Advertisement
ಈ ಯುದ್ಧದಲ್ಲಿ ಜತೆಗೆ ಇತರ ಏಳು ಜನ ಸೈನಿಕರೆಲ್ಲ ವೀರ ಮರಣವನ್ನಪ್ಪಿದ್ದರು. ನಾನೂ 48 ಗಂಟೆಗಳ ಮರಣ ಹೊಂದಿದ ಸೈನಿಕರ ಶವಗಳೊಂದಿಗೆ ಬಿದ್ದಿದ್ದೆ. ಮೈ ಮೇಲೆ ಒಂದೂವರೆ ಅಡಿ ಮಂಜು ಬಿದ್ದಿತ್ತು. ಸೇನಾ ವೈದ್ಯರು-ಸೈನಿಕರು ಶವ ಸಾಗಿಸುವಾಗ ನಾನಿನ್ನೂ ಬದುಕಿದ್ದು ಗೊತ್ತಾಯಿತು.
Related Articles
Advertisement
ಶತ್ರು ಸೈನ್ಯ ಪಾಕಿಸ್ತಾನವನ್ನು ಹಿಮ್ಮೆಟ್ಟಿಸುವಲ್ಲಿ ಧೈರ್ಯದಿಂದ ಹೋರಾಡಿದ್ದರು. 20 ದಿನಗಳ ಕಾಲ ಹೋರಾಟದಲ್ಲಿ ತೊಡಗಿದ್ದರು. 21ನೇ ದಿನ ಸಂಜೆ ವಿಜಾಯಿಲ್ ಬಾಂಬ್ ಸ್ಫೋಟದಿಂದ ಇವರ ತಂಡದಲ್ಲಿದ್ದ ಏಳು ಜನ ಸೈನಿಕರು ವೀರ ಮರಣವನ್ನಪ್ಪಿದರು. ರಂಗಪ್ಪ ಕೂಡ 48 ಗಂಟೆಗಳ ಕಾಲ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದರು. ಎರಡು ಕೈ ತುಂಡಾಗಿದ್ದವು. ಒಂದು ಕಾಲು ಛಿದ್ರಗೊಂಡಿತ್ತು. ಸೇನಾಧಿಕಾರಿಗಳು ಬಂದು ಪರಿಶೀಲಿಸಿ, 8 ಸೈನಿಕರನ್ನು ಕಳೆದುಕೊಂಡೆವು ಎಂದೇ ಭಾವಿಸಿದ್ದರು. ಸೈನಿಕರ ಶವ ಸಾಗಿಸಲಾಗುತ್ತಿತ್ತು. ರಂಗಪ್ಪರೂ ಮೃತಪಟ್ಟಿದ್ದಾರೆ ಎಂದೇ ಭಾವಿಸಿ, ಶವಗಳಿರುವ ವಾಹನಕ್ಕೆ ಇವರನ್ನು ಸಾಗಿಸಲಾಗುತ್ತಿತ್ತು. ಆ ವೇಳೆ ಸೈನ್ಯದ ವೈದ್ಯರು ಪರಿಶೀಲಿಸಿದಾಗ ರಂಗಪ್ಪ ಇನ್ನೂ ಉಸಿರಾಡುತ್ತಿರುವುದು ಕಂಡು ಕೂಡಲೇ ಚಂಡೀಗಡದ ಸೇನಾ ಆಸ್ಪತ್ರೆಗೆ ಕಳುಹಿಸಿದರು. ಅಲ್ಲಿ ಆರು ತಿಂಗಳ ಕಾಲ ರಂಗಪ್ಪ ಅವರಿಗೆ ಪ್ರಜ್ಞೆಯೇ ಬಂದಿರಲಿಲ್ಲ.
ಒಟ್ಟು 28 ಶಸ್ತ್ರಚಿಕಿತ್ಸೆಗಳನ್ನು ಅವರಿಗೆ ಮಾಡಲಾಗಿತ್ತು. ಆ ಸಂದರ್ಭದಲ್ಲಿ ಅವರಿಗೆ 2ನೇ ತಾಯಿಯ ರೀತಿ ಆರೈಕೆ ಮಾಡಿದ್ದು ಕೊಡಗಿನ ಗೀತಾ ಎಂಬ ಮೇಜರ್ ನರ್ಸ್. ನನ್ನ ತಾಯಿ ಜನ್ಮ ನೀಡಿದರೆ, ಮೇಜರ್ ನರ್ಸ್ ಗೀತಾ ಅವರು ನನಗೆ ಪುನರ್ ಜನ್ಮ ನೀಡಿದವರು ಎಂದು ರಂಗಪ್ಪ ಇಂದಿಗೂ ಸ್ಮರಿಸುತ್ತಾರೆ.
