ಹಿತ್ತಲಿನಲ್ಲಿ ಹೂವಿನ ಗಿಡಗಳೊಂದಿಗೆ ಔಷಧೀಯ ಸಸ್ಯಗಳನ್ನು ಕೂಡಾ ಬೆಳೆಸುತ್ತಿದ್ದರು. ಅವು ಅಲಂಕಾರ ಸಸ್ಯವಾಗಿ ಕಂಗೊಳಿಸುತ್ತಾ ಔಷಧಿಗೆ ಬಳಕೆಯಾಗುತ್ತಿತ್ತು. ಇಂತಹ ಔಷಧೀಯ ಸಸ್ಯಗಳಲ್ಲಿ ದೊಡ್ಡಪತ್ರೆಗೆ ಮಹತ್ವದ ಸ್ಥಾನವಿದೆ. ಇದು ಹಿಂದೆ ಕಾಲರಾದಂತಹ ರೋಗವನ್ನೇ ಹತೋಟಿಗೆ ತರುವಂತಹ ಶಕ್ತಿಯನ್ನು ಹೊಂದಿತ್ತು ಎಂದರೆ ಅಚ್ಚರಿಯಾಗಬಹುದು.
ಇವತ್ತಿಗೂ ದೊಡ್ಡಪತ್ರೆ ಹೆಚ್ಚಿನ ಮನೆಗಳಲ್ಲಿ ಕಂಡು ಬರುತ್ತದೆ. ಇದನ್ನು ಸಾಂಬಾರ ಬಳ್ಳಿ, ಸಾವಿರ ಸಾಂಬಾರ(ಅಜವನದ ಎಲೆ), ಕರ್ಪೂರವಳ್ಳಿ ಹೀಗೆ ಹಲವಾರು ಹೆಸರುಗಳಿಂದ ಕರೆಯುತ್ತಾರೆ. ತೇವವಿರುವ ಮತ್ತು ಜವಳು ಮಣ್ಣಿನಲ್ಲಿ ಚೆನ್ನಾಗಿ ಬೆಳೆಯುತ್ತದೆ. ಮನೆಗಳಲ್ಲಿ ಹೂವಿನ ಕುಂಡದಲ್ಲಿಯೂ ಇದನ್ನು ಬೆಳೆಸಬಹಹುದು. ಎಲೆಗಳು ಹಸಿರಾಗಿ ದಪ್ಪವಾಗಿರುತ್ತದೆ. ಎಲೆಯಲ್ಲಿ ನೀರಿನ ಅಂಶ ಹೆಚ್ಚಿನ ಪ್ರಮಾಣದಲ್ಲಿರುವುದರಿಂದ ಔಷಧೀಯ ಗುಣವಿದೆ.
ದೊಡ್ಡಪತ್ರೆಯನ್ನು ಮನೆಯ ಹಿತ್ತಲಿನಲ್ಲಿ ನೆಟ್ಟು ಬೆಳೆಸುವುದರಿಂದ ಏನು ಉಪಯೋಗ ಎಂಬುದನ್ನು ನೋಡುವುದಾದರೆ…
ಸಾಮಾನ್ಯವಾಗಿ ಮಕ್ಕಳಲ್ಲಿ ಕಂಡು ಬರುವ ಕಫ, ಉಬ್ಬಸ ನಿವಾರಣೆಗೆ ಬಳಸಬಹುದು. ಗಿಡದಿಂದ ಎಲೆಗಳನ್ನು ತೆಗೆದು ಚೆನ್ನಾಗಿ ತೊಳೆದು ಬೆಂಕಿಯಲ್ಲಿ ಬಾಡಿಸಿಕೊಂಡು ಮಕ್ಕಳ ಎದೆಗೆ ಶಾಖ ಕೊಡಬೇಕು ಅಥವಾ ದೊಡ್ಡಪತ್ರೆ ಎಲೆಯೊಂದಿಗೆ ತುಳಸಿ ಎಲೆಯನ್ನು ಅರೆದು ಅದರ ರಸ ತೆಗೆದು ಜೇನುತುಪ್ಪದೊಂದಿಗೆ ಬೆರೆಸಿ ಕುಡಿದರೆ ನೆಗಡಿ, ಕೆಮ್ಮು ದೂರವಾಗುತ್ತದೆ.
