಿಸಿಂಗ್‌ ಠಾಕೂರ, ಹಿರಿಯ ಪತ್ರಕರ್ತರಾದ ಹರಿಪ್ರಕಾಶ ಕೋಣೆಮನೆ, ಕೆ.ಎನ್‌. ಚೆನ್ನೇಗೌಡ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಕಲ್ಯಾಣ ಕರ್ನಾಟಕ ಸಮಗ್ರ ಅಭಿವೃದ್ಧಿ ಕುರಿತು ಪತ್ರಕರ್ತರ ಸಮ್ಮೇಳನದಲ್ಲಿ ಚರ್ಚೆ ಮಾಡಿದ ನಿರ್ಣಯಗಳ ಕರಡನ್ನು ಸರ್ಕಾರಕ್ಕೆ ಕಳುಹಿಸಿಕೊಡಿ. ಅವುಗಳ ಜಾರಿಗೆ ನಮ್ಮ ಸರ್ಕಾರ ಆದ್ಯತೆ ನೀಡುತ್ತದೆ.
-ಬಸವರಾಜ ಬೊಮ್ಮಾಯಿ, ಸಿಎಂ

Advertisement

Udayavani is now on Telegram. Click here to join our channel and stay updated with the latest news.

Next