Advertisement

ಗಾಯವಿಲ್ಲದೆ 100 ಚಿಕಿತ್ಸೆ ಯಶಸ್ವಿಗೊಳಿಸಿದ ನಾರಾಯಣ ಆಸ್ಪತ್ರೆ

11:36 AM Jan 25, 2017 | Team Udayavani |

ಬೆಂಗಳೂರು: ನಾರಾಯಣ ಆಸ್ಪತ್ರೆಯು ರೋಬೊಟಿಕ್‌ ತಂತ್ರಜ್ಞಾನದಡಿ ಕಳೆದ ಐದು ತಿಂಗಳಲ್ಲಿ 100 ಶಸ್ತ್ರ ಚಿಕಿತ್ಸೆಯನ್ನು ಯಶಸ್ವಿಗೊಳಿಸಿದೆ ಎಂದು ನಾರಾಯಣ ಹೆಲ್ತ್‌ ಸಂಸ್ಥೆ ಅಧ್ಯಕ್ಷ ಡಾ.ದೇವಿ ಶೆಟ್ಟಿ ಹೇಳಿದ್ದಾರೆ.

Advertisement

“ಎರಡು ದಶಕಗಳ ಹಿಂದೆ ತೆರೆದ ಶಸ್ತ್ರಗಳ ಮೂಲಕ ಸರ್ಜರಿಗಳನ್ನು ಮಾಡಲಾಗುತ್ತಿತ್ತು. ನಂತರ ಲಾಪ್ರೋಸ್ಕೋಪಿಕ್‌ ಶಸ್ತ್ರಚಿಕಿತ್ಸಾ ವಿಧಾನ ಅಳವಡಿಸಿಕೊಳ್ಳಲಾಯಿತು. ಆದರೆ, ಈಗ ದೇಹವನ್ನು ಗಾಯಗೊಳಿಸದ ರೋಬೊಟಿಕ್‌ ತಂತ್ರಜ್ಞಾನ ಬಳಸಿಕೊಂಡು ಯಶಸ್ವಿ ಶಸ್ತ್ರ ಚಿಕಿತ್ಸೆ ಮಾಡಲಾಗುತ್ತದೆ.

ಈ ಮಾದರಿಯಲ್ಲಿ ತ್ರಿ-ಡಿ ವಿಷನ್‌ ತಂತ್ರಜ್ಞಾನ ಅಳವಡಿಸಿರುವುದರಿಂದ ಈ ಶಸ್ತ್ರಚಿಕಿತ್ಸೆ ವೈಫ‌ಲ್ಯತೆ ಪ್ರಮಾಣ ಕಡಿಮೆ. ಹೀಗಾಗಿ, ದೇಹದೊಳಗೆ, ಯಾವುದೇ ಶಸ್ತ್ರಚಿಕಿತ್ಸೆಯನ್ನು ಅತ್ಯಂತ ಪರಿಣಾಮಕಾರಿಯಾಗಿ ನಿರ್ವಹಿಸುವ ರೋಬೊಟಿಕ್‌ ತಂತ್ರಜ್ಞಾನವನ್ನು ಹೆಚ್ಚು ಪ್ರೋತ್ಸಾಹಿಸುವ ಅಗತ್ಯವಿದೆ,” ಎಂದು ಅವರು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

“ಇನ್ಫೋಸಿಸ್‌ ಫೌಂಡೇಷನ್‌ ಸಹಾಯದಿಂದ ನಾರಾಯಣ ಆಸ್ಪತ್ರೆಯು ರೋಬೊಟಿಕ್‌ ತಂತ್ರಜ್ಞಾನ ಖರೀದಿಸಿದೆ. ಅಲ್ಲದೆ, ಇನ್ಫೋಸಿಸ್‌ ಫೌಂಡೇಷನ್‌ ನೆರವಿನೊಂದಿಗೆ ರೋಬೊಟಿಕ್‌ ಶಸ್ತ್ರಚಿಕಿತ್ಸೆ ತರಬೇತಿ ಕೇಂದ್ರವನ್ನೂ ಪ್ರಾರಂಭಿಸಲಾಗಿದೆ. ರೋಬೊಟಿಕ್‌ ತಂತ್ರಜ್ಞಾನ ಬಳಸಿಕೊಂಡು ಅತ್ಯಂತ ಕಡಿಮೆ ಅವಧಿಯಲ್ಲಿ ನಾರಾಯಣ ಆಸ್ಪತ್ರೆಯು 100 ಶಸ್ತ್ರಚಿಕಿತ್ಸೆ ಯಶಸ್ವಿಗೊಳಿಸಿದೆ,” ಎಂದು ತಿಳಿಸಿದರು.

