Advertisement

ಧೈರ್ಯವಾಗಿರಿ ಎಂದವನು ಮರಳಿ ಬರಲಿಲ್ಲ

09:04 AM Jul 26, 2019 | Suhan S |

ಕೊಪ್ಪಳ: ಕಾರ್ಗಿಲ್ ಯುದ್ಧದ ಸಿದ್ಧತೆ ನಡೆದಿದೆ. ಭಾರತ ಮಾತೆಯ ಸೇವೆ ಮಾಡಲು ನನಗೆ ಅವಕಾಶ ಒದಗಿ ಬಂದಿದೆ. ನೀವೆಲ್ಲರೂ ಕ್ಷೇಮದಿಂದಿರಿ, ನಾನೂ ಕ್ಷೇಮವಾಗಿದ್ದೇನೆಂದು ತಾಯಿಗೆ ಕೊನೆಯದಾಗಿ ಪತ್ರ ಬರೆದಿದ್ದ ವೀರ ಯೋಧ ಮಲ್ಲಯ್ಯ ಮೇಗಳಮಠ ಅವರು ಯುದ್ಧದಲ್ಲಿ ಹುತಾತ್ಮರಾಗಿ ದೇಶಕ್ಕೆ ಬೆಳಕಾಗಿದ್ದಾರೆ.

Advertisement

ಕೊಪ್ಪಳ ತಾಲೂಕಿನ ಅಳವಂಡಿ ಗ್ರಾಮದ ಚನ್ನಬಸಯ್ಯ, ಗಂಗಮ್ಮ ಅವರ ಪುತ್ರ, 1-6-1962ರಲ್ಲಿ ಜನಿಸಿದ ಅವರು ಹೈಸ್ಕೂಲ್ ಶಿಕ್ಷಣವನ್ನು ಹುಟ್ಟೂರಿನಲ್ಲೇ ಪಡೆದಿದ್ದರು. ದೇಶ ಸೇವೆ ಮಾಡಬೇಕು, ಭಾರತ ಮಾತೆಗೆ ನನ್ನ ಸೇವೆ ಸಲ್ಲಿಸಬೇಕೆಂಬ ಮಹದಾಸೆಯಿಂದ ಮಲ್ಲಯ್ಯ ಅವರು ಮೊದಲು ಸಿಂಗಟಾಲೂರುನಲ್ಲಿ ನಡೆದ ಸೇನಾ ಭರ್ತಿಗೆ ತೆರಳಿದ್ದರಂತೆ. ಆದರೆ ಅಲ್ಲಿ ಸೇನಾ ಭರ್ತಿ ಮುಗಿದಿದ್ದರಿಂದ ಪುನಃ ಹೊಸಪೇಟೆ ಭಾಗದಲ್ಲಿ ನಡೆದ ಸೇನಾ ಭರ್ತಿಯಲ್ಲಿ ನೇಮಕ ಹೊಂದಿ ದೇಶ ಸೇವೆಗೆ ತೆರಳಿದ್ದರು ಎಂದು ತಾಯಿ ಗಂಗಮ್ಮ ಗದ್ಗದಿತ ಧ್ವನಿಯಲ್ಲೇ ಮಾತನಾಡಿದರು.

ಮನೆಯಲ್ಲಿ ಬಡತನ, ಮಕ್ಕಳು ವಿದ್ಯಾವಂತರನ್ನಾಗಿ ಮಾಡಬೇಕೆಂದು ಹಗಲು-ರಾತ್ರಿ ಕಷ್ಟಪಟ್ಟು ನಾವು ಓದಿಸಿದ್ವಿ. ಮನೆ ಮನೆಗೆ ತೆರಳಿ ಹಿಟ್ಟು ಸಂಗ್ರಹಿಸಿ ಉಪ ಜೀವನ ಮಾಡಿದ್ವಿ. ನನ್ನ ಮಗ ಸೇನೆ ಸೇರಿದ ವಿಷಯ ನಮಗೆ ಹೇಳಿ ಹೋಗಿದ್ದ. ಅತಿ ಸಂತೋಷದಿಂದಲೇ ಮದುವೆ ಮಾಡಿದ್ವಿ. ಆದರೆ, ಕಾರ್ಗಿಲ್ ಯುದ್ಧ ನಡೆಯುವ ಮುನ್ನ ನಮಗೊಂದು ಪತ್ರ ಬರೆದು ನೀವೆಲ್ಲರೂ ಧೈರ್ಯವಾಗಿರಿ. ನಾನೂ ಕ್ಷೇಮವಾಗಿದ್ದೇನೆಂದು ಪತ್ರದಲ್ಲಿ ತಿಳಿಸಿದ್ದ ಎನ್ನುತ್ತಲೇ ಯೋಧನ ತಾಯಿ ಕಣ್ಣಾಲೆಗಳಲ್ಲಿ ನೀರು ತುಂಬಿಕೊಂಡಿದ್ದವು.

