ಕುಣಿಗಲ್ : ತೋಟದ ಮನೆಯ ಬೀಗ ಹೊಡೆದು, ಚಿನ್ನಾಭರಣ ಕಳವು ಮಾಡಿಕೊಂಡು ಪರಾರಿಯಾಗುತ್ತಿದ್ದ ಕಳ್ಳನನ್ನು ಹಿಡಿದ ಗ್ರಾಮಸ್ಥರು ಹಿಗ್ಗಾಮುಗ್ಗಾ ಥಳಿಸಿ ಪೊಲೀಸರ ವಶಕ್ಕೆ ನೀಡಿರುವ ಘಟನೆ ತಾಲೂಕಿನ ಕೊತ್ತಗೆರೆ ಹೋಬಳಿ ವಡ್ಡರಕುಪ್ಪೆ ಗ್ರಾಮದಲ್ಲಿ ನಡೆದಿದೆ.
ಬೆಂಗಳೂರಿನ ಚಾಮರಾಜಪೇಟೆ, ಮೂರನೇ ಕ್ರಾಸ್ ಅಡುಗೆ ಕೆಲಸಗಾರ ನಸ್ರುಲ್ಲಾಖಾನ್ (26) ಬಂಧಿತ ಆರೋಪಿಯಾಗಿದ್ದು, ಮತ್ತೊಬ್ಬ ಪರಾರಿಯಾಗಿದ್ದಾನೆ.
ವಡ್ಡರಕುಪ್ಪೆ ಗ್ರಾಮದ ನಾರಾಯಣ ಎಂಬುವರು ತೋಟದಲ್ಲಿ ಮನೆ ಕಟ್ಟುಕೊಂಡು ವಾಸವಾಗಿದ್ದರು, ಮಂಗಳವಾರ ರಾತ್ರಿ ಕುರುಡಿಹಳ್ಳಿ ಗ್ರಾಮದ ಸಂಬಂಧಿಕರ ಮನೆಗೆ ಊಟಕ್ಕೆಂದು ನಾರಾಯಣ ಮತ್ತು ಅಂತನ ಕುಟುಂಬ ಹೋಗಿದ್ದರು. ಈ ವೇಳೆ ಕಳ್ಳತನಕ್ಕೆ ಹೊಂಚು ಹಾಕಿ ಕುಳಿತಿದ್ದ ಕಳ್ಳರು ಬೀಗ ಹಾಕಿಕೊಂಡು ಹೋಗುತ್ತಿದಂತೆ ಗೇಟ್ ಹಾಗೂ ಬಾಗಿಲಿನ ಬೀಗ ಹೊಡೆದು, ಒಳ ನುಗ್ಗಿ, ಮನೆಯಲ್ಲಿ ಇದ್ದ 15 ಗ್ರಾಂ ಚಿನ್ನದ ವಡವೆ ಮತ್ತು ಬೆಳ್ಳಿ ವಸ್ತುಗಳನ್ನು ಕಳವು ಮಾಡಿಕೊಂಡು ಪರಾರಿಯಾಗುತ್ತಿದ್ದರು. ಈ ವೇಳೆ ಊಟ ಮುಗಿಸಿಕೊಂಡು ಬಂದ ನಾರಾಯಣ ಕಳ್ಳರನ್ನು ನೋಡಿ ಹಿಡಿಯಲು ಯತ್ನಿಸಿದರು ಒಬ್ಬ ಕಳ್ಳ ನಾರಾಯಣರನ್ನು ತಳ್ಳಿ ಪರಾರಿಯಾಗಿದ್ದು, ಮತ್ತೊಬ್ಬ ಕಳ್ಳ ನಸ್ರುಲ್ಲಾಖಾನ್ ನನ್ನು ಹಿಡಿದು, ನಾರಾಯಣನ್ನು ಜೋರಾಗಿ ಕಿರಿಚಿಕೊಂಡಿದ್ದು ತತ್ ಕ್ಷಣ ಅಕ್ಕಪಕ್ಕದವರು ಓಡಿ ಬಂದು ಕಳ್ಳನಿಗೆ ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಕಳ್ಳರು ತಂದಿದ್ದ ಕಾರಿನ ಗಾಜುಗಳನ್ನು ಒಡೆದು ಪುಡಿ ಮಾಡಿದ್ದಾರೆ.
ವಿಚಾರ ತಿಳಿದ ಕುಣಿಗಲ್ ವೃತ್ತ ನಿರೀಕ್ಷಕ ಎಸ್.ಪಿ.ನವೀನ್‌ಗೌಡ ಮತ್ತು ಸಿಬಂದಿ ಗ್ರಾಮಕ್ಕೆ ತೆರಳಿ ಕಳ್ಳನನ್ನು ವಶಕ್ಕೆ ಪಡೆದು, ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. ಕಳ್ಳರ ಮೇಲೆ ಈಗಾಗಲೇ ವಿವಿಧ ಪೊಲೀಸ್ ಠಾಣೆಯಲ್ಲಿ ಮೂರ್ನಾಲ್ಕು ಪ್ರಕರಣ ದಾಖಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.