ಪುತ್ತೂರು: ಅಕ್ಷರದಾಸೋಹ ಯೋಜನೆಯಡಿ ಮಕ್ಕಳ ಬಿಸಿಯೂಟಕ್ಕೆ ಸರಬರಾಜು ಆಗುತ್ತಿದ್ದ ಆಹಾರ ಪದಾರ್ಥ ಗಳನ್ನು ಮಾರಾಟ ಮಾಡಿರುವ ಆರೋಪದಲ್ಲಿ ಹಾರಾಡಿ ಉನ್ನತ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯಶಿಕ್ಷಕ ಮುದರ ಅವರನ್ನು ಅಮಾನತುಗೊಳಿಸಿ ದಕ್ಷಿಣ ಕನ್ನಡ ಜಿಲ್ಲಾ ವಿದ್ಯಾಂಗ ಉಪನಿರ್ದೇಶಕರು (ಡಿಡಿಪಿಐ) ಆದೇಶ ನೀಡಿದ್ದಾರೆ.
ಮಕ್ಕಳ ಬಿಯೂಟದ 11 ಚೀಲ ಅಕ್ಕಿ ಮತ್ತು ಇತರ ಸಾಮಗ್ರಿಗಳನ್ನು ಮಾರಾಟ ಮಾಡಿ ತಪ್ಪು ಲೆಕ್ಕವನ್ನು ದಾಖಲಿಸುತ್ತಿದ್ದ ಮುಖ್ಯಶಿಕ್ಷಕರ ವಿರುದ್ಧ ಹಾರಾಡಿ ಶಾಲಾ ಎಸ್‌ಡಿಎಂಸಿಯು ಜಿ.ಪಂ. ಅಕ್ಷರ ದಾಸೋಹ ಯೋಜನೆಯ ಶಿಕ್ಷಣಾಧಿಕಾರಿಗೆ ದೂರು ನೀಡಿತ್ತು. ಪುತ್ತೂರು ತಾ.ಪಂ. ಅಧ್ಯಕ್ಷ ಕೆ. ರಾಧಾಕೃಷ್ಣ ಬೋರ್ಕರ್ ಅವರು ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿದ್ದರು. ದ.ಕ. ಜಿ.ಪಂ. ಸಾಮಾನ್ಯ ಸಭೆಯಲ್ಲೂ ಈ ವಿಚಾರ ಪ್ರಸ್ತಾವವಾಗಿತ್ತು.
ಹಾರಾಡಿ ಶಾಲೆಗೆ ಭೇಟಿ ನೀಡಿದ ಜಿ.ಪಂ. ಅಕ್ಷರ ದಾಸೋಹ ಯೋಜನೆಯ ಶಿಕ್ಷಣಾಧಿಕಾರಿ ರಾಜಲಕ್ಷ್ಮೀ, ತಾ.ಪಂ. ಕಾರ್ಯ ನಿರ್ವಹಣಾಧಿಕಾರಿ ಜಗದೀಶ್ ಎಸ್., ಅಕ್ಷರದಾಸೋಹ ಯೋಜ ನೆಯ ಸಹಾಯಕ ನಿರ್ದೇಶಕ ಸುರೇಶ್ ಕುಮಾರ್ ಅವರು ಶಾಲಾ ಎಸ್‌ಡಿಎಂಸಿ ಸದಸ್ಯರ ಉಪಸ್ಥಿತಿಯಲ್ಲಿ ತನಿಖೆ ನಡೆಸಿ ಜಿ.ಪಂ.ಗೆ ವರದಿ ಸಲ್ಲಿಸಿದ್ದರು.
ಜಿ.ಪಂ. ಸಿಇಒ ಅವರು ತನಿಖಾ ವರದಿ ಪರಿಶೀಲಿಸಿ ಡಿಡಿಪಿಐ ಅವರಿಗೆ ಮುಂದಿನ ಕ್ರಮಕ್ಕೆ ರವಾನಿಸು ವಂತೆ ಜಿಲ್ಲಾ ಅಕ್ಷರ ದಾಸೋಹ ಶಿಕ್ಷಣಾಧಿಕಾರಿ ಅವರಿಗೆ ಸೂಚನೆ ನೀಡಿದ್ದರು. ಇದರಂತೆ ಶಿಕ್ಷಣ ಇಲಾಖೆಗೆ ವರದಿ ಸಲ್ಲಿಕೆಯಾಗಿತ್ತು. ವರದಿಯನ್ನು ಪರಿಶೀಲಿಸಿದ ಡಿಡಿಪಿಐ ವೈ. ಶಿವರಾಮಯ್ಯ ಅವರು ತನಿಖಾ ವರದಿಯಲ್ಲಿ ಮುಖ್ಯಶಿಕ್ಷಕ ಮುದರ ಅವರ ಮೇಲಿನ ಆರೋಪ ಮೇಲ್ನೋಟಕ್ಕೆ ಸಾಬೀತಾಗಿದೆ ಎಂದು ಅಮಾನತುಗೊಳಿಸಿ ಆದೇಶಿಸಿದ್ದಾರೆ.
ಹಾರಾಡಿ ಶಾಲೆಯಲ್ಲಿ ತೆರವಾದ ಮುಖ್ಯಶಿಕ್ಷಕರ ಹುದ್ದೆಗೆ ಶಾಲೆಯ ಹಿರಿಯ ಶಿಕ್ಷಕಿ ಪ್ರಿಯಾ ಕುಮಾರಿ ಅವರನ್ನು ನೇಮಕಗೊಳಿಸಿ ಆದೇಶಿಸಲಾಗಿದೆ.