Advertisement

ಕೊಹ್ಲಿ ಯುಗಾರಂಭಕ್ಕೆ  ಪುಟವಿಡಲಿ ಪುಣೆ

09:07 AM Jan 15, 2017 | |

ಪುಣೆ: ಭಾರತೀಯ ಕ್ರಿಕೆಟಿಗೆ ಈಗ ನಿಜಾರ್ಥ ದಲ್ಲಿ ಸಂಕ್ರಮಣ. ಸೀಮಿತ ಓವರ್‌ಗಳ ಪಂದ್ಯಗಳಲ್ಲಿ ನಾಯಕತ್ವ ಬದಲಾಗುವ ನಿರ್ಣಾಯಕ ಘಟ್ಟ. ಇಷ್ಟು ಕಾಲ ಧೋನಿ ಸಾರಥ್ಯದಲ್ಲಿ ಗೆಲುವಿನ ಸಾಕಷ್ಟು ಸಿಹಿ-ಸಂಭ್ರಮ ಅನುಭವಿಸಿದ ಟೀಮ್‌ ಇಂಡಿಯಾ ಇನ್ನು ಕೊಹ್ಲಿ ಕ್ಯಾಪ್ಟನ್ಸಿಯಲ್ಲಿ ಇದನ್ನು ಎದುರು ನೋಡಲಿದೆ. ಇದಕ್ಕೆ ರವಿವಾರ ಪುಣೆಯಲ್ಲಿ ಮುಹೂರ್ತ. ಪ್ರವಾಸಿ ಇಂಗ್ಲೆಂಡ್‌ ಎದುರಿನ ಮೊದಲ ಏಕದಿನ ಪಂದ್ಯಕ್ಕೆ ಇಲ್ಲಿನ “ಎಂಸಿಎ ಸ್ಟೇಡಿಯಂ’ನಲ್ಲಿ ವೇದಿಕೆ ಸಿದ್ಧವಾಗಿದೆ.

Advertisement

ವಿರಾಟ್‌ ಕೊಹ್ಲಿ ಈಗಾಗಲೇ ಟೆಸ್ಟ್‌ ಕ್ರಿಕೆಟಿನ ಯಶಸ್ವಿ ನಾಯಕನಾಗಿ ಮೂಡಿಬಂದಿದ್ದಾರೆ. ಇದಕ್ಕೆ ತಾಜಾ ಉದಾ ಹರಣೆ ಪ್ರವಾಸಿ ಇಂಗ್ಲೆಂಡ್‌ ವಿರುದ್ಧ ಸಾಧಿಸಿದ 4-0 ಅಂತರದ ಅಮೋಘ ಸರಣಿ ಜಯ. ಈಗ ದೊಡ್ಡದೊಂದು ಬ್ರೇಕ್‌ ಬಳಿಕ ಇಂಗ್ಲೆಂಡ್‌ ವಿರುದ್ಧವೇ ಏಕದಿನ ಸರಣಿ ಮೊದಲ್ಗೊಳ್ಳಲಿದೆ. ಆದರೆ ಇದು “ಅದೇ ಇಂಗ್ಲೆಂಡ್‌’ ಅಲ್ಲ ಎಂಬ ಎಚ್ಚರಿಕೆ ಭಾರತಕ್ಕಿರಬೇಕಾದುದು ಅಗತ್ಯ.

ಟೆಸ್ಟ್‌ ಸರಣಿಯ ಫ‌ಲಿತಾಂಶ ಹೇಗೆಯೇ ದಾಖಲಾಗಿರಲಿ, ಏಕದಿನದಲ್ಲಿ ಇಂಗ್ಲೆಂಡ್‌ ಪಕ್ಕಾ ವೃತ್ತಿಪರ ತಂಡವಾಗಿ ಹೊರಹೊಮ್ಮಿರುವುದು ಸುಳ್ಳಲ್ಲ. ಜಾಸನ್‌ ರಾಯ್‌, ಅಲೆಕ್ಸ್‌ ಹೇಲ್ಸ್‌, ನಾಯಕ ಇಯಾನ್‌ ಮಾರ್ಗನ್‌, ಜೋ ರೂಟ್‌, ಬೆನ್‌ ಸ್ಟೋಕ್ಸ್‌, ಮೊಯಿನ್‌ ಅಲಿ, ಸ್ಯಾಮ್‌ ಬಿಲ್ಲಿಂಗ್ಸ್‌, ಆದಿಲ್‌ ರಶೀದ್‌… ಹೀಗೆ ಅಪಾಯಕಾರಿ ಆಟಗಾರರ ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ. ಟೆಸ್ಟ್‌ ಸರಣಿ ಸೋಲಿಗೆ ಸೇಡು ತೀರಿಸಿ ಕೊಳ್ಳುವ ಸಾಮರ್ಥ್ಯ ಈ ಆಂಗ್ಲ ಪಡೆಗೆ ಇದೆ, ಪ್ರವಾಸಿಗರ ಗುರಿಯೂ ಇದೇ ಆಗಿದೆ ಎಂಬುದನ್ನು ಕೊಹ್ಲಿ ಬಳಗ ಅರಿಯಬೇಕಿದೆ. 

ಇಂಗ್ಲೆಂಡ್‌ ಏಕದಿನಕ್ಕೆ ಹೇಳಿ ಮಾಡಿಸಿದಂಥ ತಂಡ. ಕಳೆದ ವರ್ಷ 11-5 ಗೆಲುವು-ಸೋಲಿನ ದಾಖಲೆಯೊಂದಿಗೆ ಗಮನ ಸೆಳೆದಿದೆ. ಇನ್ನೊಂದು ರೀತಿಯಲ್ಲಿ ಹೇಳುವುದಾದರೆ, ಆಡಿದ ಕೊನೆಯ 12 ಏಕದಿನಗಳಲ್ಲಿ ಕೇವಲ ಎರಡರಲ್ಲಷ್ಟೇ ಸೋತಿದೆ. ಈ ಸಂಗತಿಗಳನ್ನು ಭಾರತ ಗಮನದಲ್ಲಿ ಇರಿಸಿಕೊಳ್ಳಬೇಕು.

ವಿಶ್ವಕಪ್‌ ಬಳಿಕ ಮಿಶ್ರಫ‌ಲ
2015ರ ವಿಶ್ವಕಪ್‌ ಬಳಿಕ ಭಾರತ ಏಕದಿನದಲ್ಲಿ ಮಿಶ್ರಫ‌ಲ ಅನುಭವಿಸುತ್ತ ಬಂದಿರುವು ದನ್ನು ಗಮನಿಸಬೇಕು. ಆಡಿದ 24 ಪಂದ್ಯಗಳಲ್ಲಿ 11ರಲ್ಲಿ ಸೋಲನುಭವಿ ಸಿದೆ. ದಕ್ಷಿಣ ಆಫ್ರಿಕಾ ವಿರುದ್ಧ ತವರಿನಲ್ಲಿ, ಆಸ್ಟ್ರೇಲಿಯ ಹಾಗೂ ಬಾಂಗ್ಲಾದೇಶದಲ್ಲಿ ಭಾರತ ಸರಣಿ ಸೋತಿದೆ. ಸರಣಿ ಜಯಿಸಿದ್ದು ಜಿಂಬಾಬ್ವೆಯಲ್ಲಿ ಮತ್ತು ನ್ಯೂಜಿಲ್ಯಾಂಡ್‌ ವಿರುದ್ಧ ಮಾತ್ರ. 2019ರ ವಿಶ್ವಕಪ್‌ಗೆ ಈಗಿನಿಂದಲೇ ತಯಾರಿ ಆರಂಭಿಸಬೇಕಿರುವುದರಿಂದ ಭಾರತ ಹೆಚ್ಚಿನ ಸಂಖ್ಯೆಯ ಗೆಲುವುಗಳನ್ನು ತನ್ನ ಖಾತೆಗೆ ಜಮೆ ಮಾಡಬೇಕಿದೆ.

