Advertisement

ಇವನು ಗಂಡನಲ್ಲ, ಗೆಳೆಯ!

06:00 AM Aug 22, 2018 | |

ಮದುವೆ ಎನ್ನುವುದು ಹೆಣ್ಣಿಗೆ ಒಂದು ಹೊಸ ಪ್ರಪಂಚ. ಆ ಪ್ರಪಂಚದಲ್ಲಿ ಎಲ್ಲವೂ ಆಕೆಗೆ ಅಪರಿಚಿತ. ಅತ್ತೆ- ಮಾವ, ಗಂಡ, ಎಲ್ಲರನ್ನೂ ಅವಳು ಆಗಷ್ಟೇ ನೋಡಿರುತ್ತಾಳೆ. ಈ ಹೊತ್ತಿನಲ್ಲಿ ಬಹುದಿನಗಳ ಗೆಳತಿಯೇನಾದರೂ ಕರೆಮಾಡಿಬಿಟ್ಟರಂತೂ, “ಮದುವೆಗೆ ಮುಂಚೆಯೇ ಲೈಫ್ ಚೆನ್ನಾಗಿತ್ತು’ ಎಂದು ಹೇಳಿ, ತನ್ನ ನೋವನ್ನು ಹೊರಹಾಕುತ್ತಾಳೆ. ಅವಳ ಈ ನೋವಿನಲ್ಲಿ ನಾನಾ ಗೂಢಾರ್ಥಗಳಿವೆ. ಅತ್ತೆ ಅವಳಿಗೆ ಅಮ್ಮನಂತೆ ಕಾಣುತ್ತಿಲ್ಲ, ಮಾವನಲ್ಲಿ ಅಪ್ಪನ ಛಾಯೆಯಿಲ್ಲ. ಮಿಗಿಲಾಗಿ, ಕೈಹಿಡಿದ ಗಂಡ ತನಗೆ ಬೆಸ್ಟ್‌ ಫ್ರೆಂಡ್‌ ಆಗಿಲ್ಲ ಎನ್ನುವುದು ಆಕೆಗೆ ಹೇಳಿಕೊಳ್ಳಲಾಗದ ಬೇಸರ. ಒಂದು ವೇಳೆ, ಗಂಡ ಒಳ್ಳೆಯ ಗೆಳೆಯನಾಗಿಬಿಟ್ಟರೆ, ಆಕೆಗಾಗುವ ಖುಷಿಗೆ ಪಾರವೇ ಇರುವುದಿಲ್ಲ. ಅವಳ ಎಲ್ಲ ದುಃಖ ನಿವಾರಣೆಗೂ ಇದೇ ದಾರಿ. ಹಾಗಾದರೆ, ಇಂಥ ಸಂದರ್ಭಗಳಲ್ಲಿ ಗಂಡನ ಜವಾಬ್ದಾರಿ ಏನಾಗಿರುತ್ತೆ?

Advertisement

1. ಮುಕ್ತ ವಾತಾವರಣ ಸೃಷ್ಟಿಸಿ
ಒಬ್ಬ ಪತಿಯಾಗುವ ಮುನ್ನ ನೀವು ಆಕೆಗೆ ಒಳ್ಳೆಯ ಗೆಳೆಯನಾಗಿ. ಆಗ ನಿಮ್ಮ ಪತ್ನಿಗೆ ನಿಮ್ಮ ಮನೆ ಅಪರಿಚಿತವಾಗುವುದಿಲ್ಲ. ಆಕೆಗೆ ಮುಕ್ತ ವಾತಾವರಣ ಸಿಕ್ಕಂತಾಗುತ್ತದೆ. ಹೊಸ ಜೀವನಕ್ಕೆ ಅವಳೂ ತನ್ನನ್ನು ತೆರೆದುಕೊಳ್ಳುವಳು. ಗೆಳೆಯನಂತೆ ಅವಳ ಪಕ್ಕ ಕುಳಿತು, ಆಕೆಯ ಇಷ್ಟ ಕಷ್ಟಗಳನ್ನು ಕೇಳಿ ತಿಳಿಯಿರಿ. ಕೆಲಸದ ಒತ್ತಡ ಎಷ್ಟಿದ್ದರೂ ನಿಮ್ಮ ಪತ್ನಿಗಾಗಿ ಒಂದು ಗಂಟೆಯಾದರೂ ಮೀಸಲಿಡಿ.

