Advertisement
ಪ್ರತೀ ವರ್ಷ ಸೆಪ್ಟಂಬರ್ 10 ದಿನಾಂಕವನ್ನು ವಿಶ್ವ ಆರೋಗ್ಯ ಸಂಸ್ಥೆ ಮತ್ತು ಜಾಗತಿಕ ಆತ್ಮಹತ್ಯೆ ತಡೆ ಅಸೋಸಿಯೇಶನ್ ಗಳ ಮುಂದಾಳತ್ವದಲ್ಲಿ “ಜಾಗತಿಕ ಆತ್ಮಹತ್ಯೆ ತಡೆ ದಿನ’ವನ್ನಾಗಿ ಆಚರಿಸಲಾಗುತ್ತದೆ. ಈ ವರ್ಷ ಕಳೆದ ವಾರವಷ್ಟೇ ಈ ದಿನವನ್ನು “ಕ್ರಿಯಾತ್ಮಕ ಚಟುವಟಿಕೆಯಿಂದ ಆಶಾಭಾವ ಸೃಷ್ಟಿ’ ಎಂಬ ಧ್ಯೇಯವಾಕ್ಯದಡಿ ಆಚರಿಸಲಾಯಿತು. ನಮ್ಮ ದೇಶ ವಿಶ್ವದಲ್ಲಿಯೇ ಅತೀ ಹೆಚ್ಚು ಸಂಖ್ಯೆಯಲ್ಲಿ ಯುವ ಸಮುದಾಯವನ್ನು ಹೊಂದಿದೆ. ಈ ಹಿನ್ನೆಲೆಯಲ್ಲಿ ಮುಕ್ತ ಮಾತುಕತೆ ಮತ್ತು ಕ್ರಿಯಾತ್ಮಕ ಚಟುವಟಿಕೆಗಳಿಂದ ಆತ್ಮಹತ್ಯೆಗೆ ಪ್ರಯತ್ನಿಸುವ ಜನರ ಜೀವಗಳನ್ನು ಹೇಗೆ ಉಳಿಸಬಹುದು ಎಂಬ ಬಗ್ಗೆ ಚಿಂತಿಸುವುದು ಬಹಳ ಮುಖ್ಯವಾಗಿದೆ. ಕುಟುಂಬ ಸದಸ್ಯರು, ಗೆಳೆಯ -ಗೆಳತಿಯರು, ಸಹೋದ್ಯೋಗಿಗಳು, ಸಮುದಾಯ ಭಾವನೆಗಳ ಮುಕ್ತ ಅಭಿವ್ಯಕ್ತಿ ಮತ್ತು ಮುಕ್ತ ಮಾತುಕತೆ ಜೀವಗಳನ್ನು ಹೇಗೆ ಉಳಿಸಬಹುದು? ಆತ್ಮಹತ್ಯೆ ತಡೆ ಸದಸ್ಯರು, ಶಿಕ್ಷಕರು, ಧಾರ್ಮಿಕ ನಾಯಕರು, ಆರೋಗ್ಯ ಸೇವಾ ವೃತ್ತಿಪರರು, ರಾಜಕೀಯ ನೇತಾರರು, ಸರಕಾರಿ ಅಧಿಕಾರಿಗಳು – ಹೀಗೆ ಜೀವನದಲ್ಲಿ ನಾವು ವಹಿಸುವ ವಿವಿಧ ಪಾತ್ರಗಳ ಮೂಲಕ ಆತ್ಮಹತ್ಯೆಯನ್ನು ತಡೆಯಲು ನಾವು ಶ್ರಮಿಸಬಹುದಾಗಿದೆ.
