ಹೊಸದಿಲ್ಲಿ: ಸ್ವಾತಂತ್ರ್ಯ ದಿನದ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದ ‘ಮುಂದಿನ ವರ್ಷ ಕೆಂಪುಕೋಟೆಯಲ್ಲಿ ಸಿಗುತ್ತೇವೆ’ ಎಂಬ ಮಾತಿಗೆ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ತಿರುಗೇಟು ನೀಡಿದ್ದಾರೆ. “ಪ್ರಧಾನಿಯವರ ಹೇಳಿಕೆಗಳು ಅವರ ದುರಹಂಕಾರವನ್ನು ತೋರಿಸುತ್ತದೆ ಮತ್ತು ಮುಂದಿನ ವರ್ಷ ಅವರು ತಮ್ಮ ಮನೆಯಲ್ಲಿ ಧ್ವಜಾರೋಹಣ ಮಾಡುತ್ತಾರೆ” ಎಂದು ಖರ್ಗೆ ಹೇಳಿದರು.
ಮುಂದಿನ ವರ್ಷವೂ ನರೇಂದ್ರ ಮೋದಿ ಅವರು ಧ್ವಜಾರೋಹಣ ಮಾಡುತ್ತಾರೆ. ಆದರೆ ಅವರು ಅವರ ಮನೆಯಲ್ಲಿ ಧ್ವಜಾರೋಹಣ ಮಾಡುತ್ತಾರೆ” ಎಂದು ಖರ್ಗೆ ಹೇಳಿದರು.
ದೆಹಲಿಯ ಕೆಂಪುಕೋಟೆಯಿಂದ ದೇಶವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ಕೆಂಪು ಕೋಟೆಯಿಂದ ತಮ್ಮ ಮುಂದಿನ ಸ್ವಾತಂತ್ರ್ಯ ದಿನದ ಭಾಷಣದಲ್ಲಿ ದೇಶದ ಸಾಧನೆಗಳನ್ನು ಪ್ರಸ್ತುತಪಡಿಸುವುದಾಗಿ ಹೇಳಿದರು.
“ಮುಂದಿನ ವರ್ಷ ಇದೇ ಕೆಂಪು ಕೋಟೆಯಿಂದ ಆಗಸ್ಟ್ 15 ರಂದು, ನಾನು ರಾಷ್ಟ್ರವು ಸಾಧಿಸಿದ ಪ್ರಗತಿಯನ್ನು ಪಟ್ಟಿ ಮಾಡುತ್ತೇನೆ. ಹೆಚ್ಚಿನ ಆತ್ಮವಿಶ್ವಾಸದಿಂದ ನಿಮ್ಮ ಶಕ್ತಿ, ನಿಮ್ಮ ಸಂಕಲ್ಪ ಮತ್ತು ನಿಮ್ಮ ಯಶಸ್ಸಿಗೆ ಕೆಲಸ ಮಾಡುತ್ತೇನೆ” ಎಂದು ಪ್ರಧಾನಿ ಮೋದಿ ಹೇಳಿದರು.
ಇದನ್ನೂ ಓದಿ:Holalkere MLA M. Chandrappa… ಹೈಟೆಕ್ ಹೊಳಲ್ಕೆರೆಯ ನಿರ್ಮಾತೃ ಡಾ|ಎಂ.ಚಂದ್ರಪ್ಪ
ಇದಕ್ಕೆ ತಿರುಗೇಟು ನೀಡಿದ ಖರ್ಗೆ, “ನಿಮ್ಮನ್ನು ಗೆಲ್ಲಿಸುವುದು ಅಥವಾ ಸೋಲಿಸುವುದು ಜನರ ಕೈಯಲ್ಲಿದೆ. ಅದು ಮತದಾರರ ಕೈಯಲ್ಲಿದೆ. ಮುಂದಿನ ವರ್ಷ ಕೆಂಪುಕೋಟೆಯಲ್ಲಿ ಧ್ವಜಾರೋಹಣ ಮಾಡುತ್ತೇನೆ ಎಂದು ಈಗಲೇ ಹೇಳುವುದು ಅವರ ದುರಹಂಕಾರ” ಎಂದರು.
ಕೆಂಪುಕೋಟೆ ಧ್ವಜಾರೋಹಣ ಕಾರ್ಯಕ್ರಮಕ್ಕೆ ಖರ್ಗೆ ಅವರು ಗೈರಾಗಿದ್ದರು. ಕಣ್ಣಿಗೆ ಸಂಬಂಧಿಸಿದ ಸಮಸ್ಯೆಯಿರುವ ಕಾರಣ ಗೈರಾಗಿದ್ದೆ ಎಂದರು.