ಬೆಂಗಳೂರು: ಜಗಳ ಬಿಡಿಸಲು ಹೋದಾಗ ಹಲ್ಲೆ ನಡೆಸಿದ ಮಹಿಳೆಯನ್ನು ಫುಡ್ ಡೆಲಿವರಿ ಬಾಯ್ ಕೊಲೆಗೈದಿರುವ ಘಟನೆ ಪರಪ್ಪನ ಅಗ್ರಹಾರ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದು, ಈ ಸಂಬಂಧ ಕೃತ್ಯ ಎಸಗಿದ ಯುವಕನನ್ನು ಪೊಲೀಸರು ಬಂಧಿಸಿದ್ದಾರೆ.
ಪರಪ್ಪನ ಅಗ್ರಹಾರದ ಸಿಂಗಸಂದ್ರ ನಿವಾಸಿ ರಾಜೇಶ್ ಕುಮಾರ್(29) ಬಂಧಿತ. ಆರೋಪಿ ಭಾನುವಾರ ರಾತ್ರಿ ಗುಡಿಯಾದೇವಿ(42) ಎಂಬಾಕೆಯನ್ನು ಕೊಲೆಗೈದಿದ್ದ ಎಂದು ಪೊಲೀಸರು ಹೇಳಿದರು.
ಬಿಹಾರ ಮೂಲದ ಗುಡಿಯಾದೇವಿ ಮತ್ತು ಆಕೆಯ ಸಹೋದರಿ ಗೀತಾಕುಮಾರಿ ಹಾಗೂ ಆರೋಪಿ ರಾಜೇಶ್‌ಕುಮಾರ್ ದೂರದ ಸಂಬಂಧಿಗಳಾಗಿದ್ದು, ಒಂದೇ ಮನೆಯಲ್ಲಿ ವಾಸವಾಗಿದ್ದರು. ಸಹೋದರಿಯರಿ ಬ್ಬರು ಗಾರ್ಮೆಂಟ್ಸ್‌ನಲ್ಲಿ ಕೆಲಸ ಮಾಡುತ್ತಿದ್ದರೆ, ಆರೋಪಿ ರಾಜೇಶ್ ಕುಮಾರ್ ಫುಡ್ ಡೆಲಿವರಿ ಬಾಯ್ ಆಗಿ ಕೆಲಸ ಮಾಡುತ್ತಿದ್ದ. ಈ ಮಧ್ಯೆ ಗುಡಿಯಾ ದೇವಿ ಮೊಬೈಲ್‌ನಲ್ಲಿ ಹೆಚ್ಚು ಮಾತನಾಡಿದ್ದಳು. ಇದೇ ವಿಚಾರಕ್ಕೆ ಸಹೋದರಿಯರ ನಡುವೆ ಆಗಾಗ್ಗೆ ಗಲಾಟೆ ನಡೆಯುತ್ತಿತ್ತು.
ಭಾನುವಾರ ಕೆಲಸಕ್ಕೆ ರಜೆ ಇದ್ದ ಹಿನ್ನೆಲೆಯಲ್ಲಿ ಸಹೋದರಿಯರಿಬ್ಬರು ಮನೆಯಲ್ಲೇ ಇದ್ದರು. ಇತ್ತ ಆರೋಪಿ ರಾಜೇಶ್ ಕುಮಾರ್ ಕೆಲಸ ಮುಗಿಸಿಕೊಂಡು ರಾತ್ರಿ ಮನೆಗೆ ಮದ್ಯ ಸೇವಿಸಿ ಬಂದಿದ್ದ. ಬಳಿಕ ಮೂವರು ಒಟ್ಟಿಗೆ ಊಟ ಮಾಡಿದ್ದಾರೆ. ಬಳಿಕ, ಸಹೋದರಿಯರ ನಡುವೆ ಮತ್ತೆ ಮೊಬೈ ಲ್‌ನಲ್ಲಿ ಮಾತನಾಡುವ ವಿಚಾರಕ್ಕೆ ಜಗಳ ಶುರುವಾ ಗಿತ್ತು. ಆಗ ಮಧ್ಯಪ್ರವೇಶಿಸಿದ್ದ ರಾಜೇಶ್‌ಕುಮಾರ್, ಜಗಳ ಬಿಡಿಸಲು ಮುಂದಾಗಿದ್ದ. ಇದೇ ಸಂದರ್ಭದಲ್ಲಿ ಗುಡಿಯಾ ದೇವಿ, ರಾಜೇಶ್ ಮೇಲೆ ಹಲ್ಲೆ ನಡೆಸಿದ್ದಳು. ಅದರಿಂದ ಆಕ್ರೋಶಗೊಂಡ ಆರೋಪಿ ಆಕೆಯ ಕತ್ತು ಹಿಸುಕಿದ್ದ. ಅಸ್ವಸ್ಥಗೊಂಡು ಗುಡಿಯಾದೇವಿ ಕುಸಿದು ಬಿದ್ದಿದ್ದಾಳೆ. ಬಳಿಕ ಗಾಬರಿಗೊಂಡು ಗೀತಾಕುಮಾರಿ ಹಾಗೂ ರಾಜೇಶ್‌ಕುಮಾರ್ ಆಸ್ಪತ್ರೆಗೆ ಕರೆದೊಯ್ದರು. ತಪಾಸಣೆ ನಡೆಸಿದ ವೈದ್ಯರು, ಗುಡಿಯಾದೇವಿ ಮೃತಪಟ್ಟಿರುವುದಾಗಿ ಹೇಳಿದರು. ಈ ಸಂಬಂಧ ಗೀತಾಕುಮಾರಿ ನೀಡಿದ ದೂರಿನ ಮೇರೆಗೆ ರಾಜೇಶ್ ಕುಮಾರ್‌ನನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದರು.