Advertisement

1,000 ಗಿಡ ನೆಡುವ ಇರಾದೆ ಈತನಿಗೆ…

03:45 AM Jul 10, 2017 | Team Udayavani |

ಉಡುಪಿ: ಗಿಡಮರಗಳ ನಾಶದಿಂದ ಪರಿಸರ ಅಸಮ ತೋಲನಗೊಂಡಿದೆ ಎನ್ನುವುದು ಎಲ್ಲರಿಗೂ ಗೊತ್ತಿರುವ ವಿಷಯ. ಆದರೆ ಗಿಡ ನೆಡುವವರು ಎಷ್ಟು ಮಂದಿ? ತಮ್ಮದೇ ಜಾಗದಲ್ಲಿ ನೆಡುವವರಿಲ್ಲದಿರುವಾಗ, ಗಿಡ ನೆಡುವುದು ಕೇವಲ ಪ್ರಚಾರಕ್ಕಾಗಿ ಎಂಬ ಈ ಕಾಲದಲ್ಲಿ ಈ ಪೋರ ರಸ್ತೆ ಬದಿ ಗಿಡ ನೆಡುವುದಲ್ಲದೆ ನೀರು, ಗೊಬ್ಬರವನ್ನೂ ಹಾಕಿ ಅದು ಬದುಕಿ ಉಳಿಯುವಂತೆ ನೋಡುತ್ತಾನೆ. 

Advertisement

ಬ್ರಹ್ಮಗಿರಿಯ ರೋನನ್‌ ಲುವಿಸ್‌ ಹೋದ ವರ್ಷ 463 ಸಸ್ಯಗಳನ್ನು ರಸ್ತೆ ಬದಿ ನೆಟ್ಟರೆ ಈ ವರ್ಷ 173 ಸಸ್ಯಗಳನ್ನು ನೆಟ್ಟಿದ್ದಾನೆ. ಕನ್ನರ್ಪಾಡಿ ಸೈಂಟ್‌ ಮೇರೀಸ್‌ ಶಾಲೆಯಲ್ಲಿ ಐದನೆಯ ತರಗತಿ ಓದುತ್ತಿರುವ ಒಂಬತ್ತು ವರ್ಷದ ಈತ ಬೆಳಗ್ಗೆ 4.30 ಗಂಟೆಗೆ ಎದ್ದು ಬೇಸಗೆಯಲ್ಲಿ ನೀರು ಹಾಕುತ್ತಾನೆ. ಇದಕ್ಕಾಗಿ ತಂದೆ ರೋಶನ್‌ ಲುವಿಸ್‌ ಒಂದು ಟ್ಯಾಂಕ್‌ ತರಿಸಿದ್ದಾರೆ. 

ಜೀಪಿನಲ್ಲಿ ಟ್ಯಾಂಕ್‌ ಏರಿಸಿಕೊಂಡು ನೀರು ಎರೆಯುತ್ತಾನೆ. ಸ್ವಲ್ಪ ಸುಫ‌ಲ, ಯೂರಿಯ ಗೊಬ್ಬರವನ್ನು ಹಾಕುತ್ತಾನೆ. ಕಲ್ಯಾಣಪುರದಲ್ಲಿರುವ ತಮ್ಮ ಜಾಗದಲ್ಲಿ ಬಿದ್ದ ಸೆಗಣಿಯನ್ನು ಸಂಗ್ರಹಿಸಿ ಅದನ್ನು ಗಿಡಗಳಿಗೆ ಹಾಕುವ ವ್ಯವಸ್ಥೆಯನ್ನು ತಂದೆ ರೂಪಿಸಿದ್ದಾರೆ. ಈ ಸಸ್ಯಗಳನ್ನು ಅರಣ್ಯ ಇಲಾಖೆಯ ಅಧಿಕಾರಿ ಕ್ಲಿಫ‌ರ್ಡ್‌ ಲೋಬೋ ಕೊಟ್ಟು ಸಹಕರಿಸಿರುವುದಲ್ಲದೆ ನೆಟ್ಟ ಗಿಡವನ್ನು ಪರಿಶೀಲನೆ ನಡೆಸಿದ್ದಾರೆ. ಮುಂದಿನ ವರ್ಷ 1,000 ಗಿಡಗಳನ್ನು ನೆಡಬೇಕೆಂದಿದ್ದೇವೆ. ನೆಟ್ಟ ಗಿಡಕ್ಕೆ ಬೇಲಿಯನ್ನು ರಚಿಸಿ ಗಿಡಗಳನ್ನು ರಕ್ಷಿಸುತ್ತೇವೆ ಎನ್ನುತ್ತಾರೆ ತಂದೆ ರೋಶನ್‌ ಲುವಿಸ್‌. ರೋನನ್‌ ಮಾದರಿಯನ್ನು ಇತರರು ಪಾಲಿಸಿದರೆ ಊರಿಗೆ ಊರೇ ನಂದನವನವಾಗುತ್ತದೆ. 

ರೋನನ್‌ ಈಜು, ಕಲಿಕೆ, ಚಿತ್ರಕಲೆ, ಸೈಕ್ಲಿಂಗ್‌, ಸಂಗೀತದಲ್ಲಿ ಎತ್ತಿದ ಕೈ. ಈಜು ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಗಿಟ್ಟಿಸಿಕೊಳ್ಳುವ ಈತ ಬೆಳಗ್ಗೆದ್ದು ಬಲು ದೂರ ತಂದೆಯೊಂದಿಗೆ ಸೈಕ್ಲಿಂಗ್‌ ಹೋಗುತ್ತಾನೆ. 

ಎಲ್ಲಿಯೇ ಸಂಗೀತ ಸ್ಪರ್ಧೆ ಇರಲಿ ಅಲ್ಲಿ ಹಾಜರಿದ್ದು ಬಹುಮಾನ ಗಿಟ್ಟಿಸಿಕೊಳ್ಳುತ್ತಾನೆ. ಚೆಸ್‌, ಸ್ಕೇಟಿಂಗ್‌ನಲ್ಲಿಯೂ ಈತ ಮುಂದೆ. 

Advertisement

– ಮಟಪಾಡಿ ಕುಮಾರಸ್ವಾಮಿ

Advertisement

Udayavani is now on Telegram. Click here to join our channel and stay updated with the latest news.

Next