ಅಂದು ಎಂದಿನಂತೆ ಕಾಲೇಜು ಮುಗಿಸಿಕೊಂಡು ಬಸ್ ನಿಲ್ದಾಣಕ್ಕೆ ಬಂದೆ. ನಮ್ಮ ಊರಿನ ಬಸ್ ಹತ್ತಿ ಕುಳಿತುಕೊಂಡೆ. ಅವನು ಬಸ್ ಹತ್ತಿ ನನ್ನ ಹಿಂದಿನ ಸೀಟಿನಲ್ಲೆ ಕುಳಿತುಕೊಂಡ. ಅವನೆಲ್ಲಿ ನನ್ನನ್ನು ಮಾತನಾಡಿಸುತ್ತಾನೋ ಅಂತ ನನ್ನ ಮನದಲ್ಲಿ ಭಯ ಶುರುವಾಗಿತ್ತು. ಕಂಡಕ್ಟರ್ ಹಿಂದಿನ ಸೀಟಿನಿಂದ ಟಿಕೆಟ್ ಕೇಳುತ್ತಾ ಬಂದುದರಿಂದ, ಅವನು ನನ್ನ ಟಿಕೆಟ್ ದುಡ್ಡನ್ನು ಕೊಡಲು ಮುಂದಾದ. ಆದರೆ ನಾನು “ಬೇಡ ನಾನೇ ಕೊಡುತ್ತೇನೆ’ ಎಂದರೂ ಅವನೇ ಐದು ರುಪಾಯಿ ಬಸ್ ಚಾರ್ಜ್ ಕೊಟ್ಟ. ನಾನೂ ಹೆಚ್ಚು ಒತ್ತಾಯ ಮಾಡದೆ ಯಾರೇನು ತಿಳಿದುಕೊಳ್ಳುತ್ತಾರೋ ಎಂದು ಸುಮ್ಮನಾದೆ. ಕಂಡಕ್ಟರ್ ನಮ್ಮತ್ತ ನೋಡಿ ನಗುತ್ತಾ ಟಿಕೆಟ್ ಕೊಟ್ಟು ಹೋದ.
ಮನದೊಳಗೆ ಆತಂಕ ಶುರುವಾಯ್ತು. ಅವನು ಜೇಬಿನಿಂದ ಚಿಕ್ಕ ಚೀಟಿಯೊಂದನ್ನು ನನಗೆ ಕೊಟ್ಟ. ಚೀಟಿಯನ್ನು ಬಿಡಿಸಿ ಓದಿದೆ. ಅದರಲ್ಲಿ “ನಾನು ನಿನ್ನ ಜೊತೆ ಮಾತನಾಡಬೇಕು, ಯಸ್ ಆರ್ ನೋ?’ ಅಂತ ಬರೆದಿತ್ತು. ನನಗೋ ಹೆದರಿಕೆ. ಅವನು ಚೀಟಿ ಕೊಟ್ಟಿದ್ದನ್ನು ಬಸ್ಸಿನಲ್ಲಿ ಪರಿಚಿತರು ಯಾರಾದರೂ ನೋಡಿದರೇ ಎಂದು. ಏಕೆಂದರೆ ಬಸ್ ಹತ್ತಿಕೊಂಡಾಗ ನನ್ನ ಪರಿಚಯದವರೊಬ್ಬರು ಬಸ್‌ನಲ್ಲಿದ್ದುದನ್ನು ನಾನು ನೋಡಿದ್ದೆ.
ಇದರ ಮಧ್ಯೆ ಅವನ ಚೀಟಿಯಲ್ಲಿದ್ದ ಪ್ರಶ್ನೆಗೆ ಹೇಗೆ ಉತ್ತರಿಸಬೇಕೆಂಬ ಕಾತುರವೂ ಇತ್ತು ಎನ್ನಿ. ಅವನ ಜೊತೆ ಮಾತನಾಡಬೇಕೆಂಬ ಬಯಕೆ ನನಗಿತ್ತು. ಆದರೆ ಅದನ್ನು ನೇರವಾಗಿ ಹೇಳ್ಳೋಕೆ ಧೈರ್ಯ ಇರಲಿಲ್ಲ. ಉತ್ತರ ಬರೆಯೋಣ ಅಂದರೆ ನನ್ನ ಹತ್ತಿರ ಪೆನ್ ಇರಲಿಲ್ಲ. ಪೆನ್ಸಿಲ… ಇತ್ತಾದರೂ ಅದರ ಮೊನೆ ಮುರಿದಿತ್ತು. ಯಾವ ರೀತಿ ಉತ್ತರಿಸಬೇಕೆಂದು ತಿಳಿಯದೆ ಗೊಂದಲದಲ್ಲಿರುವಾಗಲೇ ನನ್ನ ಸ್ಟಾಪ್ ಬಂದಿತು. ಅವನ ಕಡೆ ಒಮ್ಮೆಯೂ ತಿರುಗಿ ನೋಡದೆ ನಾನು ಬಸ್ಸಿನಿಂದ ಇಳಿದು ಹೋದೆ. ಮರುದಿನದಿಂದ ಅವನು ನನ್ನ ಕಣ್ಣಿಗೆ ಕಾಣದಂತೆ ಓಡಾಡುತ್ತಿದ್ದ.
ಮತ್ತೂಂದು ದಿನ ಬಂದು ಒಂದು ದಪ್ಪದ ಪುಸ್ತಕ ಕೊಟ್ಟ. ನಾನು ತೆಗೆದುಕೊಂಡೆ. ಮನೆಗೆ ಹೋದ ಮೇಲೆ ಪುಸ್ತಕ ತೆರೆದು ನೋಡಿದೆ. ಅದು, ಇಂಗ್ಲಿಶ್ ರ್ಯಾಪಿಡೆಕ್ಸ್ ಪುಸ್ತಕ. ಚೀಟಿಯಲ್ಲಿ ಅವನು ಬರೆದಿದ್ದು ನನಗೆ ತಿಳಿಯಲಿಲ್ಲವೆಂದು ಇಂಗ್ಲೀಷ್ ಕಲಿತುಕೋ ಎಂದು ಆ ಗ್ರಾಮರ್ ಪುಸ್ತಕ ಕೊಟ್ಟಿದ್ದ ಅವನು. ನಾನು ಚೂರು ಓದಿ ಮತ್ತೆ ಅವನಿಗೆ ಆ ಪುಸ್ತಕವನ್ನು ವಾಪಸ್ ಕೊಟ್ಟೆ. ನಾನೇ ನೇರವಾಗಿ ಕೊಡದೇ ಬೇರೆಯವರಿಂದ ತಲುಪಿಸಿದ್ದೆ. ಆ ಪುಸ್ತಕದ ಹಾಳೆಯ ಮಧ್ಯದಲ್ಲಿ ಅವನು ಅಂದು ಕೊಟ್ಟಿದ್ದ ಬಸ್ ಚಾರ್ಜ್ ಐದು ರುಪಾಯಿಯನ್ನೂ ಇಟ್ಟು ಕೊಟ್ಟಿದ್ದೆ. ಇದರಿಂದ ಅವನಿಗೆ ಬೇಜಾರಾಯೊ¤à ಏನೋ. ಅಂದಿನಿಂದ ಅವನೂ ಮಾತನಾಡಿಸಲಿಲ್ಲ. ನಾನೂ ಮಾತನಾಡಿಸುವ ಗೋಜಿಗೆ ಹೋಗಲಿಲ್ಲ.
– ಚೈತ್ರಾ ವಿ. ಮಾಲವಿ