Related Articles
Advertisement
ಸಹಾಯಹಸ್ತ ಚಾಚುವುದು
ತನ್ನ ಸ್ನೇಹಿತ ಸುಜಯ್ ಚಿಂತೆಯಲ್ಲಿ ಇದ್ದಂತೆ ಇರುವುದು ಮತ್ತು ಯಾವತ್ತಿನಂತೆ ಇಲ್ಲದಿರುವುದನ್ನು ಸಚಿನ್ ಗಮನಿಸಿದ್ದ. ಯಾರಿಗೂ ಹೇಳದೆಯೇ ಸುಜಯ್ ಕೆಲಸಕ್ಕೆ ಗೈರುಹಾಜರಾಗುತ್ತಿದ್ದ. ಸಚಿನ್ ಒಂದು ದಿನ ಸುಜಯ್‌ನನ್ನು ಸಂಜೆ ಚಹಾಕ್ಕೆ ಆಹ್ವಾನಿಸಿ ಕುಶಲೋಪರಿ ವಿಚಾರಿಸಿ ಎಲ್ಲವೂ ಸರಿಯಾಗಿದೆಯೇ, ಏನಾದರೂ ತೊಂದರೆ ಇದೆಯೇ ಎಂದು ವಿಚಾರಿಸಿದ್ದ. ತನ್ನ ತಂದೆಗೆ ಕ್ಯಾನ್ಸರ್ ಇರುವುದಾಗಿ ತಿಳಿದುಬಂದಿದೆ, ಆದರೆ ಉದ್ಯೋಗ ಸಮಯದ ಕಾರಣದಿಂದಾಗಿ ಅವರ ಆರೈಕೆ ಮಾಡಲು ತನಗೆ ಸಾಧ್ಯವಾಗುತ್ತಿಲ್ಲ; ಒಟ್ಟಾರೆ ಎಲ್ಲವೂ ಬಹಳ ಕಠಿನವಾಗಿದೆ ಎಂದು ಸುಜಯ್ ಅರೆಮನಸ್ಸಿನಿಂದ ಉತ್ತರಿಸಿದ. ವಾರದ ಬಳಿಕ ಸುಜಯ್, ತಂದೆಯ ಆರೋಗ್ಯ ತೀರಾ ಹದಗೆಟ್ಟಿದ್ದು, ತಾನು ರಜೆ ಹಾಕಿ ಹೋಗುತ್ತಿರುವುದಾಗಿ ಸಚಿನ್‌ಗೆ ತಿಳಿಸಿದ. ಸುಜಯ್‌ನ ಪರಿಸ್ಥಿತಿಯನ್ನು ಇತರ ಸಹೋದ್ಯೋಗಿಗಳಿಗೂ ತಿಳಿಸಿ, ಅವನ ಕೆಲಸಗಳನ್ನು ಎಲ್ಲರೂ ಹಂಚಿಕೊಳ್ಳುವ ಮೂಲಕ ಸಚಿನ್, ಸುಜಯ್‌ಗೆ ತುಂಬಾ ಸಹಾಯ ಮಾಡಿದ.
ಖುದ್ದು ನೆರವು
ತಂದೆ ತೀರಿಕೊಂಡದ್ದರಿಂದಾಗಿ ಸುಜಯ್ ರಜೆ ವಿಸ್ತರಿಸಬೇಕಾಗಿ ಬಂತು ಮತ್ತು ಒಂದು ತಿಂಗಳ ಬಳಿಕ ಕೆಲಸಕ್ಕೆ ಹಾಜರಾದ. ಕೆಲವು ವಾರಗಳ ಬಳಿಕ ಸಂಜೆಯ ಚಹಾದ ವೇಳೆಗೆ ಸುಜಯ್ ಬಳಿ ಈಗ ಹೇಗಿದೆ ಪರಿಸ್ಥಿತಿ, ಎಲ್ಲವೂ ಕುಶಲವೇ ಎಂದು ಸಚಿನ್ ಪ್ರಶ್ನಿಸಿದ. ರಾತ್ರಿ ನಿದ್ದೆ ಸರಿಯಾಗಿ ಬರುತ್ತಿಲ್ಲ; ನಿದ್ದೆ ಹೋಗುವುದಕ್ಕಾಗಿ ಮದ್ಯದ ಮೊರೆ ಹೋಗುತ್ತಿದ್ದೇನೆ, ಇನ್ನೆಲ್ಲವೂ ಸರಿಹೋಗಬಹುದು ಎಂದು ಸುಜಯ್ ಉತ್ತರಿಸಿದ. ಮುಂದಿನ ಕೆಲವು ವಾರಗಳಲ್ಲಿ ಸುಜಯ್ ಕೆಲಸಕ್ಕೆ ಸರಿಯಾಗಿ ಹಾಜರಾಗುತ್ತಿಲ್ಲದಿರುವುದನ್ನು ಸಚಿನ್ ಗಮನಿಸಿದ. ಸುಜಯ್ ಹೇಗಿದ್ದಾನೆ ಎಂಬುದನ್ನು ಸಚಿನ್ ಆಗಾಗ ಕರೆ ಮಾಡಿ ವಿಚಾರಿಸುತ್ತಿದ್ದ. ಒಂದು ದಿನ ಸಂಜೆಯ ವಾಕಿಂಗ್ ವೇಳೆಗೆ ಸಚಿನ್ ಸುಜಯ್‌ನನ್ನೂ ಕರೆದ. ಆ ಸಂದರ್ಭದಲ್ಲಿ ಕೋವಿಡ್ ವೇಳೆ ತನ್ನ ತಾಯಿ ಮೃತಪಟ್ಟದ್ದು, ಆಗ ತಾನು ಎದುರಿಸಿದ ಪರಿಸ್ಥಿತಿಯನ್ನು ಸಚಿನ್ ಸುಜಯ್‌ಗೆ ವಿವರಿಸಿದ.
