ಹಾಸನ: ಚಿರತೆಯ ಹೆಸರು ಕೇಳಿದರೆ ಸಾಕು, ಎದ್ದೆನೋ ಬಿದ್ದೆನೋ ಎಂದು ಓಟ ಕೀಳುವವರೇ ಹೆಚ್ಚಿನವರು. ಆದರೆ ಇಲ್ಲೊಬ್ಬ ಸಾಹಸಿ ಹೊಲದಲ್ಲಿ ಕಣ್ಣಿಗೆ ಬಿದ್ದ ಚಿರತೆಯನ್ನು ತಾನೇ ಸೆರೆ ಹಿಡಿದು, ತನ್ನದೇ ಬೈಕಿನಲ್ಲಿ ಕಟ್ಟಿ ಸಾಗಿಸಿ ಅರಣ್ಯಾಧಿಕಾರಿಗಳಿಗೆ ಹಸ್ತಾಂತರಿಸಿದ್ದಾನೆ!
ಇಂತಹ ವಿಚಿತ್ರ ಘಟನೆ ನಡೆದಿರುವುದು ಹಾಸನ ಜಿಲ್ಲೆಯ ಅರಸೀಕೆರೆ ತಾಲೂಕು ಗಂಡಸಿ ಹೋಬಳಿಯ ಬಾಗೀವಾಳು ಗ್ರಾಮದಲ್ಲಿ.
ಆಗಿದ್ದೇನು?
ಬಾಗೀವಾಳು ಗ್ರಾಮದ ವೇಣು ಗೋಪಾಲ್ ಉರುಫ್ ಮುತ್ತು ಎಂಬ ವರು ಶುಕ್ರವಾರ ಬೆಳಗ್ಗೆ ಜಮೀನಿಗೆ ಹೋಗಿದ್ದಾಗ ಚಿರತೆ ಕಾಣಿಸಿ ಕೊಂಡಿತ್ತು. ಅವರು ಹೆದರದೆ ಹರಸಾಹಸಪಟ್ಟು ಚಿರತೆಯನ್ನು ಹಿಡಿದು ಅದರ ಕಾಲು ಗಳನ್ನು ಕಟ್ಟಿಹಾಕಿದರು. ಮರಿ ಚಿರತೆ ಯಾಗಿದ್ದು, ಅಸ್ವಸ್ಥವಾಗಿದ್ದ ಅದನ್ನು ವೇಣುಗೋಪಾಲ್ ತಮ್ಮ ಬೈಕಿನ ಹಿಂಬದಿಗೆ ಕಟ್ಟಿಕೊಂಡು, ಗಂಡಸಿ ಪಶು ವೈದ್ಯಕೀಯ ಆಸ್ಪತ್ರೆಗೆ ತಂದು ಚಿಕಿತ್ಸೆ ಕೊಡಿಸಿದ್ದಾರೆ. ಅನಂತರ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಒಪ್ಪಿಸಿದ್ದಾರೆ.
ವೇಣುಗೋಪಾಲ್ ಅವರ ಈ ಸಾಹಸಕ್ಕೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗಿದೆ.