Advertisement

Health: ಅಸ್ತಮಾ ಮತ್ತು ಮೂಢನಂಬಿಕೆಗಳು

02:04 PM Jul 05, 2024 | Team Udayavani |

ಬಹಳ ಪುರಾತನ ಕಾಲದಿಂದಲೂ ನಾವು ಅಸ್ತಮಾದ ಬಗ್ಗೆ ಕೇಳುತ್ತ ಬಂದಿದ್ದೇವೆ. ಮುಂದಿನ ಮನೆಯ ಮಗು ಆಟವಾಡುತ್ತಿರುವಾಗ ಉಸಿರು ಕಟ್ಟಿದಂತಾಗುತ್ತದೆ ಎಂಬುದರಿಂದ ತೊಡಗಿ ಹಾಲಿನವನು ದಿನಾ ಬೆಳಗ್ಗೆ ಕೆಮ್ಮುತ್ತಲೇ ಹಾಲು ಹಾಕುವ ವರೆಗೆ ಎಲ್ಲ ಕಡೆಯೂ ಅಸ್ತಮಾದ ಬಗ್ಗೆ ಕೇಳುತ್ತ, ಕಾಣುತ್ತಲೇ ಇರುತ್ತೇವೆ. ಭಾರತದಲ್ಲಿ ಅಂದಾಜು 35 ದಶಲಕ್ಷ ಮಂದಿ ಅಸ್ತಮಾ ಹೊಂದಿದ್ದಾರೆ ಎನ್ನುತ್ತದೆ ಅಂಕಿಅಂಶ. ಆದರೂ ನಾವು ಈ ಮೂರಕ್ಷರದ ಪದವನ್ನು ಕೇಳಿದಾಕ್ಷಣ ಯಾಕೆ ಬೆಚ್ಚಿಬೀಳುತ್ತೇವೆ? ಹಿಂದೆ ಈ ಕಾಯಿಲೆಗೆ ಬೆರಳೆಣಿಕೆಯಷ್ಟು ಔಷಧಗಳು ಮಾತ್ರ ಲಭ್ಯವಿದ್ದುವು ಎಂಬುದರಿಂದಾಗಿಯೇ ಈ ಭೀತಿ? ಅಥವಾ ನೀವು ಇನ್‌ಹೇಲರ್‌ ಉಪಯೋಗಿಸುವುದರ ಬಗ್ಗೆ ನಿಮ್ಮ ಸಹಪಾಠಿ ತಮಾಶೆ ಮಾಡುತ್ತಾನೆ ಎಂಬುದು ಇದಕ್ಕೆ ಕಾರಣವೇ?
ಪುರಾತನ ಈಜಿಪ್ಟ್ ನಲ್ಲಿ ದೊರಕಿದ, ಕ್ರಿಸ್ತಪೂರ್ವ 1550ರ ಕಾಲಘಟ್ಟದ ಎಬೆರ್ ಪ್ಯಾಪಿರಸ್‌ ಪಠ್ಯಗಳಲ್ಲಿಯೂ ಅಸ್ತಮಾದಂತಹ ರೋಗಲಕ್ಷಣಗಳನ್ನು ಉಲ್ಲೇಖೀಸಲಾಗಿದೆ. “ಅಸ್ತಮಾ’ ಎಂಬ ಪದವು “ಉಸಿರಿಗಾಗಿ ಕಷ್ಟಪಡು’ ಅಥವಾ “ಕಷ್ಟದಿಂದ ಉಸಿರಾಡು’ ಎಂಬ ಅರ್ಥವುಳ್ಳ ಗ್ರೀಕ್‌ ಪದ “ಆಝೈನ್‌’ ಎಂಬುದರಿಂದ ಉದ್ಭವಿಸಿದೆ. ಪುರಾತನ ಕಾಲದಿಂದಲೇ ಅಸ್ತಮಾದಂತಹ ರೋಗಲಕ್ಷಣಗಳ ಉಲ್ಲೇಖವಿದ್ದರೂ ಅದನ್ನು ಒಂದು ಪ್ರತ್ಯೇಕ ಕಾಯಿಲೆಯಾಗಿ ಗುರುತಿಸಿ ಅದು