Advertisement

ಇದೇ ವರ್ಷ ಇಂಗ್ಲೆಂಡ್‌ ವಿರುದ್ಧ ಐಸಿಸಿ ಚಾಂಪಿಯನ್ಸ್‌ ಟ್ರೋಫಿ ಪಂದ್ಯಾವಳಿ ನಡೆಯಲಿದ್ದು, ಭಾರತ ಹಾಲಿ ಚಾಂಪಿಯನ್‌ ಎಂಬುದನ್ನು ಮರೆಯುವಂತಿಲ್ಲ. ಈ ಚಾಂಪಿಯನ್ಸ್‌ ಟ್ರೋಫಿಗೂ ಮುನ್ನ ಭಾರತ ಆಡಲಿರುವ ಕೊನೆಯ ಏಕದಿನ ಸರಣಿಯೂ ಇದಾಗಿದೆ.

ಇತ್ತಂಡಗಳ ಬ್ಯಾಟಿಂಗ್‌ ಬಲಿಷ್ಠ
2 ಅಭ್ಯಾಸ ಪಂದ್ಯದಲ್ಲಿ ಸಮಬಲದ ಸಾಧನೆ ದಾಖಲಾಗಿದೆ. ಚೇಸಿಂಗ್‌ ಮಾಡಿದ ತಂಡಗಳೇ ಜಯ ಸಾಧಿಸಿವೆ. ಎರಡೂ ತಂಡಗಳ ಬ್ಯಾಟಿಂಗ್‌ ಹೆಚ್ಚು ಬಲಿಷ್ಠ ಹಾಗೂ ಆಳವಾಗಿದೆ. ದೊಡ್ಡ ಮೊತ್ತ ಎದುರಿದ್ದರೂ ಬೆನ್ನಟ್ಟಿ ಗೆಲ್ಲುವ ಸಾಮರ್ಥ್ಯವನ್ನು ಹೊಂದಿವೆ ಎಂಬುದು ಮೇಲ್ನೋಟಕ್ಕೆ ಕಾಣುವ ಸಂಗತಿ. 

ಬೌಲಿಂಗ್‌ ಬಲಾಬಲವನ್ನು ಅವಲೋಕಿಸುವಾಗ ಭಾರತದ ದಾಳಿಯಲ್ಲಿ ಹೆಚ್ಚು ವೈವಿಧ್ಯವಿರುವುದನ್ನು ಗಮನಿಸಿರ ಬಹುದು. ಅಶ್ವಿ‌ನ್‌-ಜಡೇಜ ಸ್ಪಿನ್‌ ಮತ್ತೆ ಆಂಗ್ಲರಿಗೆ ಅಗ್ನಿಪರೀಕ್ಷೆಯಾಗಿ ಪರಿಣಮಿಸಬಹುದು. ಬುಮ್ರಾ-ಪಾಂಡ್ಯ, ಯಾದವ್‌-ಭುವನೇಶ್ವರ್‌ ಮೇಲೂ ಅಪಾರ ನಿರೀಕ್ಷೆ ಇರಿಸಿಕೊಳ್ಳಲಾಗಿದೆ. 