“ರೋಬೊಟಿಕ್‌ ತಂತ್ರಜ್ಞಾನವನ್ನು ದೇಶದ ಎಲ್ಲ ಆಸ್ಪತ್ರೆಗಳಲ್ಲಿ ಅಳವಡಿಸಿಕೊಳ್ಳುವ ಮೂಲಕ ಜನಸಾಮಾನ್ಯರಿಗೆ ಅದರ ಹೆಚ್ಚು ಪ್ರಯೋಜನ ಒದಗಿಸಬೇಕಿದೆ. ಅತ್ಯಂತ ಕಠಿಣವಾದ ಶಸ್ತ್ರಚಿಕಿತ್ಸೆಗಳನ್ನು ಕೂಡ ಸುಲಭವಾಗಿ ಮಾಡುವುದಕ್ಕೆ ಈ ತಂತ್ರಜ್ಞಾನ ನೆರವಾಗಲಿದೆ. ಹೀಗಾಗಿ, ಸದ್ಯ ಚಾಲ್ತಿಯಲ್ಲಿರುವ ಲಾಪ್ರೋಸ್ಕೋಪಿಕ್‌ ಚಿಕಿತ್ಸೆಗೆ ಪರ್ಯಾಯವಾಗಿ, ರೋಬೊಟಿಕ್‌ ಶಸ್ತ್ರಚಿಕಿತ್ಸಾ ವಿಧಾನವನ್ನು ಜನಪ್ರಿಯಗೊಳಿಸುವುದಕ್ಕೆ ಎಲ್ಲ ವೈದ್ಯರು ಕೈಜೋಡಿಸಬೇಕು,”ಎಂದು ಅವರು ಸಲಹೆ ನೀಡಿದರು.

Advertisement

ನಾರಾಯಣ ಆಸ್ಪತ್ರೆಯು ಕೇವಲ ಐದು ತಿಂಗಳಲ್ಲಿ 100 ರೋಬೊಟಿಕ್‌ ಶಸ್ತ್ರಚಿಕಿತ್ಸೆಯನ್ನು ಯಶಸ್ವಿಗೊಳಿಸಿರುವುದು ಗಮನಾರ್ಹ. ಆ ಮೂಲಕ, ನಾರಾಯಣ ಹೆಲ್ತ್‌ ಸಂಸ್ಥೆಯು ವಿಶ್ವದರ್ಜೆ ಆರೋಗ್ಯ ಸೇವೆಯನ್ನು ಪರಿಚಯಿಸುತ್ತಿದೆ. 
-ಡಾ.ಸುಧಾಮೂರ್ತಿ, ಇನ್ಫೋಸಿಸ್‌ ಫೌಂಡೇಷನ್‌ ಅಧ್ಯಕ್ಷೆ 

ರೋಬೊಟಿಕ್‌ ಶಸ್ತ್ರಚಿಕಿತ್ಸೆ ಲಾಭ

* ಅತಿ ಶೀಘ್ರದಲ್ಲಿ ರೋಗಿ ಗುಣಮುಖ.
* ಶಸ್ತ್ರಚಿಕಿತ್ಸೆ ನಂತರ ಆಸ್ಪತ್ರೆಯಲ್ಲಿ ಉಳಿಯಬೇಕಾದ ದಿನಗಳು ಬಹಳ ಕಡಿಮೆ.
* ದೇಹದ ಯಾವುದೇ ಭಾಗಕ್ಕೂ ರೋಬೊಟಿಕ್‌ ಸರ್ಜರಿಯಿಂದ ಚಿಕಿತ್ಸೆ ಸಾಧ್ಯ.
* ರೋಗಿಗೆ ಕಡಿಮೆ ರಕ್ತದ ಅವಶ್ಯಕತೆ, ಗಾಯ ರಹಿತ ಶಸ್ತ್ರಚಿಕಿತ್ಸೆ.

Advertisement

Udayavani is now on Telegram. Click here to join our channel and stay updated with the latest news.

Next