ದಾವಣಗೆರೆ: ನಗರದ ಸರ್ಕಾರಿ ಕಾಲೇಜಿನ ಪ್ರಥಮ ಬಿ.ಎ, ಬಿ.ಕಾಂ, ಬಿಎಸ್ಸಿ ವಿದ್ಯಾರ್ಥಿಗಳು ಕೊಠಡಿಗಳು ಸಾಲದೇ, ಸೈಕಲ್, ಬೈಕ್ ನಿಲ್ಲಿಸುವ ಜಾಗದಲ್ಲಿ ಗುರುವಾರ ಆಂಗ್ಲ ಭಾಷೆ ಪರೀಕ್ಷೆ ಬರೆದಿದ್ದಾರೆ.
ವಿದ್ಯಾನಗರದ ಸರ್ಕಾರಿ ಪ್ರಥಮ ಕಾಲೇಜು ಈ ಅವ್ಯವಸ್ಥೆಗೆ ಸಾಕ್ಷಿಯಾಗಿದ್ದು, ಕಾಲೇಜಲ್ಲಿ ಪ್ರತಿ ಬಾರಿ ಆಂಗ್ಲಭಾಷೆ ಪರೀಕ್ಷೆ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ಆಸನಗಳು ಮತ್ತು ಕೊಠಡಿಗಳ ಸಮಸ್ಯೆಯಿಂದ ಪರಿತಪಿಸುವ ಬವಣೆ ಮಾತ್ರ ತಪ್ಪಿಲ್ಲ.
3600 ವಿದ್ಯಾರ್ಥಿಗಳಿರುವ ಈ ಕಾಲೇಜಿನಲ್ಲಿ ಪ್ರಥಮ ಬಿ.ಎ, ಬಿ.ಕಾಂ, ಬಿಎಸ್ಸಿ ಪದವಿ ವಿದ್ಯಾರ್ಥಿಗಳಿಗೆ ಆಂಗ್ಲಭಾಷೆ ಪರೀಕ್ಷೆ ನಡೆಯಿತು. ಬೆಳಿಗ್ಗೆ 9.30ರಿಂದ ಮಧ್ಯಾಹ್ನ 12.30ರ ವರೆಗೆ ಅನುತ್ತೀರ್ಣ ವಿದ್ಯಾರ್ಥಿಗಳಿಗೆ ಹಾಗೂ ಮಧ್ಯಾಹ್ನ 2 ರಿಂದ ಸಂಜೆ 5ರವರೆಗೆ ರೆಗ್ಯೂಲರ್ ವಿದ್ಯಾರ್ಥಿಗಳಿಗೆ ಆಂಗ್ಲ ಭಾಷಾ ಪರೀಕ್ಷೆ ವೇಳಾಪಟ್ಟಿ ಇತ್ತು. ಕೊಠಡಿಗಳ ಕೊರತೆ ಆಗಿದ್ದರಿಂದ ಹೊರಗಿನ ಸೈಕಲ್, ಬೈಕ್ ಸ್ಟ್ಯಾಂಡ್ ನಲ್ಲಿ 200ಕ್ಕೂ ಹೆಚ್ಚು ವಿದ್ಯಾರ್ಥಿಗಳು ಪರೀಕ್ಷೆ ಬರೆದರು.
ಊಟದ ಟೇಬಲ್: ವಿದ್ಯಾರ್ಥಿಗಳು ಪರೀಕ್ಷೆ ಬರೆಯಲು ಹಾಗೂ ಕುಳಿತುಕೊಳ್ಳಲು ಮದುವೆ, ಇತರೆ ಸಮಾರಂಭಗಳಲ್ಲಿ ಊಟಕ್ಕೆ ಬಳಸುವ ಟೇಬಲ್, ಕುರ್ಚಿಗಳ ವ್ಯವಸ್ಥೆ ಮಾಡಲಾಗಿತ್ತು. ಕೆಲವು ಟೇಬಲ್‌ಗಳು ಸುಸ್ಥಿತಿಯಲ್ಲಿದ್ದರೆ ಮತ್ತೆ ಕೆಲವು ಅಲ್ಲಾಡುತ್ತಿದ್ದವು. ತಗ್ಗು-ಗುಂಡಿ ನೆಲದಿಂದಾಗಿ ಅಲ್ಲಾಡುವ ಟೇಬಲ್ ಮೇಲೆ ವಿದ್ಯಾರ್ಥಿಗಳು ಕಿರಿಕಿರಿ ಅನುಭವಿಸುತ್ತಲೇ ಪರೀಕ್ಷೆ ಬರೆಯುವಂತಾಯಿತು.
ಆಂಗ್ಲಭಾಷೆ ಪರೀಕ್ಷೆ ಬಿ.ಎ, ಬಿಕಾಂ, ಬಿಎಸ್ಸಿ ವಿದ್ಯಾರ್ಥಿಗಳಿಗೆ ಒಟ್ಟಿಗೆ ನಡೆಯುತ್ತಿರುವುದರಿಂದ ಟೇಬಲ್, ಕುರ್ಚಿಗಳ ಕೊರತೆ ಆಗುತ್ತದೆ. ಇನ್ನುಳಿದ ಐಚ್ಛಿಕ ವಿಷಯಗಳ ಪರೀಕ್ಷೆಗೆ ಯಾವುದೇ ತೊಂದರೆ ಆಗುವುದಿಲ್ಲ. ಇಂದು ಕಾಲೇಜಿನ 34 ಕೊಠಡಿಗಳಲ್ಲಿ 1,400 ವಿದ್ಯಾರ್ಥಿಗಳು ಹಾಗೂ ಹೊರಗಡೆ 200ಕ್ಕೂ ಹೆಚ್ಚು ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದಾರೆ.
ಈಗಾಗಲೇ ರೂಸಾದಿಂದ 6 ಕೊಠಡಿ, ಶಾಸಕರು, ಸಂಸದರ ನಿಧಿಯಿಂದ ತಲಾ ಒಂದೊಂದು ಕೊಠಡಿ ಸೇರಿ ಒಟ್ಟು 8 ಕೊಠಡಿ ನಿರ್ಮಾಣ ಆಗುತ್ತಿವೆ. ಇನ್ನೂ ಕೇವಲ ಒಂದು ತಿಂಗಳಲ್ಲಿ ಈ ಎಲ್ಲಾ ಕೊಠಡಿಗಳು ಲಭ್ಯ ಆಗುವುದರಿಂದ ಮುಂದೆ ಈ ರೀತಿ ಆಸನ, ಕೊಠಡಿಗಳ ಸಮಸ್ಯೆ ವಿದ್ಯಾರ್ಥಿಗಳಿಗೆ ಆಗುವುದಿಲ್ಲ.
– ಶಂಕರ್ ಆರ್. ಶೀಲಿ, ಸರ್ಕಾರಿ ಪ್ರಥಮ
ದರ್ಜೆ ಕಾಲೇಜು ಪ್ರಾಂಶುಪಾಲರು.