ವೈದ್ಯಕೀಯ ಜಗತ್ತಿನಲ್ಲಿ “ಕ್ಯಾನ್ಸರ್’ಎಂಬ ಪದ ಭಯವನ್ನು ಉತ್ಪಾದಿಸುವಂಥದ್ದು, ನೋವು, ಪಕ್ಷಪಾತ, ಅಡ್ಡ ಪರಿಣಾಮಗಳು, ಕೆಲಸ ಮಾಡುವ ಸಾಮರ್ಥ್ಯವನ್ನು ಕಳೆದುಕೊಳ್ಳುವುದು ಮತ್ತು ಎಲ್ಲಕ್ಕಿಂತ ಹೆಚ್ಚಾಗಿ ಮೃತ್ಯುವಿನ ಭಯ ಕ್ಯಾನ್ಸರ್ ಎಂಬ ಪದದ ಜತೆಗೆ ಸಮ್ಮಿಳಿತವಾಗಿವೆ. ರೋಗಿಯ ಪಾಲಿಗೆ ಕುತ್ತಿಗೆ ಮತ್ತು ತಲೆಯ ಕ್ಯಾನ್ಸರ್‌ಗಿಂತ ಹೆಚ್ಚು ಗಮನಾರ್ಹವಾಗಿ ಕಂಡುಬರುವ ಕ್ಯಾನ್ಸರ್ ಇನ್ನೊಂದಿಲ್ಲ. ತಲೆ ಮತ್ತು ಕುತ್ತಿಗೆಯ ಕ್ಯಾನ್ಸರ್‌ಗಳು ಪ್ರಾಮುಖ್ಯವಾಗಿ ಬಾಯಿ ಮತ್ತು ಗಂಟಲಿನ ಕ್ಯಾನ್ಸರ್‌ಗಳೇ ಆಗಿವೆ. ನಮ್ಮ ದೇಶದಲ್ಲಿ ಬಹಳ ಸಾಮಾನ್ಯವಾಗಿ ಕಂಡುಬರುವ ಕ್ಯಾನ್ಸರ್‌ಗಳಲ್ಲಿ ಇವು ಮುಖ್ಯವಾದವು; ಭಾರತದಲ್ಲಿ ಕಂಡುಬರುವ ಕ್ಯಾನ್ಸರ್ ಪ್ರಕರಣಗಳಲ್ಲಿ ಶೇ.30ರಷ್ಟು ಬಾಯಿಯ ಕ್ಯಾನ್ಸರ್‌ಗಳಾಗಿವೆ. ಎಪ್ರಿಲ್‌ನಲ್ಲಿ ಆಚರಿಸಲಾಗುವ ತಲೆ ಮತ್ತು ಕುತ್ತಿಗೆಯ ಕ್ಯಾನ್ಸರ್ ಸಪ್ತಾಹದ ಹಿನ್ನೆಲೆಯಲ್ಲಿ ಪ್ರಶ್ನೋತ್ತರ ರೂಪದಲ್ಲಿರುವ ಈ ಲೇಖನವು ವೈದ್ಯರನ್ನು ಒಳಗೊಂಡಂತೆ ತಲೆ ಮತ್ತು ಕುತ್ತಿಗೆಯ ಕ್ಯಾನ್ಸರ್ ಬಗ್ಗೆ ರೋಗಿಗಳು ಮತ್ತು ಅವರ ಆರೈಕೆಯನ್ನು ನೋಡಿಕೊಳ್ಳುತ್ತಿರುವವರಿಗೆ ಸಂಶಯ, ತಪ್ಪು ಕಲ್ಪನೆಗಳನ್ನು ನಿವಾರಿಸಿ ಸರಿಯಾದ ಮಾಹಿತಿ ನೀಡುವ ಉದ್ದೇಶವನ್ನು ಹೊಂದಿದೆ.
1. ನನ್ನ ತಂದೆ ತಮ್ಮ ಬದುಕಿನಲ್ಲಿ ಎಂದೂ ಸಿಗರೇಟು ಸೇದಿದವರಲ್ಲ. ಆದರೂ ಈ ಕ್ಯಾನ್ಸರ್ ಅವರನ್ನು ಯಾಕೆ ಆಕ್ರಮಿಸಿತು?