ಇದೇ ರೀತಿ 4ರಿಂದ 5 ಎಲೆಗಳನ್ನು ಕೆಂಡದ ಮೇಲೆ ಬಾಡಿಸಿ ರಸವನ್ನು ತೆಗೆದು ಕುಡಿದರೆ ಜ್ವರ ಕಡಿಮೆಯಾಗುತ್ತದೆ. ಅಥವಾ ಮಕ್ಕಳಿಗೆ ಜ್ವರ ಬಂದಾಗ ಎಲೆಯನ್ನು ಬಾಡಿಸಿ ನೆತ್ತಿಯ ಮೇಲೆ ಇಡುತ್ತಾರೆ. ಶೀತದಿಂದಾಗಿ ಮಕ್ಕಳಿಗೆ ಮಲಬದ್ದತೆಯಾದರೆ ಎಲೆಗಳ ಸರವನ್ನು ಜೇನುತುಪ್ಪ ಬೆರೆಸಿ ಕುಡಿಸಿದರೆ ಮಲಬದ್ದತೆ ನಿವಾರಣೆಯಾಗುತ್ತದೆ. ಅರಸಿನ ಕಾಮಾಲೆ ರೋಗವುಳ್ಳವರು 10(ಹತ್ತು) ದಿನಗಳ ಕಾಲ ದೊಡ್ಡಪತ್ರೆ ಎಲೆಗಳನ್ನು ಆಹಾರ ರೂಪದಲ್ಲಿ ಸೇವಿಸಿದರೆ ರೋಗ ಗುಣವಾಗುತ್ತದೆ. ಕಂಬಳಿ ಹುಳುವಿನಂತಹ ಕೀಟಗಳು ಕಚ್ಚಿದ ಜಾಗಕ್ಕೆ ಎಲೆಯನ್ನು ಜಜ್ಜಿ ಉಜ್ಜಿದರೆ ಉರಿ ಕಡಿಮೆಯಾಗುವುದು.
ಎಲೆಯನ್ನು ಉಪ್ಪಿನೊಂದಿಗೆ ನೆಂಚಿಕೊಂಡು ತಿಂದರೆ ಜೀರ್ಣಶಕ್ತಿ ಹೆಚ್ಚುತ್ತದೆ. ದೊಡ್ಡಪತ್ರೆ ಎಲೆಯನ್ನು ಜಜ್ಜಿ ಆದರ ವಾಸನೆ ಸೇವಿಸಿದರೆ ಕಟ್ಟಿದ ಮೂಗಿನಿಂದ ನಿವಾರಣೆಯನ್ನು ಹೊಂದಬಹುದು. ಗ್ಯಾಸ್ಟ್ರಿಕ್ ತಡೆಯುತ್ತದೆ. ದೇಹದಿಂದ ವಿಷವನ್ನು ಹೊರ ಹಾಕುತ್ತದೆ. ರಕ್ತವನ್ನು ಶುದ್ಧೀಕರಿಸುತ್ತದೆ.
ದೊಡ್ಡಪತ್ರೆ ಎಲೆಯನ್ನು ಕಿವುಚಿ ರಸ ತೆಗೆದು, ಚರ್ಮದ ಸೋಂಕು ಅಥವಾ ಕೀಟ ಕಡಿತದ ಜಾಗಕ್ಕೆ ಲೇಪಿಸಿ. ಇದರಿಂದ ಉರಿ, ಬಾವು ಮತ್ತು ತುರಿಕೆ ಕೂಡಲೇ ಕಡಿಮೆಯಾಗುವುದು.
ಇನ್ನು ಎಲೆಗಳ ಚಟ್ನಿ, ತಂಬುಳಿ ಮೊದಲಾದವುಗಳು ಸೇವಿಸಿದರೆ ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ಸಾಧ್ಯವಾಗುತ್ತದೆ. ಒಟ್ಟಿನಲ್ಲಿ ಆರೋಗ್ಯದ ಗಣಿಯಾಗಿರುವ ದೊಡ್ಡಪತ್ರೆಯನ್ನು ಮನೆಯ ಹಿತ್ತಲಿನಲ್ಲಿ ಹಲವು ರೀತಿಯ ಉಪಯೋಗ ಪಡೆಯಬಹುದು ಎಂಬುದರಲ್ಲಿ ಎರಡು ಮಾತಿಲ್ಲ.