Advertisement
ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ಪಕ್ಷದ ಆಸ್ತಿ. ಅವರು ಎಲ್ಲಿಯೇ ಬಂದರೂ ಸಾವಿರಾರು ಜನ ಸೇರುತ್ತಾರೆ. ಅವರನ್ನು ಬಿಟ್ಟರೆ ಪಕ್ಷಕ್ಕೆ ದೊಡ್ಡ ಹಾನಿಯಾಗುತ್ತದೆ. ರಾಹುಲ್ ಗಾಂಧಿ ನಾಯಕತ್ವ ಮುಂದುವರಿಯಲಿ. ಸೋಲಿಗೆ ಕಾರಣವೇನು? ಎಲ್ಲಿ ತಪ್ಪಾಗಿದೆ ಎನ್ನುವುದನ್ನು ಆತ್ಮಾವಲೋಕನ ಮಾಡಿಕೊಂಡು ತಿದ್ದಿಕೊಳ್ಳುತ್ತೇವೆ ಎಂದರು.
ಪಂಜಾಬ್‌ನಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದೇ ಬರುತ್ತದೆ ಎನ್ನುವ ವಿಶ್ವಾಸವಿತ್ತು. ಒಟ್ಟಾರೆ ಪಂಚ ರಾಜ್ಯಗಳ ಚುನಾವಣೆಯಲ್ಲಿ ನೋಟು ರದ್ದತಿ ಪರಿಣಾಮ ಆಗಿದೆಯೋ ಇಲ್ಲವೋ ಎನ್ನುವುದು ಗೊತ್ತಾಗುತ್ತಿಲ್ಲ. ಆದರೆ ಮುಂದೆ ಖಂಡಿತ ಆಗುತ್ತದೆ. ಕಾಂಗ್ರೆಸ್ ಮುಕ್ತ ಭಾರತ ಮಾಡಲು ಯಾರಿಂದಲೂ ಸಾಧ್ಯವಿಲ್ಲ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜನ ಪಕ್ಷವನ್ನು ಮುಗಿಸಬಹುದು. ರಾಜಕೀಯ ಮುಖಂಡರ ವೀರಾವೇಶದ ಮಾತಿನಿಂದ ಯಾವ ಪಕ್ಷವನ್ನು ಮುಗಿಸಲು ಸಾಧ್ಯವಿಲ್ಲವೆಂದು ಪ್ರಧಾನಿ ನರೇಂದ್ರ ಮೋದಿಗೆ ತಿರುಗೇಟು ನೀಡಿದರು. ಯಾವ ಸಿದ್ಧಾಂತ?:
ಉತ್ತರ ಪ್ರದೇಶದಲ್ಲಿ ಮತದಾರರು ಯಾವ ಸಿದ್ಧಾಂತಕ್ಕೆ ಅಂಟಿಕೊಂಡು ಮತ ಹಾಕಿದ್ದಾರೋ ಗೊತ್ತಾಗುತ್ತಿಲ್ಲ. ಮತದಾರರು ಒಂದೇ ಕಡೆ ವಾಲಿದ್ದಾರೆ. ಪಕ್ಷದ ವರಿಷ್ಠೆ ಸೋನಿಯಾ ಗಾಂಧಿ ರ್ಯಾಲಿ ಮಾಡದೆ ಕಾಂಗ್ರೆಸ್‌ಗೆ ಹಿನ್ನಡೆಯಾಗಿದೆ. ಎಲ್ಲವನ್ನೂ ಪರಾಮರ್ಶಿಸಿಯೇ ಸಮಾಜವಾದಿ ಪಕ್ಷದ ಜತೆ ಮೈತ್ರಿ ಮಾಡಿಕೊಳ್ಳಲಾಗಿತ್ತು. ರಾಜಕೀಯ ಪಕ್ಷ ಎಂದ ಮೇಲೆ ಸೋಲು-ಗೆಲುವು ಸಾಮಾನ್ಯ. ಮತ ಗಳಿಸೋಕೆ ಪ್ರಧಾನಿ ಮೋದಿ ಅವರು ಏನೆಲ್ಲ ಭಾಷಣ ಮಾಡಬೇಕೋ ಅದೆಲ್ಲ ಮಾಡಿ ಮುಗಿಸಿದ್ದಾರೆ. ನಾವು ಸಂವಿಧಾನವನ್ನು ಗೌರವಿಸುತ್ತೇವೆ. ಅದರ ತತ್ವ-ಸಿದ್ಧಾಂತ ಪಾಲಿಸುತ್ತಾ ಬಂದಿದ್ದೇವೆ. ಪಂಚ ರಾಜ್ಯಗಳ ಚುನಾವಣೆ ಫಲಿತಾಂಶ ಮುಂದಿನ ವರ್ಷ ನಡೆಯುವ ಕರ್ನಾಟಕ ರಾಜ್ಯದ ಚುನಾವಣೆ ಮೇಲೆ ಪರಿಣಾಮ ಬೀರುವುದಿಲ್ಲ ಎಂದು ಖರ್ಗೆ ಹೇಳಿದರು.