ಶ್ವಾಸನಾಳಗಳಿಗೆ ಸಂಬಂಧಿಸಿದ್ದು ಎಂಬುದನ್ನು ಪತ್ತೆಹಚ್ಚಿದ್ದು 17ನೇ ಶತಮಾನದಲ್ಲಿ ಆಂಗ್ಲ ವೈದ್ಯ ಥಾಮಸ್‌ ವಿಲ್ಲಿಸ್‌. ಅಸ್ತಮಾಕ್ಕೆ ಶಾಪ, ಪಾಪ ಕಾರಣವೆಂಬ ನಂಬಿಕೆ ಹೊರಟು ಹೋಗಿ ಮೌಢಾÂಚರಣೆಗಳ ಬದಲು ಲಕ್ಷಣಗಳನ್ನು ವೈದ್ಯಶಾಸ್ತ್ರೀಯವಾಗಿ ನಿಭಾಯಿಸುವತ್ತ ಗಮನ ಹರಿಸುವ ಪದ್ಧತಿ ಆ ಬಳಿಕ ಪ್ರಾರಂಭವಾಯಿತು.
ಅಸ್ತಮಾ ಉಸಿರಾಟಕ್ಕೆ ಸಂಬಂಧಿಸಿದ ಒಂದು ದೀರ್ಘ‌ಕಾಲೀನ ಅನಾರೋಗ್ಯವಾಗಿದೆ. ಇದರಲ್ಲಿ ಉರಿಯೂತದಿಂದಾಗಿ ಶ್ವಾಸನಾಳಗಳು ಸಂಕುಚನಗೊಳ್ಳುತ್ತವೆ, ಇದರಿಂದಾಗಿ ಉಬ್ಬಸ, ಉಸಿರು ಕಟ್ಟುವಿಕೆ, ಎದೆ ಬಿಗಿತ ಮತ್ತು ಕೆಮ್ಮು ಉಂಟಾಗುತ್ತವೆ. ಈ ಲಕ್ಷಣಗಳು ಸಾಮಾನ್ಯವಾಗಿ ರಾತ್ರಿ ಮತ್ತು ಬೆಳಗಿನ ಜಾವದಲ್ಲಿ ಉಲ್ಬಣಗೊಳ್ಳುತ್ತವೆ. ಅಲರ್ಜಿಕಾರಕಗಳು, ವ್ಯಾಯಾಮ, ಶ್ವಾಸಾಂಗ ಸೋಂಕುಗಳು ಮತ್ತು ಒತ್ತಡದಂತಹ ಅಂಶಗಳಿಂದ ಈ ಅಸ್ತಮಾ ರೋಗಲಕ್ಷಣಗಳು ಪ್ರಚೋದನೆಗೊಳ್ಳಬಹುದಾಗಿದೆ.
ಅಸ್ತಮಾದ ರೋಗಕಾರಕ ವ್ಯಾಖ್ಯಾನದ ಪ್ರಕಾರ, ಈ ಕಾಯಿಲೆ ಉಂಟಾಗುವುದಕ್ಕೆ ವಂಶವಾಹಿ, ಪರಿಸರಕ್ಕೆ ಸಂಬಂಧಿಸಿದ ಮತ್ತು ರೋಗ ನಿರೋಧಕ ಶಕ್ತಿಗೆ ಸಂಬಂಧಿಸಿದ ಅಂಶಗಳ ಸಂಕೀರ್ಣ ಸಂಯೋಗವು ಕಾರಣವಾಗುತ್ತದೆ. ಇದರಿಂದಾಗಿ ಶ್ವಾಸಮಾರ್ಗದ ದೀರ್ಘ‌ಕಾಲೀನ ಉರಿಯೂತ ಮತ್ತು ಅತಿ ಪ್ರತಿಸ್ಪಂದಕ ಗುಣ ತಲೆದೋರುತ್ತದೆ. ಕುಟುಂಬದಲ್ಲಿ ಅಸ್ತಮಾ ರೋಗಿಗಳನ್ನು ಹೊಂದಿರುವ ಅಥವಾ ಅಲರ್ಜಿ ಕಾಯಿಲೆಗಳನ್ನು ಹೊಂದಿರುವ ವ್ಯಕ್ತಿಗಳು ಅಸ್ತಮಾಕ್ಕೆ ತುತ್ತಾಗುವ ಸಾಧ್ಯತೆಗಳು ಅಧಿಕ. ಪರಾಗರೇಣುಗಳು, ಧೂಳಿನ ಸೂಕ್ಷ್ಮಜೀವಿಗಳು, ಸಾಕುಪ್ರಾಣಿಗಳ ಕೂದಲು, ಚರ್ಮದ ಪುಡಿ, ಮಾಲಿನ್ಯಕಾರಕಗಳು, ತಂಬಾಕು ಹೊಗೆ, ಶ್ವಾಸಾಂಗ ಸೋಂಕುಗಳು, ಕೆಲಸದ ಸ್ಥಳದಲ್ಲಿ ಇರಬಹುದಾದ ಪ್ರಚೋದಕಗಳು ಮತ್ತು ಇಂತಹ ಇತರ ಅನೇಕ ಅಂಶಗಳು ಅಸ್ತಮಾ ರೋಗ ಲಕ್ಷಣಗಳು ಉಂಟಾಗುವುದಕ್ಕೆ ಕಾರಣವಾಗಬಹುದಾಗಿದೆ.
ಅಸ್ತಮಾ ಹೊಂದಿರುವ ವ್ಯಕ್ತಿಯು ಅಲರ್ಜಿಕಾರಕಗಳನ್ನು ಉಸಿರಾಡಿದಾಗ ಅವು ಶ್ವಾಸಮಾರ್ಗದಲ್ಲಿ ಟಿಎಚ್‌2 ರೋಗಪ್ರತಿರೋಧಕ ಜೀವಕೋಶಗಳನ್ನು ಪ್ರಚೋದಿಸುತ್ತವೆ, ಅವು ರಾಸಾಯನಿಕ ಮೀಡಿಯೇಟರ್‌ಗಳನ್ನು ಬಿಡುಗಡೆ ಮಾಡುತ್ತವೆ ಮತ್ತು ಉರಿಯೂತ ಉಂಟಾಗುವ ಪ್ರಕ್ರಿಯೆಯಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತವೆ.
ಅಲರ್ಜಿಕಾರಕಗಳಿಗೆ ಮತ್ತೆ ಒಡ್ಡಿಕೊಂಡಾಗ ಈಗಾಗಲೇ ಹೀಗೆ ಸೂಕ್ಷ್ಮಸಂವೇದಿಗೊಂಡಿರುವ ಜೀವಕೋಶಗಳು ಹಿಸ್ಟಮಿನ್‌, ಲುಕೊಟ್ರಿಯೆನ್ಸ್‌ ಮತ್ತು ಪ್ರೊಸ್ಟಾಗ್ಲಾಂಡಿನ್‌ ಗಳಂತಹ ಉರಿಯೂತ ಮೀಡಿಯೇಟರ್‌ಗಳನ್ನು ಬಿಡುಗಡೆ ಮಾಡುತ್ತವೆ. ಇದರಿಂದಾಗಿ ಶ್ವಾಸಮಾರ್ಗದಲ್ಲಿ ಉರಿಯೂತ ಕಾಣಿಸಿಕೊಳ್ಳುತ್ತದೆ. ಆದ್ದರಿಂದ ಅಸ್ತಮಾದಲ್ಲಿ ರೋಗಲಕ್ಷಣಗಳನ್ನು ಪ್ರಚೋದಿಸುವುದು ಅಲರ್ಜಿಕಾರಕಗಳಿಗೆ ದ್ವಿತೀಯ ಬಾರಿ ಒಡ್ಡಿಕೊಳ್ಳುವಿಕೆ. ಯಾವ ಅಲರ್ಜಿಕಾರಕದಿಂದ ಅಸ್ತಮಾ ರೋಗಿಯೊಬ್ಬನಿಗೆ ರೋಗಲಕ್ಷಣಗಳು ಕಾಣಿಸಿಕೊಳ್ಳುತ್ತವೆ ಎಂಬುದು ವ್ಯಕ್ತಿನಿರ್ದಿಷ್ಟವಾಗಿದ್ದು, ಈ ಹಿಂದೆ ಹೇಳಿರುವಂತೆ ವಂಶವಾಹಿಗಳು ಮತ್ತು ಪರಿಸರದ ಸಂಕೀರ್ಣ ಸಂಯೋಜನೆಯಿಂದ ನಿರ್ಧಾರವಾಗುತ್ತದೆ.

