ಬೆಂಗಳೂರು: ಆಟೋ ಚಾಲಕನಿಗೆ ಸೌದಿ ಅರೆಬಿಯಾ ಕರೆನ್ಸಿ (ರಿಯಲ್) ಆಸೆ ತೋರಿಸಿದ ವಂಚಕ, ಕರೆನ್ಸಿ ಬದಲಿಗೆ ಖಾಲಿ ಪೇಪರ್‌ಗಳ ಬಂಡಲ್ ನೀಡಿ ಪರಾರಿಯಾದ ಘಟನೆ ಮಡಿವಾಳ ಪೊಲೀಸ್ ಠಾಣೆ ವ್ಯಾಪ್ಯಿಯಲ್ಲಿ ನಡೆದಿದೆ.
ಈ ಕುರಿತು ವಂಚನೆಗೊಳಗಾದ ಡಿ.ಜೆ.ಹಳ್ಳಿ ನಿವಾಸಿ, ಆಟೋ ಚಾಲಕ ಸೈಯದ್ ಮುಜೀದ್ ನೀಡಿರುವ ದೂರು ಆಧರಿಸಿ ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಮುಂದುವರಿಸಿದ್ದಾರೆ.
ಜು.25ರಂದು ಮಡಿವಾಳಕ್ಕೆ ಹೋಗಬೇಕು ಎಂದು ಹೇಳಿದ ಗ್ರಾಹಕನೊಬ್ಬ ಶಿವಾಜಿನಗರದಲ್ಲಿ ಸೈಯದ್ ಮುಜೀದ್ ಆಟೋ ಹತ್ತಿದ್ದಾನೆ. ಬಳಿಕ ಮಾರ್ಗಮಧ್ಯೆ ತನ್ನ ಹೆಸರು ಮಹಮದ್ ಎಂದು ಹೇಳಿ ಪರಿಚಯಿಸಿಕೊಂಡು ತನ್ನ ಬಳಿ 5500 ಸೌದಿ ರಿಯಲ್ ಇದೆ. 1.80 ಲಕ್ಷ ರೂ. ನೀಡಿದರೆ ರಿಯಾಲ್ ನೀಡುತ್ತೇನೆ. ಯಾರಾದರೂ ತೆಗೆದುಕೊಳ್ಳುವವರಿದ್ದರೆ ತಿಳಿಸಿ ಎಂದು ಹೇಳಿ ಮೊಬೈಲ್ ನಂಬರ್ ವಿನಿಮಯ ಮಾಡಿಕೊಂಡು ತೆರಳಿದ್ದ.
ಜು.27ರಂದು ಮಧ್ಯಾಹ್ನ 3.30ರ ಸುಮಾರಿಗೆ ಮುಜೀದ್ ಅವರಿಗೆ ದೂರವಾಣಿ ಕರೆ ಮಾಡಿದ ಮಹಮದ್, ಮಡಿವಾಳ ಸಮೀಪ ಬಂದು 1.80 ಲಕ್ಷ ರೂ. ನೀಡಿದರೆ ರಿಯಲ್ ನೀಡುವುದಾಗಿ ತಿಳಿಸಿದ್ದಾನೆ. ಆತನ ಮಾತು ನಂಬಿದ ಸೈಯದ್, ತನ್ನ ಸ್ನೇಹಿತರ ಬಳಿ 1.80 ಲಕ್ಷ ರೂ. ಪಡೆದು ಅಲಿ ಎಂಬ ತನ್ನ ಸ್ನೇಹಿತನ ಜತೆ ಐದು ಗಂಟೆ ಸುಮಾರಿಗೆ ಮಡಿವಾಳದ ಸಿಲ್ಕ್ಬೋರ್ಡ್ ಬಳಿ ತೆರಳಿದ್ದಾರೆ. ಈ ವೇಳೆ ಅಲ್ಲಿಯೇ ಇದ್ದ ಇಬ್ಬರು ಬ್ಯಾಗ್ ಒಂದನ್ನು ನೀಡಿ, ‘ಇದರಲ್ಲಿ ಸೌದಿ ಕರೆನ್ಸಿ ಇದೆ’ ಎಂದು ಹೇಳಿ 1.80 ಲಕ್ಷ ರೂ. ಪಡೆದು ಅಲ್ಲಿಂದ ತೆರಳಿದ್ದಾನೆ.
ಮಹಮದ್ ಹೋದ ಬಳಿಕ ಬ್ಯಾಗ್ ತೆಗೆದ ಸೈಯದ್, ರಿಯಲ್ ನೋಟಿನ ಕೆಳಗೆ ಬಿಳಿ ಹಾಳೆಗಳನ್ನು ಇಟ್ಟು ಬಂಡಲ್ ಕಟ್ಟಿರುವುದನ್ನು ನೋಡಿ ಕಂಗಾಲಾಗಿದ್ದಾರೆ. ಬಳಿಕ ಪೊಲೀಸರಿಗೆ ದೂರು ನೀಡಿದ್ದಾರೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು.
ಆರೋಪಿ ಸೈಯದ್‌ಗೆ ನೀಡಿರುವ ದೂರವಾಣಿ ಸಂಖ್ಯೆಗಳು ಸ್ವಿಚ್ ಆಫ್ ಆಗಿವೆ. ಸೈಯದ್ ಏಕೆ ಸೌದಿ ಕರೆನ್ಸಿ ಪಡೆದುಕೊಂಡ ಎಂಬುದೂ ತನಿಖೆಯಲ್ಲಿ ಗೊತ್ತಾಗಬೇಕಿದ್ದು, ಹಲವು ಆಯಾಮಗಳಲ್ಲಿ ತನಿಖೆ ನಡೆಸುತ್ತಿರುವುದಾಗಿ ಅಧಿಕಾರಿ ಮಾಹಿತಿ ನೀಡಿದರು.