ಭಗವಂತನ ಎದುರು ಏನನ್ನು ಕೇಳಿ ಕೊಳ್ಳಬೇಕು? ಎಂಬುದೇ ದೊಡ್ಡ ಜಿಜ್ಞಾಸೆಯ ಸಂಗತಿ. ಇದನ್ನು ಸದಾ ಎದುರಿಸುತ್ತಿದ್ದೆ. ನನ್ನ ತಂದೆಯಲ್ಲೂ ಒಮ್ಮೆ ಕೇಳಿದಾಗ ತುಸು ಕೋಪದಿಂದ (ನಾನು ಅಧಿಕ ಪ್ರಸಂಗ ಮಾಡುತ್ತಿದ್ದೇನೆ ಎಂದುಕೊಂಡು), ನನಗೇನು ಗೊತ್ತು? ನಿನಗೇನು ಬೇಕೋ ಅದನ್ನು ಕೇಳಿಕೋ ಎಂದು ಬಿಟ್ಟಿದ್ದರು.
ಈ ಪ್ರಸಂಗ ನಡೆದದ್ದು ನಾನು ಹತ್ತನೇ ತರಗತಿಯಲ್ಲಿದ್ದಾಗ. ಅದಕ್ಕೂ ಒಂದು ಪ್ರಸಂಗ ಕಾರಣವಿತ್ತು. ಅಂದು ಆ ಪ್ರಶ್ನೆ ಕೇಳಿದ ದಿನದ ಹಿಂದಿನ ದಿನ ಶಾಲೆಯಿಂದ ಸಂಜೆ ಮನೆಗೆ ಬರುವಾಗ ನಾವೇ ಪರಸ್ಪರ (ಸಹಪಾಠಿಗಳು) ಚರ್ಚೆ ಮಾಡಿಕೊಂಡು ಬಂದಿದ್ದೆವು. ಪರೀಕ್ಷೆ ಹತ್ತಿರ ಬಂದಾಗ, ನಾನು ದಿನವೂ ದೇವರಲ್ಲಿ ಪ್ರಶ್ನೆ ಪತ್ರಿಕೆ ಸುಲಭವಾಗಿರಲಿ ಎಂದು ಕೇಳಿಕೊಳ್ಳುತ್ತೇನೆ ಎಂದಿದ್ದಳು. ಮತ್ತೂಬ್ಬಳು, ಅಪ್ಪ ದಿನವೂ ಅಮ್ಮನೊಂದಿಗೆ ಗಲಾಟೆ ಮಾಡುವುದನ್ನು ಕಂಡು ಹೇಗಾದರೂ ತಪ್ಪಿಸು ಎಂದು ಕೇಳಿಕೊಳ್ಳುತ್ತಿದ್ದಳಂತೆ. ಹೀಗೆ ನಾವೈದು ಮಂದಿಯಲ್ಲಿ ನಾಲ್ವರು ಒಂದೊಂದು ಕಾರಣ ಮುಂದು ಮಾಡಿದಾಗ ನನಗೆ ಹೊಸ ಕಾರಣಗಳು ತೋರಿರಲಿಲ್ಲ. ಕಾರಣ ವಿಷ್ಟೇ. ಆ ರೀತಿಯ ಪರಿಸ್ಥಿತಿ ನಮ್ಮಲ್ಲಿ ಇರಲಿಲ್ಲ.
ಇವೆಲ್ಲವೂ ನನ್ನಲ್ಲೊಂದು ಪ್ರಶ್ನೆ ಹುಟ್ಟು ಹಾಕಿತ್ತು. ಮೊದಲಿಗೆ ಅಮ್ಮನಲ್ಲಿ ಕೇಳಿದ್ದಕ್ಕೆ ಅವಳು, ನಾನೇನು ಅಷ್ಟೊಂದು ಬುದ್ಧಿವಂತಳಲ್ಲ, ನಿನ್ನಪ್ಪನಲ್ಲಿ ಕೇಳು ಎಂದಿದ್ದಳು. ಹಾಗಾಗಿಯೇ ಅಪ್ಪನಲ್ಲಿ ಕೇಳಿದ್ದು. ಒಂದೂ ಹೊಳೆಯಲಿಲ್ಲ, ಸುಮ್ಮನಾದೆ.