Advertisement

ಅಸ್ತಮಾ ರೋಗಪತ್ತೆ ಹೇಗೆ?

ಅಸ್ತಮಾ ರೋಗಪತ್ತೆಯನ್ನು ಮಾಡುವುದಕ್ಕೆ ಸಹಾಯ ಮಾಡುವ ಹಲವಾರು ಪರೀಕ್ಷೆಗಳಿವೆ. ಇವುಗಳಲ್ಲಿ ಪ್ರಾಮುಖ್ಯವಾದದ್ದು ಸ್ಪೈರೊಮೆಟ್ರಿ. ಇದರಲ್ಲಿ ವ್ಯಕ್ತಿಯು ವಿಶ್ರಾಂತ ಭಂಗಿಯಲ್ಲಿ ಕುಳಿತಿದ್ದು, ಬಲವಾಗಿ ಉಸಿರು ಎಳೆದುಕೊಂಡು ಕಂಪ್ಯೂಟರ್‌ಗೆ ಸಂಪರ್ಕ ಹೊಂದಿರುವ ಸ್ಪೈರೊಮೆಟ್ರಿ ಉಪಕರಣಕ್ಕೆ ಉಸಿರನ್ನು ಹೊರಬಿಡುತ್ತಾನೆ.

ಹೀಗೆ ಉಸಿರನ್ನು ಹೊರಬಿಟ್ಟಾಗ ಕಂಪ್ಯೂಟರ್‌ ಅನೇಕ ಪ್ಯಾರಾಮೀಟರ್‌ಗಳನ್ನು ದಾಖಲಿಸಿಕೊಳ್ಳುತ್ತದೆ. ಇವುಗಳಲ್ಲಿ ಒಂದು ಊಉV1. ಇದರ ವಿಸ್ತೃತ ರೂಪ ಫೋರ್ಡ್‌ ಎಕ್ಸ್‌ಪಿರೇಟರಿ ವಾಲ್ಯೂಮ್‌ ಆಗಿದ್ದು, ಇದು ಅಸ್ತಮಾವನ್ನು ಪತ್ತೆಹಚ್ಚುವುದಕ್ಕೆ ಮುಖ್ಯವಾದ ಒಂದು ಪ್ಯಾರಾಮೀಟರ್‌ ಆಗಿದೆ.

ವ್ಯಕ್ತಿಯು ಉಸಿರನ್ನು ಹೇಗೆ ಹೊರಬಿಡುತ್ತಾನೆ ಎನ್ನುವುದು ಕೂಡ ಬಹಳ ಮುಖ್ಯವಾಗಿದೆ. ಹೀಗಾಗಿ ಈ ಪರೀಕ್ಷೆಯ ಸಂದರ್ಭದಲ್ಲಿ ತಂತ್ರಜ್ಞರೊಬ್ಬರು ಪರೀಕ್ಷೆಗೊಳಗಾಗುವ ವ್ಯಕ್ತಿಯ ಬಳಿ ಕುಳಿತಿದ್ದು, ಹೇಗೆ ಉಸಿರನ್ನು ಹೊರಬಿಡಬೇಕು ಎಂದು ಸೂಚನೆ ನೀಡುತ್ತಾರೆ. ಅಸ್ತಮಾದಲ್ಲಿ “ರಿವರ್ಸಿಬಿಲಿಟಿ ಆಫ್ ಏರ್‌ವೇಸ್‌’ ಎಂಬ ಅಂಶ ಮುಖ್ಯವಾಗಿರುತ್ತದೆ.