ಬದುಕಿಗೂ ಹೋರಾಟ:
ರಂಗಪ್ಪರಿಗೆ ಚಂಡೀಗಡದಲ್ಲಿ 1 ವರ್ಷ, ಪುಣೆಯಲ್ಲಿ 2 ವರ್ಷ ನಿರಂತರ ಚಿಕಿತ್ಸೆ ನೀಡಿದ ಬಳಿಕ ಶೇ.100ರಷ್ಟು ಅಂಗವಿಕಲತೆಯೊಂದಿಗೆ ಬದುಕುಳಿದರು. ಬಳಿಕ ಊರಿಗೆ ಬಂದ ಅವರನ್ನು ಹೆತ್ತವರು, ಗ್ರಾಮಸ್ಥರು ಸಂಭ್ರಮದಿಂದ ಬರ ಮಾಡಿಕೊಂಡರು. ಆಗಲೇ ಅವರಿಗೆ ಬದುಕಿನ ಬಂಡಿ ಸಾಗಿಸಲು ಕಷ್ಟ ಎದುರಿಸಬೇಕಾಯಿತು. ಕಾರ್ಗಿಲ್ ಯುದ್ಧದಲ್ಲಿ ಗಾಯಗೊಂಡ ಸೈನಿಕರಿಗೆಂದು ಆಗಿನ ಸರ್ಕಾರ 1 ಲಕ್ಷ ಕೊಟ್ಟು ಕೈ ತೊಳೆದುಕೊಂಡಿತ್ತು.
ಕೇಂದ್ರ ಸರ್ಕಾರ ಗ್ಯಾಸ್ ಏಜೆನ್ಸಿ ಮಂಜೂರು ಮಾಡಿದ್ದು ಬಿಟ್ಟರೆ ಬೇರೆ ಸೌಲಭ್ಯ ಕೊಡಲಿಲ್ಲ. ಹೀಗಾಗಿ ಬೆಂಗಳೂರು, ಪುಣೆ ಅಲೆದಾಡಬೇಕಾಯಿತು. ಆಗ ಶಾಸಕರಾಗಿದ್ದ ಬೀಳಗಿಯ ಜೆ.ಟಿ. ಪಾಟೀಲರ ಒತ್ತಡ, ಪ್ರಯತ್ನದ ಫಲವಾಗಿ ಬಾಗಲಕೋಟೆಯಲ್ಲಿ ಒಂದು ನಿವೇಶನ, ಹಂಗರಗಿಯಲ್ಲಿ 4 ಎಕರೆ 35 ಗುಂಟೆ ಭೂಮಿ ಸರ್ಕಾರ ಮಂಜೂರು ಮಾಡಿತು. ಸ್ವಂತಕ್ಕೊಂದು ಮನೆ ಕಟ್ಟಿಕೊಳ್ಳಲೂ ಹಣ ಇರಲಿಲ್ಲ. ಆಗ ಬಾದಾಮಿಯಲ್ಲಿದ್ದ ಮನೆ ಮಾರಿ, ಬಾಗಲಕೋಟೆಯಲ್ಲೊಂದು ಪುಟ್ಟ ಮನೆ ಕಟ್ಟಿಕೊಂಡು ವಾಸವಾಗಿದ್ದಾರೆ. ಗ್ಯಾಸ್ ಏಜೆನ್ಸಿಯನ್ನು ಸಂಬಂಧಿಕರೊಬ್ಬರು ನೋಡಿಕೊಳ್ಳುತ್ತಿದ್ದಾರೆ. ಗ್ಯಾಸ್ ಏಜೆನ್ಸಿ, ಭೂಮಿ, ನಿವೇಶನ ಪಡೆಯಲು ಸುಮಾರು 5 ವರ್ಷಗಳ ಕಾಲ ಹೋರಾಟ ನಡೆಸಿದ್ದೇನೆ ಎಂದು ರಂಗಪ್ಪ ಹೇಳುತ್ತಾರೆ.
27ರಂದು 2ನೇ ತಾಯಿಯ ಭೇಟಿ: ಚಂಡೀಗಡ ಮತ್ತು ಪುಣೆಯ ಸೇನಾಸ್ಪತ್ರೆಯಲ್ಲಿ ನನಗೆ 3 ವರ್ಷ ನಿರಂತರ ಆರೈಕೆ ಮಾಡಿ, ಬದುಕುಳಿಯಲು ಮೂಲ ಕಾರಣರಾದ 2ನೇ ತಾಯಿ ರೂಪದ ಮೇಜರ್ ನರ್ಸ್ ಗೀತಾ ಅವರನ್ನು ಹುಡುಕದ ದಿನಗಳಿರಲಿಲ್ಲ. ಅವರಿಗಾಗಿ ಪುಣೆ, ಚಂಡೀಗಡ ಎಲ್ಲಾ ಕಡೆಯೂ ಹೋಗಿ ಬಂದಿದ್ದರು. ನಿವೃತ್ತಿಯಾದ ನರ್ಸ್ ಗೀತಾ ಅವರು, ಸದ್ಯ ಮೈಸೂರಿನಲ್ಲಿ ವಾಸವಾಗಿದ್ದಾರೆ. ಹೀಗಾಗಿ ಅವರನ್ನು ಇದೇ ಜು.27ರಂದು ಮೈಸೂರಿನಲ್ಲಿ ಭೇಟಿಯಾಗಿ ಸೀರೆ-ಕುಪ್ಪಸ, ಶಾಲು ನೀಡಿ, ಆಶೀರ್ವಾದ ಪಡೆಯಲು ಹೋಗುತ್ತಿದ್ದೇನೆ ಎಂದು ರಂಗಪ್ಪ ಕಣ್ಣಂಚಲಿ ನೀರು ತರುತ್ತ ಹೇಳಿಕೊಂಡರು.
•ಶ್ರೀಶೈಲ ಕೆ. ಬಿರಾದಾರ