ಒಂದು ಸೋಮವಾರ ತಡರಾತ್ರಿ ಸಚಿನ್‌ಗೆ ಸುಜಯ್‌ನ ದೂರವಾಣಿ ಕರೆ ಬಂತು. ಸಾಕಷ್ಟು ಮದ್ಯಪಾನ ಮಾಡಿದ್ದ ಸುಜಯ್ ಅಳುತ್ತಿದ್ದ. ಹೆತ್ತವರಿಗೆ ತಾನು ಒಳ್ಳೆಯ ಮಗನಾಗಲು ವಿಫಲನಾದೆ, ಅಪ್ಪನಿಗೆ ಸಹಾಯ ಮಾಡಲು ತನ್ನಿಂದ ಆಗಲಿಲ್ಲ, ಇಂತಹ ಪರಿಸ್ಥಿತಿಯಲ್ಲಿ ಬದುಕೇ ಬೇಡ ಅನ್ನಿಸುತ್ತಿದೆ ಎಂದೆಲ್ಲ ಹೇಳಿ ಸುಜಯ್ ಚೆನ್ನಾಗಿ ಅತ್ತ. ಸುಜಯ್ ಎಲ್ಲಿದ್ದಾನೆ ಎಂಬುದನ್ನು ಕೇಳಿ ತಿಳಿದುಕೊಂಡ ಸಚಿನ್ ಒಬ್ಬನೇ ಇರುವುದು ಬೇಡ ಎಂದು ಸಲಹೆ ನೀಡಿದ. ಸುಜಯ್ ತನ್ನ ಕುಟುಂಬದಿಂದ ದೂರವಾಗಿ ವಾಸಿಸುತ್ತಿರುವುದರಿಂದ ಆ ರಾತ್ರಿ ಮಲಗುವುದಕ್ಕೆ ತನ್ನ ಮನೆಗೆ ಬರುವಂತೆ ಸಚಿನ್ ಕೇಳಿಕೊಂಡ.
ಸಂಪರ್ಕ ಸಹಾಯ
ಮರುದಿನ ಬೆಳಗ್ಗೆ ತನ್ನ ಸ್ನೇಹಿತನಾಗಿರುವ ಮಾನಸಿಕ ಆರೋಗ್ಯ ವೃತ್ತಿಪರರೊಬ್ಬರನ್ನು ಭೇಟಿಯಾಗುವಂತೆ ಸಚಿನ್ ಸುಜಯ್‌ಗೆ ಸಲಹೆ ನೀಡಿದ. ಹಿಂದಿನ ದಿನ ತನ್ನ ತೀರಿಕೊಂಡ ತಂದೆಯ ಜನ್ಮದಿನವಾಗಿತ್ತು, ಅದರಿಂದಾಗಿ ದುರದೃಷ್ಟವಶಾತ್ ಸ್ವಲ್ಪ ಹೆಚ್ಚಾಗಿಯೇ ಮದ್ಯಪಾನ ಮಾಡಿದ್ದೆ ಎಂದು ಸುಜಯ್ ಕ್ಷಮೆ ಕೇಳಿದ. ಸುಜಯ್ ಬಗ್ಗೆ ತನಗೆ ತುಂಬಾ ಚಿಂತೆಯಾಗಿತ್ತು ಮತ್ತು ತೊಂದರೆಯಾಗುತ್ತಿದೆ ಎನಿಸಿದರೆ ಹಿಂಜರಿಯದೆ ತನ್ನಲ್ಲಿ ಎಲ್ಲವನ್ನೂ ಹೇಳಿಕೊಳ್ಳುವಂತೆ ಸಚಿನ್ ಪ್ರೀತಿಯಿಂದ ಸುಜಯ್‌ನನ್ನು ಕೇಳಿಕೊಂಡ.
ಅನುಸರಣೆ
ಇದಾದ ಬಳಿಕ ಸುಜಯ್ ಮತ್ತು ಸಚಿನ್ ಕೆಲಸ ಮುಗಿಸಿದ ಬಳಿಕ ಸಂಜೆಯ ಚಹಾ ವೇಳೆಗೆ ನಿಯಮಿತವಾಗಿ ಭೇಟಿಯಾಗುತ್ತಿದ್ದರು. ಒಂದು ವಾರದ ಬಳಿಕ ಮಾನಸಿಕ ಆರೋಗ್ಯ ವೃತ್ತಿಪರ ಸ್ನೇಹಿತನ ದೂರವಾಣಿ ಸಂಖ್ಯೆಯನ್ನು ಕಳುಹಿಸುವಂತೆ ಸುಜಯ್ ಸಚಿನ್‌ನನ್ನು ಕೇಳಿಕೊಂಡ.