Advertisement

ಹೀಗಾಗಿ ಸೂಕ್ತ ಪ್ರಮಾಣದ ನೆಬ್ಯುಲೈಸೇಶನ್‌ ನೀಡಿದ ಬಳಿಕ ಈ ಪರೀಕ್ಷೆಯನ್ನು ಪುನರಾವರ್ತಿಸಲಾಗುತ್ತದೆ. ನೆಬ್ಯುಲೈಸೇಶನ್‌ ಶ್ವಾಸಾಂಗವು ವಿಕಸನಗೊಳ್ಳಲು ನೆರವಾಗುತ್ತದೆ ಮತ್ತು ನೆಬ್ಯುಲೈಸೇಶನ್‌ ವ್ಯಕ್ತಿಯ ಶ್ವಾಸಕೋಶ ಸಾಮರ್ಥ್ಯದ ಮೇಲೆ ಪರಿಣಾಮ ಬೀರುವುದೇ ಎಂಬುದನ್ನು ತಿಳಿಯಲು ಹೀಗೆ ನೆಬ್ಯುಲೈಸೇಶನ್‌ ನೀಡಿದ ಬಳಿಕ ಪರೀಕ್ಷೆಯನ್ನು ಪುನರಾವರ್ತಿಸಲಾಗುತ್ತದೆ.

ಹೀಗಾಗಿ ಇದನ್ನು ಪೋಸ್ಟ್‌ ಬ್ರೊಂಕೊ ಡಯಲೇಟರ್‌ ಎಫ್ಇವಿ1 ಎಂಬುದಾಗಿ ಕರೆಯಲಾಗುತ್ತದೆ. ಆ ಬಳಿಕ ವೈದ್ಯರು ಪ್ರಿ ಬ್ರೊಂಕೊ ಡಯಲೇಟರ್‌ ಮತ್ತು ಪೋಸ್ಟ್‌ ಬ್ರೊಂಕೊ ಡಯಲೇಟರ್‌ ಎಫ್ಇವಿ1 ಪರೀಕ್ಷೆಗಳ ವರದಿಗಳನ್ನು ಪರಿಶೀಲಿಸಿ ಹೋಲಿಸಿ ನೋಡುತ್ತಾರೆ. ವಯಸ್ಕರಲ್ಲಿ ಪ್ರಿ ಬ್ರೊಂಕೊ ಡಯಲೇಟರ್‌ ಎಫ್ಇವಿ1 ಪರೀಕ್ಷೆಯ ಮಾಪನಕ್ಕಿಂತ ಪೋಸ್ಟ್‌ ಬ್ರೊಂಕೊ ಡಯಲೇಟರ್‌ ಎಫ್ ಇವಿ1 ಪರೀಕ್ಷೆಯ ಮಾಪನವು ಶೇ.12 ಹೆಚ್ಚಿದ್ದು, 200 ಮಿ.ಲೀ.ಗಳಷ್ಟು ಬದಲಾವಣೆ ಇದ್ದರೆ ವ್ಯಕ್ತಿಯು ಅಸ್ತಮಾ ಹೊಂದಿದ್ದಾನೆ ಎಂದು ಅರ್ಥವಾಗಿದೆ.

-ಮುಂದಿನ ವಾರಕ್ಕೆ

ಡಾ| ಶ್ರೀನಿವಾಸ್‌ ಎಸ್‌. ಪೈ,

ಸೀನಿಯರ್‌ ರೆಸಿಡೆಂಟ್‌ ಕೆಎಂಸಿ ಆಸ್ಪತ್ರೆ,

ಅತ್ತಾವರ, ಮಂಗಳೂರು

(ಈ ಲೇಖನದಲ್ಲಿರುವ ವಿಚಾರಗಳ ಬಗ್ಗೆ ಹೆಚ್ಚಿನ ಮಾಹಿತಿಗಳಿಗಾಗಿ ಸಂಪರ್ಕಿಸಿ: ಮುಖ್ಯಸ್ಥರು, ರೆಸ್ಪಿರೇಟರಿ ಮೆಡಿಸಿನ್‌ ವಿಭಾಗ, ಕೆಎಂಸಿ,ಮಂಗಳೂರು)

Advertisement

Udayavani is now on Telegram. Click here to join our channel and stay updated with the latest news.

Next