ಎರಡು ತಿಂಗಳ ಹಿಂದೆ ಇಂಥದ್ದೇ ಮತ್ತೂಂದು ಪ್ರಸಂಗ ಎದುರಾಯಿತು. ನನಗೆ ಪುಟ್ಟ ಮಗಳಿದ್ದಾಳೆ. ಒಂದು ದಿನ ನಾನು ದೇವರಿಗೆ ಕೈ ಮುಗಿಯುತ್ತಿದ್ದಾಗ ಅವಳೂ ನನ್ನಲ್ಲಿ ಬಂದು ಕೈ ಮುಗಿದು ನಿಂತಳು. ನಾನು ಅವಳನ್ನು ಒಮ್ಮೆ ನೋಡಿದೆ. ಕೂಡಲೇ ಆಕೆ ನನ್ನನ್ನು ಉದ್ದೇಶಿಸುತ್ತಾ, ಅಮ್ಮ, ನಾನು ಏನೆಂದು ಕೇಳಿಕೊಳ್ಳಬೇಕು ಎಂದು ಕೇಳಿದಳು. ಆಗ ನಾನು ತೀರಾ ಗೊಂದಲದಲ್ಲಿ ಸಿಲುಕಿದೆ. ಅಪ್ಪನಂತೆ ಉತ್ತರಿಸಬೇಕೋ? ಅಥವಾ ನಾನು ಅಂದಿನಿಂದ ಇಂದಿನ ವರೆಗೆ ಅನುಭವದ ನೆಲೆಯಲ್ಲಿ ಸಂಗ್ರಹಿಸಿದ್ದನ್ನು ಹೇಳಬೇಕೋ ಎಂಬ ಗೊಂದಲ ಶುರುವಾಯಿತು. ನಮಸ್ಕಾರ ಮಾಡು ಎಂದು ಹೇಳಿ ನಾನೂ ನಮಸ್ಕಾರ ಮಾಡಿ ಕೆಲಸಕ್ಕೆ ಹೋದೆ.
ಮರುದಿನ ಸಂಜೆ ಪುಟ್ಟಿ ಶಾಲೆಯಿಂದ ಬಂದಳು. ಆಗ ಅವಳಿಗೆ ತಿಳಿಸಬೇಕೆಂದುಕೊಂಡೆ. ಅಷ್ಟರಲ್ಲಿ ಅವಳೇ ಹಿಂದಿನ ದಿನದ ಕಥೆ ಶುರು ಮಾಡಿದಳು. ನೀನು ಏನೂ ಹೇಳಲೇ ಇಲ್ಲ ಎಂದು. ಆಗ ತತ್‌ಕ್ಷಣವೇ ಈ ವಿಷಯವನ್ನು ಇಲ್ಲಿಯೇ ಮುಗಿಸಿಬಿಡುವ ಎನ್ನುವ ಹಾಗೆ, “ನಾವು ದೇವರಲ್ಲಿ ಸಾಮರ್ಥ್ಯವನ್ನು ಕೇಳಬೇಕು, ಸವಾಲನ್ನು ಎದುರಿಸುವ ಶಕ್ತಿಯನ್ನು ಕೇಳಬೇಕು ಬರೀ ಸುಖವನ್ನಲ್ಲ’ ಎಂದೆ. ನನ್ನ ಮಾತೇ ಒಂದು ಬಗೆಯಲ್ಲಿ ದೊಡ್ಡ ಅಧ್ಯಾತ್ಮದಂತೆ ತೋರಿದ್ದು ಆ ಕ್ಷಣದಲ್ಲಿ ಸುಳ್ಳಲ್ಲ.
ಬಳಿಕ ಅದನ್ನೇ ಮತ್ತೆ ಮನನ ಮಾಡಿಕೊಳ್ಳತೊಡಗಿದೆ. ಹೌದಲ್ಲಾ, ನಾವು ಯಾವಾಗಲೂ ದೇವರಲ್ಲಿ ಸಮಸ್ಯೆ ಕೊಡಬೇಡ ಎಂದು ಕೇಳಿಕೊಳ್ಳುತ್ತೇವೆ. ಅದರಿಂದ ಎಷ್ಟು ನಷ್ಟವಲ್ಲವೇ? ಮತ್ತೂಂದನ್ನು ಎದುರಿಸುವ ಸಾಮರ್ಥ್ಯವನ್ನೇ ನಾವು ಕಳೆದುಕೊಳ್ಳುತ್ತೇವಲ್ಲ. ಅದರ ಬದಲಾಗಿ, ಸಮಸ್ಯೆ, ಸವಾಲು ಕೊಡು, ಅದನ್ನು ಎದುರಿಸುವ ಸಾಮರ್ಥ್ಯ, ಬುದ್ಧಿ ಶಕ್ತಿಯನ್ನೂ ಕೊಡು ಎಂದು ಕೇಳಿಕೊಂಡರೆ ಎಷ್ಟೊಂದು ಲಾಭ. ಅದೇ ಸರಿ ಎನಿಸಿತು. ನಾನೂ ಅದನ್ನೇ ಪಾಲಿಸತೊಡಗಿದ್ದೇನೆ ಅಂದಿನಿಂದ. ಬದುಕು ಇರುವುದು ಬೆಳಗಿಸಿಕೊಳ್ಳುವುದಕ್ಕಾಗಿ ಎಂಬ ನನ್ನ
ತಂದೆಯ ಮಾತು ನಿಜವೆನಿಸಿತು.
- ವನಜಾಕ್ಷಿ, ಉಡುಪಿ