ಅನೇಕ ಕ್ಯಾನ್ಸರ್‌ಗಳಿಗೆ ಸಂಬಂಧಿಸಿದಂತೆ, ಕ್ಯಾನ್ಸರ್ ಯಾಕೆ ಉಂಟಾಗುತ್ತದೆ ಎಂಬುದಕ್ಕೆ ಇನ್ನೂ ಸಮರ್ಪಕ ಉತ್ತರಗಳಿಲ್ಲ. ಆದರೆ, ಕ್ಯಾನ್ಸರ್‌ಗೆ ತುತ್ತಾಗಿರುವ ರೋಗಿಗಳನ್ನು ತಪಾಸಣೆ ಮಾಡುವಾಗ, ಕ್ಯಾನ್ಸರ್‌ನ ಅಪಾಯಾಂಶಗಳು ಎಂಬುದಾಗಿ ಗುರುತಿಸಲ್ಪಡುವ ಅನೇಕ ಗುಣನಡತೆಗಳು, ಅಭ್ಯಾಸಗಳು ಹೆಚ್ಚು ಕಂಡುಬರುವುದಿದೆ. ಧೂಮಪಾನ ಮತ್ತು ತಂಬಾಕು ಸೇವನೆಗಳು ಕ್ಯಾನ್ಸರ್‌ನ ಅತಿ ಸಾಮಾನ್ಯವಾಗಿ ಗುರುತಿಸಲ್ಪಡುವ ಅಪಾಯಾಂಶಗಳಾಗಿವೆ. ಪ್ರತಿಯೊಬ್ಬ ಧೂಮಪಾನಿಯೂ ಕ್ಯಾನ್ಸರ್‌ಗೆ ತುತ್ತಾಗುತ್ತಾರೆ ಎಂದಲ್ಲ; ಧೂಮಪಾನ ಮಾಡದವರು ಕ್ಯಾನ್ಸರ್ ಅಪಾಯ ಹೊಂದಿರುವುದಿಲ್ಲ ಎಂದೂ ಅಲ್ಲ. ಆದರೆ, ಧೂಮಪಾನ, ಮದ್ಯಪಾನ, ತಂಬಾಕು ಜಗಿಯುವಂತಹ ದೀರ್ಘಕಾಲಿಕ ಚಟಗಳು ಬಹುತೇಕ ಕುತ್ತಿಗೆ ಮತ್ತು ತಲೆಯ ಕ್ಯಾನ್ಸರ್ ರೋಗಿಗಳಲ್ಲಿ ಕಂಡುಬರುವ ಸಾಮಾನ್ಯ ಲಕ್ಷಣಗಳಾಗಿವೆ. ಕೆಲವೇ ಕೆಲವು ಮಂದಿ ರೋಗಿಗಳು ತಂಬಾಕು ಸೇವನೆ ಅಥವಾ ಇತರ ಅಪಾಯಾಂಶಗಳನ್ನು ಹೊಂದಿರುವುದಿಲ್ಲ. ಇದಲ್ಲದೆ, ಸೇವನೆಯ ಪ್ರಮಾಣದ ಜತೆಗೂ ಕ್ಯಾನ್ಸರ್ ಉಂಟಾಗುವುದಕ್ಕೆ ಸಂಬಂಧ ಇರುವುದು ಕಂಡುಬರುತ್ತದೆ; ಭಾರೀ ಪ್ರಮಾಣದಲ್ಲಿ ಮತ್ತು ದೀರ್ಘಕಾಲೀನವಾಗಿ ತಂಬಾಕು ಸೇವಿಸುತ್ತಿರುವವರು ಯಾವಾಗಾದರೊಮ್ಮೆ ಸೇವಿಸುವವರಿಗಿಂತ ಹೆಚ್ಚು ಪ್ರಮಾಣದಲ್ಲಿ ಕ್ಯಾನ್ಸರ್‌ಗೆ ತುತ್ತಾಗುವುದು ಕಂಡುಬರುತ್ತದೆ.