ತನ್ನ ತಾಯಿಯ ದೇಹಾಂತವಾದ ಸಂದರ್ಭದಲ್ಲಿ ತನ್ನ ಸಂಬಂಧಿ ತನಗೆ ನೀಡಿದ್ದ ಆಪ್ತ ಸಮಾಲೋಚಕನ ದೂರವಾಣಿ ಸಂಖ್ಯೆಯನ್ನು ಈಗ ಸುಜಯ್‌ಗೆ ನೀಡುವ ಮೂಲಕ ಉಪಕಾರಕ್ಕೆ ಪ್ರತ್ಯುಪಕಾರ ಮಾಡಲು ಸಚಿನ್‌ಗೆ ತುಂಬಾ ಸಂತೋಷ ಎನ್ನಿಸಿತ್ತು.
ಆತ್ಮಹತ್ಯೆ ತಡೆ
ಆತ್ಮಹತ್ಯೆಗಳನ್ನು ತಡೆಗಟ್ಟುವುದಕ್ಕೆ ಮಾನಸಿಕ ಅನಾರೋಗ್ಯದ ಬಗ್ಗೆ ಸಮಾಜದಲ್ಲಿ ಇರುವ ತಪ್ಪುಕಲ್ಪನೆ ಗಳನ್ನು ನಿವಾರಿಸುವುದು ತುಂಬಾ ಮುಖ್ಯವಾಗಿದೆ. ಇದರ ಜತೆಗೆ ಸಮುದಾಯ ಪಾಲ್ಗೊಳ್ಳುವಿಕೆಯು ಹೆಚ್ಚಬೇಕು ಮತ್ತು ಜನರು ಸಕ್ರಿಯವಾಗಿ ಈ ನಿಟ್ಟಿನಲ್ಲಿ ಮುಂದೆ ಬರಬೇಕು. ಜನರು ತಮ್ಮ ಬದುಕಿನ ಸುರಕ್ಷಿತ ಪಯಣವನ್ನು ವ್ಯಕ್ತಪಡಿಸುವುದಕ್ಕೆ ಮುಕ್ತ ಅವಕಾಶ, ತಾವು ಪಡೆದ ಸಹಾಯವನ್ನು ಸ್ಮರಿಸಿಕೊಂಡು ಇನ್ನೊಬ್ಬರಿಗೆ ಸಹಾಯ ಹಸ್ತ ಚಾಚುವುದು ಈ ನಿಟ್ಟಿನಲ್ಲಿ ಅರಿವು ವಿಸ್ತರಿಸುವುದಕ್ಕೆ ಮತ್ತು ವಿಶ್ವಾಸ ಮೂಡಿಸುವುದಕ್ಕೆ ತುಂಬಾ ನೆರವಾಗುತ್ತದೆ. ಮಾನಸಿಕ ಆರೋಗ್ಯ ಸೇವೆ ಮತ್ತು ಆಪ್ತ ಸಮಾಲೋಚನೆ ಸೇವೆಗಳು ಶಾಲಾಕಾಲೇಜು, ಸಮುದಾಯ ಮತ್ತಿತರ ವಿವಿಧ ಹಂತಗಳಲ್ಲಿ ಈಗ ಲಭ್ಯವಿರುವುದರಿಂದ ವಿದ್ಯಾರ್ಥಿಗಳು ಮತ್ತು ಮಕ್ಕಳಲ್ಲಿ ಆತ್ಮಹತ್ಯೆ ತಡೆ ಈ ಕಾಲಘಟ್ಟದ ಅಗತ್ಯವಾಗಿದೆ.
-ಡಾ| ಅವಿನಾಶ್ ಜಿ. ಕಾಮತ್
ಕನ್ಸಲ್ಟಂಟ್, ಚೈಲ್ಡ್ ಆ್ಯಂಡ್ ಅಡೊಲಸೆಂಟ್ ಸೈಕಿಯಾಟ್ರಿ,
ಕೆಎಂಸಿ ಆಸ್ಪತ್ರೆ, ಡಾ| ಬಿ.ಆರ್.
ಅಂಬೇಡ್ಕರ್ ವೃತ್ತ, ಮಂಗಳೂರು
(ಈ ಲೇಖನದಲ್ಲಿರುವ ವಿಚಾರಗಳ ಬಗ್ಗೆ ಹೆಚ್ಚಿನ ಮಾಹಿತಿಗಳಿಗಾಗಿ ಸಂಪರ್ಕಿಸಿ:ಮುಖ್ಯಸ್ಥರು, ಸೈಕಿಯಾಟ್ರಿ ವಿಭಾಗ, ಕೆಎಂಸಿ, ಮಂಗಳೂರು)