1999ರಲ್ಲಿ ಕಾರ್ಗಿಲ್ ಯುದ್ಧ ಆರಂಭವಾಗಿತ್ತು. ದೇಶದೆಲ್ಲೆಡೆ ಯುದ್ಧದ ಮಾತು ಮೊಳಗಿದ್ದವು. ಅದಾಗಲೇ ಹವಾಲ್ದಾರ್‌ ಹುದ್ದೆಯಿಂದ ಲಾಸ್‌ ಹವಾಲ್ದಾರ್‌ ಹುದ್ದೆಗೆ ಬಡ್ತಿ ಪಡೆದಿದ್ದ ಹುತಾತ್ಮ ಯೋಧ ಮಲ್ಲಯ್ಯ ಅವರು ಯುದ್ಧದಲ್ಲಿ ಹೋರಾಡಿ 02-07-1999ರಂದು ದೇಶ ಸೇವೆ ಮಾಡುತ್ತಲೇ ಹುತಾತ್ಮರಾದರು. ಈ ವಿಷಯ ಕುಟುಂಬ ಸದಸ್ಯರಿಗೆ ಸೇನಾ ಪಡೆ ಮಾಹಿತಿ ರವಾನಿಸಿ ಸಕಲ ಸರ್ಕಾರಿ ಗೌರವದೊಂದಿಗೆ ವೀರ ಯೋಧನ ದೇಹವನ್ನು ಬೆಂಗಳೂರಿಗೆ ತಂದು ಅಲ್ಲಿಂದ ಜಿಲ್ಲಾಧಿಕಾರಿ ಕಚೇರಿಗೆ ತರಲಾಯಿತು. ಮಧ್ಯಾಹ್ನ 3 ಗಂಟೆ ಸುಮಾರಿಗೆ ಅಳವಂಡಿ ಗ್ರಾಮಕ್ಕೆ ಯೋಧನ ಪಾರ್ಥಿವ ಶರೀರ ತಂದು ಕುಟುಂಬಕ್ಕೆ ಅರ್ಪಿಸಿದರು. ಜಿಲ್ಲಾಡಳಿತ ಸರ್ಕಾರಿ ಗೌರವ ಸಲ್ಲಿಸಿ ಅಳವಂಡಿಯಲ್ಲಿ ಸಮಾಧಿ ಮಾಡಲಾಯಿತು. ಯೋಧನ ಅಸ್ತಿಯನ್ನು ಕೂಡಲಸಂಗಮದಲ್ಲಿ ಅರ್ಪಣೆ ಮಾಡಲಾಯಿತು.

ಇಂದಿಗೂ ಆ ಸಮಾಧಿಗೆ ಕುಟುಂಬ ವರ್ಗ ಸೇರಿದಂತೆ ಇತರರು ಪೂಜೆ ಸಲ್ಲಿಸಿ ನಮಿಸಿ ಬರುತ್ತಿದ್ದಾರೆ. ಹುತಾತ್ಮ ಯೋಧ ಮಲ್ಲಯ್ಯ ಹೋರಾಡಿದ ಸಂದರ್ಭವನ್ನು ಸ್ಮರಿಸುತ್ತಲೇ ಅವರಿಂದ ಪ್ರೇರೇಪಿತರಾಗಿ ಅಳವಂಡಿಯ ನಾಲ್ವರು ಯುವಕರು ಇಂದು ಸೇನೆ ಸೇರಿ ದೇಶದ ಗಡಿ ಕಾಯುತ್ತಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next