ಕಲಬುರಗಿ: ಕಳೆದ ಎರಡು ದಿನಗಳಿಂದ ಕೊರೊನಾ ಕುರಿತ ಜಿಲ್ಲಾ ಮತ್ತು ರಾಜ್ಯ ಹೆಲ್ತ್ ಬುಲೆಟಿನ್‌ಗೆ ತಾಳೆ ಆಗುತ್ತಿಲ್ಲ. ಹೊಸ ಪಾಸಿಟಿವ್ ಸಂಖ್ಯೆಗಳಲ್ಲಿ ಅಜಗಜಾಂತರ ವ್ಯತ್ಯಾಸ ಕಂಡು ಬರುತ್ತಿದೆ. ಆದರೆ, ಒಟ್ಟಾರೆ ಸೋಂಕಿತರ ಸಂಖ್ಯೆ ಒಂದೇ ರೀತಿಯಲ್ಲಿ ಇರುತ್ತದೆ.
ಸೋಮವಾರ ರಾಜ್ಯ ಬುಲೆಟಿನ್ ಪ್ರಕಾರ ಜಿಲ್ಲೆಯಲ್ಲಿ ಪತ್ತೆಯಾದ ಹೊಸ ಪಾಸಿಟಿವ್ ಪ್ರಕರಣಗಳ ಸಂಖ್ಯೆ 1,062 ಎಂದಿದೆ. ಆದರೆ, ಜಿಲ್ಲಾ ಬುಲೆಟಿನ್‌ನಲ್ಲಿ ಹೊಸ ಪ್ರಕರಣಗಳ ಸಂಖ್ಯೆ ಕೇವಲ 747 ಅಂತಾ ಇದೆ. ಉಳಿದಂತೆ ಬಿಡುಗಡೆಯಾದವರು ಮತ್ತು ಮೃತರ ಅಂಕಿ-ಅಂಶ ಸರಿಯಾಗಿ ಇದೆ. ಅಷ್ಟೇ ಅಲ್ಲದೇ, ಒಟ್ಟಾರೆ ಸೋಂಕಿತರ ಸಂಖ್ಯೆಯೂ ಎರಡೂ ಬುಲೆಟಿನ್‌ಗಳಲ್ಲಿ 50,485 ಎಂದೇ ಇದೆ. ರವಿವಾರ (ಮೇ 8) ಕೂಡ ಹೊಸ ಪಾಸಿಟಿವ್ ಸಂಖ್ಯೆಗಳಲ್ಲಿ ವ್ಯತ್ಯಾಸ ಕಂಡು ಬಂದಿತ್ತು.
ಜಿಲ್ಲಾ ಬುಲೆಟಿನ್ ನಲ್ಲಿ ಹೊಸ ಪ್ರಕರಣಗಳು 1,261 ಎಂದಿದ್ದರೆ, ರಾಜ್ಯ ಬುಲೆಟಿನ್‌ನಲ್ಲಿ ಇವುಗಳ ಸಂಖ್ಯೆ 1,661 ಎಂದಿತ್ತು. ಈ ಬಗ್ಗೆ “ಉದಯವಾಣಿ’ಗೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ ವಿ.ವಿ.ಜ್ಯೋತ್ಸ್ಯಾ ಲ್ಯಾಬ್‌ನಲ್ಲಿ ಪರೀಕ್ಷೆ ಆದ ಮಾದರಿಗಳಲ್ಲಿ ಪಾಸಿಟಿವ್ ಬಂದ ಕೇಸ್‌ಗಳ ಪರಿಶೀಲನೆ ಮಾಡಲಾಗುತ್ತಿದೆ. ಸೋಂಕಿತರ ಪತ್ತೆ ಕಾರ್ಯ ಜತೆಗೆ, ಮೊಬೈಲ್ ಮೂಲಕ ಸೋಂಕಿತ ವ್ಯಕ್ತಿಯನ್ನು ದೃಢಪಡಿಸಿಕೊಳ್ಳಲಾಗುತ್ತದೆ. ಈ ಕಾರ್ಯ ಮುಗಿದ ಬಳಿಕ ಅದಕ್ಕೆ ಪಾಸಿಟಿವ್ ಎಂದು ಅನುಮೋದನೆ ಸಿಗುತ್ತದೆ.
ಕೆಲ ಸಲ ಅದೇ ದಿನ ಸೋಂಕು ಖಚಿತವಾದ ವ್ಯಕ್ತಿಗಳ ಪಾಸಿಟಿವ್ ಸಂಖ್ಯೆ ಮರು ದಿನ ಅಥವಾ ಖಚಿತವಾದ ಬಳಿಕ ಬುಲೆಟಿನ್‌ನಲ್ಲಿ ಬರುತ್ತದೆ. ಹೀಗಾಗಿ ವ್ಯತ್ಯಾಸ ಕಂಡು ಬರುತ್ತದೆ ಎಂದು ಸ್ಪಪ್ಟಪಡಿಸಿದರು. ಇನ್ನು, ಹೊಸ 1,062 ಕೊರೊನಾ ಪಾಸಿಟಿವ್ ಪ್ರಕರಣಗಳೊಂದಿಗೆ ಒಟ್ಟಾರೆ ಸೋಂಕಿತರ ಸಂಖ್ಯೆ 50,485ಕ್ಕೇರಿಕೆಯಾಗಿದೆ.
ಅದೇ ರೀತಿ ಸೋಮವಾರ 578 ಜನ ಸೋಂಕಿತರು ಗುಣಮುಖರಾಗಿದ್ದು, ಈ ಮೂಲಕ 36,334 ಮಂದಿ ಚೇತರಿಸಿಕೊಂಡಂತೆ ಆಗಿದೆ. ಜಿಲ್ಲಾದ್ಯಂತ 13,592 ಜನ ಸಕ್ರಿಯ ರೋಗಿಗಳು ಇದ್ದಾರೆ. ಇನ್ನು, ಕೊರೊನಾ ಸೋಂಕಿನಿಂದ ಸೋಮವಾರ ಒಟ್ಟು 12 ಜನರು ಮೃತಪಟ್ಟಿದ್ದಾರೆ. ಇದರೊಂದಿಗೆ ಇದುವರೆಗೆ ಕೊರೊನಾದಿಂದ ಮೃತರ ಸಂಖ್ಯೆ 559ಕ್ಕೆ ಏರಿಕೆಯಾಗಿದೆ.