ಕನ್ನಡದಲ್ಲಿ ವಿಭಿನ್ನ ಶೀರ್ಷಿಕೆ ಇರುವ ಚಿತ್ರಗಳದ್ದೇ ಈಗ ಜೋರು ಸುದ್ದಿ. ಆ ಸಾಲಿಗೆ ಈಗ ‘ಸಂಕಷ್ಟಕರ ಗಣಪತಿ’ ಚಿತ್ರ ಹೊಸ ಸೇರ್ಪಡೆ. ಈ ಚಿತ್ರಕ್ಕೆ ಲಿಖಿತ್ ಶೆಟ್ಟಿ ಹೀರೋ. ಇದುವರೆಗೆ ಮಲ್ಟಿಸ್ಟಾರ್ ಸಿನಿಮಾಗಳಲ್ಲೇ ಕಾಣಿಸಿಕೊಂಡಿದ್ದ ಲಿಖಿತ್‌ಶೆಟ್ಟಿ ಇಲ್ಲಿ ಒಬ್ಬರೇ ಹೀರೋ. ಕನ್ನಡದಲ್ಲಿ “ನಮ್ ದುನಿಯಾ ನಮ್ ಸ್ಟೈಲ್’ ಬಳಿಕ ಮಾಡಿರುವ ಚಿತ್ರವಿದು. ಈ ನಡುವೆ ಅವರು ತುಳುವಿನಲ್ಲಿ “ಮದಿಮೆ’ ಹಾಗೂ “ಒರಿಯರ್ದೊರಿ ಅಸಲ್’ ಚಿತ್ರದಲ್ಲಿ ನಟಿಸಿದ್ದರು.
ಈಗಾಗಲೇ ಚಿತ್ರೀಕರಣ ಮುಗಿಸಿರುವ “ಸಂಕಷ್ಟಕರ ಗಣಪತಿ’ ಸದ್ಯ, ಡಿಐ ಕೆಲಸದಲ್ಲಿ ನಿರತವಾಗಿದೆ. ಜೂನ್ ಮೊದಲ ವಾರದಲ್ಲಿ ಮೊದಲ ಪ್ರತಿ ಹೊರಬರಲಿದ್ದು, ಆಡಿಯೋ ಬಿಡುಗಡೆ ಮಾಡವ ತಯಾರಿಯನ್ನೂ ಚಿತ್ರತಂಡ ಮಾಡಿಕೊಂಡಿದೆ. ಅದಕ್ಕೂ ಮೊದಲು ಮೇ.29 ರಂದು ಚಿತ್ರದ ಟ್ರೇಲರ್ ಹೊರತರಲು ಸಜ್ಜಾಗಿದೆ. ಈ ಚಿತ್ರಕ್ಕೆ ಅರ್ಜುನ್ ಕುಮಾರ್ ನಿರ್ದೇಶಕರು. ಇದು ಅವರ ಮೊದಲ ನಿರ್ದೇಶನದ ಚಿತ್ರ.
ಹೀರೋ ಲಿಖಿತ್‌ಶೆಟ್ಟಿ ಹಾಗೂ ಅರ್ಜುನ್ ಕುಮಾರ್ ಅವರು ವಾಹಿನಿಯೊಂದರಲ್ಲಿ “ಒಗ್ಗರಣೆ ಡಬ್ಬಿ’ ಕಾರ್ಯಕ್ರಮ ನಡೆಸಿಕೊಡುತ್ತಿದ್ದರು. ಆರು ವರ್ಷದ ಹಿಂದೆ ಬರುತ್ತಿದ್ದ ಈ ಕಾರ್ಯಕ್ರಮದಲ್ಲಿ ಅರ್ಜುನ್ ಕುಮಾರ್ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡುತ್ತಿದ್ದರು. ಕಳೆದ ಮೂರು ವರ್ಷದ ಹಿಂದೆ ಈ ಚಿತ್ರದ ಕಥೆ ಬಗ್ಗೆ ಚರ್ಚೆ ನಡೆಸಿ, ಅಲ್ಲಿಂದ ಸಿನಿಮಾ ತಯಾರಿ ಮಾಡಿಕೊಂಡಿದ್ದು, ಈಗ ಮುಗಿದು, ಪ್ರೇಕ್ಷಕರ ಮುಂದೆ ಬರಲು ರೆಡಿಯಾಗಿದೆ ಎಂಬುದು ಹೀರೋ ಲಿಖಿತ್ ಶೆಟ್ಟಿ ಮಾತು.