ಹನ್ನೊಂದರ ಬಳಗದ ಕೌತುಕ
ಧೋನಿ ಓರ್ವ ಸಾಮಾನ್ಯ ಆಟಗಾರನಾಗಿ ಆಡುವುದರಿಂದ, ಯುವರಾಜ್‌ ಸಿಂಗ್‌ ಅಚ್ಚರಿಯ ಪ್ರವೇಶ ಪಡೆದಿರುವುದರಿಂದ ಟೀಮ್‌ ಇಂಡಿಯಾದ ಆಡುವ ಬಳಗದಲ್ಲಿ ಕೆಲವು ಕೌತುಕಗಳನ್ನು ಎದುರು ನೋಡಬಹುದಾಗಿದೆ. 
ಓಪನಿಂಗಿಗೆ ರೋಹಿತ್‌ ಶರ್ಮ ಇಲ್ಲದಿರುವುದರಿಂದ ಧವನ್‌, ರಾಹುಲ್‌, ರಹಾನೆ ನಡುವೆ ತ್ರಿಕೋನ ಪೈಪೋಟಿ ಕಂಡುಬರಲಿದೆ. ಮಧ್ಯಮ ಸರದಿಯಲ್ಲಿ ಯುವರಾಜ್‌, ಜಾಧವ್‌, ಪಾಂಡೆ ನಡುವೆ ಸ್ಪರ್ಧೆ ಇದೆ. ಹೀಗಾಗಿ ರಹಾನೆಗೇನಿದ್ದರೂ ಆರಂಭಿಕನ ಸ್ಥಾನವೇ ಸೂಕ್ತ ಎಂಬುದು ಸದ್ಯದ ತೀರ್ಮಾನ.  ದ್ವಿತೀಯ ಅಭ್ಯಾಸ ಪಂದ್ಯವನ್ನು ಗೆಲ್ಲಿಸಿದ ಸಾಧನೆಗಾದರೂ ರಹಾನೆಗೆ ಹನ್ನೊಂದರ ಬಳಗದಲ್ಲಿ ಸ್ಥಾನ ಕೊಡಲೇಬೇಕೆಂಬುದು ಬಹು ಜನರ ಅಭಿಪ್ರಾಯ.

ಸಂಭಾವ್ಯ ತಂಡಗಳು
ಭಾರತ:
ಶಿಖರ್‌ ಧವನ್‌, ಕೆ.ಎಲ್‌. ರಾಹುಲ್‌/ಅಜಿಂಕ್ಯ ರಹಾನೆ, ವಿರಾಟ್‌ ಕೊಹ್ಲಿ (ನಾಯಕ), ಮಹೇಂದ್ರ ಸಿಂಗ್‌ ಧೋನಿ, ಯುವರಾಜ್‌ ಸಿಂಗ್‌, ಕೇದಾರ್‌ ಜಾಧವ್‌, ಹಾರ್ದಿಕ್‌ ಪಾಂಡ್ಯ, ರವೀಂದ್ರ ಜಡೇಜ, ಆರ್‌. ಅಶ್ವಿ‌ನ್‌/ಅಮಿತ್‌ ಮಿಶ್ರಾ, ಉಮೇಶ್‌ ಯಾದವ್‌, ಜಸ್‌ಪ್ರೀತ್‌ ಬುಮ್ರಾ.

ಇಂಗ್ಲೆಂಡ್‌: ಅಲೆಕ್ಸ್‌ ಹೇಲ್ಸ್‌, ಜಾಸನ್‌ ರಾಯ್‌, ಜೋ ರೂಟ್‌, ಜಾಸ್‌ ಬಟ್ಲರ್‌, ಇಯಾನ್‌ ಮಾರ್ಗನ್‌ (ನಾಯಕ), ಬೆನ್‌ ಸ್ಟೋಕ್ಸ್‌, ಮೊಯಿನ್‌ ಅಲಿ, ಕ್ರಿಸ್‌ ವೋಕ್ಸ್‌, ಆದಿಲ್‌ ರಶೀದ್‌, ಡೇವಿಡ್‌ ವಿಲ್ಲಿ, ಲಿಯಮ್‌ ಪ್ಲಂಕೆಟ್‌/ಲಿಯಮ್‌ ಡಾಸನ್‌.

ಆರಂಭ: ಮಧ್ಯಾಹ್ನ  1.30
ಪ್ರಸಾರ: ಸ್ಟಾರ್‌ ನ್ಪೋರ್ಟ್ಸ್

Advertisement

Udayavani is now on Telegram. Click here to join our channel and stay updated with the latest news.

Next