ಗೋಲ್ಡ್ ಕೋಸ್ಟ್ (ಆಸ್ಟ್ರೇಲಿಯಾ): ಪ್ರಾಸ್ಟೇಟ್ ಕ್ಯಾನ್ಸರ್‌ಗೆ ತುತ್ತಾಗಿ ಮರಣಶಯ್ಯೆಯಲ್ಲಿರುವ ರೋನ್ ಮೆಕಾರ್ಟ್ನಿ (72) ಎಂಬುವರ ಕೊನೇ ಆಸೆ ಈಡೇರಿಸಿದ ಕ್ವೀನ್ಸ್ ಲ್ಯಾಂಡ್ ಆಸ್ಪತ್ರೆಯ ಸಹಾಯಕ ಸಿಬ್ಬಂದಿ ಈಗ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಭಾನುವಾರ ಅವರ ಆರೋಗ್ಯ ತೀರಾ ಹದಗೆಟ್ಟಿದ್ದರಿಂದ ಅವರನ್ನು ಕ್ವೀನ್ಸ್ ಲ್ಯಾಂಡ್ ಆಸ್ಪತ್ರೆಯ ಆ್ಯಂಬುಲೆನ್ಸ್‌ನಲ್ಲಿ ಆಸ್ಪತ್ರೆಗೆ ಕರೆದೊಯ್ಯಲಾಗುತ್ತಿತ್ತು. ಆಗ ಮಾತನಾಡಿದ ರೋನ್, ತಮ್ಮ ಕೊನೆಯ ಆಸೆಯಾಗಿ ಮ್ಯಾಕ್‌ಡೊನಾಲ್ಡ್ ರೆಸ್ಟೋರೆಂಟ್‌ನಲ್ಲಿ ಸಿಗುವ ಕ್ಯಾರಮಲ್ ಸಂಡೇ ಎಂಬ ಐಸ್‌ಕ್ರೀಂ ತಂದುಕೊಡುವಂತೆ ಸಿಬ್ಬಂದಿಗೆ ಕೋರಿದ್ದಾರೆ. ಇದಕ್ಕೆ ಸ್ಪಂದಿಸಿದ ಸಿಬ್ಬಂದಿ, ಅವರ ಆಸೆ ನೆರವೇರಿಸಿದ್ದಾರೆ. ಸಿಬ್ಬಂದಿಯ ಈ ಮಾನವೀಯ ನಡೆಯನ್ನು ಪುತ್ರಿ ಫೇಸ್‌ಬುಕ್‌ನಲ್ಲಿ ಹಂಚಿಕೊಂಡಿದ್ದು, ಸಿಬ್ಬಂದಿಯ ನಡೆಗೆ ಅಪಾರ ಜನಮನ್ನಣೆ ವ್ಯಕ್ತವಾಗಿದೆ.