ಅಂದಹಾಗೆ, ಲಿಖಿತ್ ಶೆಟ್ಟಿ ಈ ಚಿತ್ರದಲ್ಲಿ ಪ್ರಸ್‌ವೊಂದರಲ್ಲಿ ಕಾಟೂìನಿಸ್ಟ್ ಪಾತ್ರ ನಿರ್ವಹಿಸಿದ್ದಾರಂತೆ. ಇದೊಂದು ಖಾಯಿಲೆ ಸುತ್ತ ನಡೆಯುವ ಕಥೆ. ಅದು ನೂರು ಜನರಲ್ಲಿ ಒಬ್ಬರಿಗೆ ಬರುವಂತಹ ಖಾಯಿಲೆ ಆಗಿದ್ದು, ಕೈವೊಂದು ಸಂಪೂರ್ಣ ಸ್ವಾಧೀನ ಕಳೆದು, ಆಗುವಂತಹ ತಾಪತ್ರಯಗಳ ಮೇಲೆ ಕಥೆ ಸಾಗಲಿದೆಯಂತೆ. ಗಣಪತಿ ಎಂಬ ಪಾತ್ರ ಮಾಡಿರುವ ಲಿಖಿತ್‌ಶೆಟ್ಟಿ ತನ್ನ ಎಡಗೈ ಸ್ವಾಧೀನ ಕಳೆದುಕೊಂಡು ಏನೆಲ್ಲಾ ಸಮಸ್ಯೆ ಎದುರಿಸುತ್ತಾನೆ.
ಅದರ ಹಿಂದೆ ಎಷ್ಟೆಲ್ಲಾ ರಾದ್ಧಾಂತಗಳಾಗುತ್ತವೆ ಅನ್ನುವುದನ್ನು ಹೇಳಿದ್ದಾರಂತೆ. ಹಾಗಾಗಿ, ಚಿತ್ರಕ್ಕೆ “ಸಂಕಷ್ಟಕರ ಗಣಪತಿ’ ಎಂದು ನಾಮಕರಣ ಮಾಡಿರುವುದಾಗಿ ಹೇಳುತ್ತಾರೆ ಲಿಖಿತ್‌ಶೆಟ್ಟಿ. ಚಿತ್ರಕ್ಕೆ ಶ್ರುತಿ ಎಂಬ ಹೊಸ ಪ್ರತಿಭೆ ನಾಯಕಿಯಾಗಿ ನಟಿಸಿದ್ದು, ಇದು ಅವರ ಮೊದಲ ಚಿತ್ರವಂತೆ. ಉಳಿದಂತೆ ಚಿತ್ರದಲ್ಲಿ ಅಚ್ಯುತ್, ಮಂಜುನಾಥ್ ಹೆಗಡೆ, ರೇಖಾಸಾಗರ್, ಮನ್‌ದೀಪ್‌ರಾಯ್,ಚಂದು ಬಿ.ಗೌಡ ಸೇರಿದಂತೆ ಹಲವು ನಟಿಸಿದ್ದಾರೆ.
ಬಹುತೇಕ ಬೆಂಗಳೂರಲ್ಲಿ ಚಿತ್ರೀಕರಣ ನಡೆಸಿದ್ದು, ಚಿತ್ರದಲ್ಲಿರುವ ಐದು ಹಾಡುಗಳ ಪೈಕಿ, ಒಂದು ಹಾಡನ್ನು ಆಂಧ್ರ ಪ್ರದೇಶದ ಗಂಡಿಕೋಟ ತಾಣದಲ್ಲಿ ಚಿತ್ರೀಕರಿಸಲಾಗಿದೆ. ಚಿತ್ರದ ಶೀರ್ಷಿಕೆ ಗೀತೆ “ಸಂಕಷ್ಟಕರ ಗಣಪತಿ…’ ಹಾಡಿಗೆ ರಘುದೀಕ್ಷಿತ್ ಧ್ವನಿಯಾದರೆ, ಗುರುಕಿರಣ್, ಮೆಬೂಬ್ ಸಾಬ್ ಕೂಡ ಒಂದೊಂದು ಹಾಡನ್ನು ಹಾಡಿದ್ದಾರೆ. ಹೊಸ ಪ್ರತಿಭೆಗೂ ಇಲ್ಲಿ ಅವಕಾಶ ಕಲ್ಪಿಸಲಾಗಿದೆ ಎಂಬುದು ಲಿಖಿತ್‌ಶೆಟ್ಟಿ ಮಾತು. ರಿತ್ವಿಕ್ ಮುರಳೀಧರ್ ಸಂಗೀತವಿದೆ. ಉದಯ್‌ಲೀಲಾ ಛಾಯಗ್ರಹಣವಿದೆ. ಫೈಜಾನ್‌ಖಾನ್ ಹಾಗೂ ಗೆಳೆಯರು ಈ ಚಿತ್ರವನ್ನು ನಿರ್ಮಿಸಿದ್ದಾರೆ.