ಜನಪ್ರಿಯ ನಂಬಿಕೆಗೆ ತದ್ವಿರುದ್ಧವಾಗಿ, ಅಡಿಕೆ ಜಗಿಯುವುದು ಕೂಡ ಕ್ಯಾನ್ಸರ್‌ಗೆ ತುತ್ತಾಗುವ ಅಪಾಯವನ್ನು ವೃದ್ಧಿಸುತ್ತದೆ ಎಂಬುದಕ್ಕೆ ಸಾಕ್ಷ್ಯಾಧಾರಗಳಿವೆ. ಒಂದು ಭಾರತೀಯ ಅಧ್ಯಯನದ ಪ್ರಕಾರ, ಬರೇ ಅಡಿಕೆ ಜಗಿಯುವ ಅಭ್ಯಾಸವೂ ಕ್ಯಾನ್ಸರ್‌ಗೆ ತುತ್ತಾಗುವ ಅಪಾಯವನ್ನು ಮೂರು ಪಟ್ಟು ಹೆಚ್ಚಿಸುತ್ತದೆ; ಅಡಿಕೆಯ ಜತೆಗೆ ತಂಬಾಕು ಸೇರಿಸಿ ಜಗಿಯುವವರು ಕುತ್ತಿಗೆ ಮತ್ತು ತಲೆಯ ಕ್ಯಾನ್ಸರ್‌ಗೆ ತುತ್ತಾಗುವ ಅಪಾಯ 15 ಪಟ್ಟು ಹೆಚ್ಚಿರುತ್ತದೆ. ಚಟಗಳ ಜತೆಗೆ, ಕುತ್ತಿಗೆ ಮತ್ತು ತಲೆಯ ಕ್ಯಾನ್ಸರ್ ಅಪಾಯವನ್ನು ವೃದ್ಧಿಸುವ ಇನ್ನೂ ಅನೇಕ ಅಂಶಗಳಿವೆ. ಹ್ಯೂಮನ್ ಪ್ಯಾಪಿಲೊಮಾ ವೈರಲ್ (ಎಚ್‌ಪಿವಿ), ಎಪ್‌ಸ್ಟೈನ್ ಬಾರ್ ವೈರಸ್ (ಇಬಿವಿ) ಮತ್ತು ಎಚ್‌ಐವಿಯಂತಹ ದೀರ್ಘಕಾಲಿಕ ವೈರಸ್ ಸೋಂಕುಗಳು ಕೂಡ ಕುತ್ತಿಗೆ ಮತ್ತು ತಲೆಯ ಕ್ಯಾನ್ಸರ್ ತಗಲುವ ಅಪಾಯವನ್ನು ಹೆಚ್ಚಿಸುತ್ತವೆ. ಜವುಳಿ, ರಬ್ಬರ್, ಪ್ಲಾಸ್ಟಿಕ್, ನಿರ್ಮಾಣ ಕಾಮಗಾರಿ, ಚರ್ಮ ಮತ್ತು ಮರಗೆಲಸದಂತಹ ನಿರ್ದಿಷ್ಟ ಕೈಗಾರಿಕೆಗಳಲ್ಲಿ ಕೆಲಸ ಮಾಡುವವರು ಕೂಡ ಕುತ್ತಿಗೆ ಮತ್ತು ತಲೆಯ ಕ್ಯಾನ್ಸರ್‌ಗೆ ತುತ್ತಾಗುವ ಅಪಾಯ ಹೆಚ್ಚಾಗಿರುತ್ತದೆ ಎಂಬುದಾಗಿ ಕಂಡುಬಂದಿದೆ. ಈ ಕ್ಯಾನ್ಸರ್‌ಗಳು ಕೌಟುಂಬಿಕ ಅಥವಾ ವಂಶವಾಹಿಯಲ್ಲ; ಆದರೆ ಕುಟುಂಬ ಸದಸ್ಯರಿಗೆ ಪಶ್ಚಾತ್ ಧೂಮಪಾನದಿಂದ ಕ್ಯಾನ್ಸರ್ ಉಂಟಾಗುವ ಸಾಧ್ಯತೆ ಹೆಚ್ಚುವುದನ್ನು ಅಲ್ಲಗಳೆಯುವಂತಿಲ್ಲ.
– ಮುಂದಿನ ವಾರಕ್ಕೆ
– ಡಾ| ಕೃಷ್ಣ ಶರಣ್ ,
ಪ್ರೊಫೆಸರ್ ಮತ್ತು ಹೆಡ್
ರೇಡಿಯೊಥೆರಪಿ ಮತ್ತು ಓಂಕಾಲಜಿ ವಿಭಾಗ, ಕಸ್ತೂರ್ಬಾ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆ
ಮಣಿಪಾಲ