2. ಹರಟೆ- ನಗುವಿರಲಿ
ಮದುವೆಯ ಹೊಸತರಲ್ಲಿ ಮನೆ ತುಂಬಾ ಜನ ಇರುತ್ತಾರೆ. ನಿಮ್ಮ ಪತ್ನಿಯಂತೂ ಬಲವಂತದ ನಗು ಬೀರುತ್ತಿರುತ್ತಾಳೆ. ಕಾರಣ, ಎಲ್ಲರೂ ಆಕೆಗೆ ಅಪರಿಚಿತರೇ. ಹಾಗಾಗಿ, ಈ ಹೊತ್ತಿನಲ್ಲಿ ಸಂತೋಷ ಕೂಟಗಳನ್ನು ಏರ್ಪಡಿಸಿ. ಹರಟೆ ಹೊಡೆಯುತ್ತಾ, ಮನರಂಜನೆ ಕಾರ್ಯಕ್ರಮಗಳನ್ನು ಏರ್ಪಡಿಸುತ್ತಾ, ಈ ಮನೆಗೆ ನಾನೂ ಸದಸ್ಯೆ ಎನ್ನುವ ಭಾವವನ್ನು ಆಕೆಯಲ್ಲಿ ಹುಟ್ಟುವಂತೆ ಮಾಡಿ. ಆಗ ಗಂಡ- ಹೆಂಡತಿ ನಡುವಿನ ಅಂತರ ಕಡಿಮೆ ಆಗುತ್ತೆ.

3. ಹನಿಮೂನ್‌ಗೆ ಹೊರಡಿ…
ಮಧುಚಂದ್ರ ಪ್ರವಾಸದಿಂದ ದಾಂಪತ್ಯ ಇನ್ನಷ್ಟು ಸಿಹಿಯಾಗುತ್ತದೆ, ಗಟ್ಟಿಯಾಗುತ್ತದೆ. ಆಕೆಗೆ ಮುಕ್ತವಾಗಿ ಮಾತಾಡಲು ಅದೊಂದು ಪ್ರಶಸ್ತ ಕಾಲ. ಈ ಹೊತ್ತಿನಲ್ಲಿ ಆಕೆಗೆ ಹೊರಜಗತ್ತು ಅಪರಿಚಿತವಾಗಿ, ಗಂಡನು ಪರಿಚಿತ ಸ್ನೇಹಿತನಾಗಿ ಕಾಣುವುದರಿಂದ, ನೀವು ಇನ್ನೂ ಹತ್ತಿರವಾಗುತ್ತೀರಿ. ಅವಳಲ್ಲಿ ಗೆಲುವು ತುಂಬಲು ಈ ಕಿರುಪ್ರವಾಸ ಹಲವು ರೀತಿಯಲ್ಲಿ ನೆರವಾಗುತ್ತದೆ.

4. ಪ್ರಿಯವಾದ ಉಡುಗೊರೆ
ಮದುವೆಗೆ ಮುಂಚೆಯೇ ಪತ್ನಿಯ ಇಷ್ಟಗಳು ನಿಮಗೆ ತಿಳಿದಿರುತ್ತವೆ. ಆ ಇಷ್ಟಕ್ಕೆ ಪೂರಕವಾಗಿಯೇ ನಡೆದುಕೊಳ್ಳಿ. ಇಷ್ಟದ ವಸ್ತು ಕೊಡಿಸುವುದು, ಆಕೆಯ ಕನಸಿನ ಸ್ಥಳಗಳಿಗೆ ಕರೆದೊಯ್ಯುವುದು, ಒಂದೊಳ್ಳೆಯ ಸಿನಿಮಾವನ್ನು ನೋಡುವುದು… ಹೀಗೆ ಮನಸ್ಸು ಅರಳಿಸುವಂಥ ಕೆಲಸ ಮಾಡಿ. ಆಕೆಯ ಇಷ್ಟಕ್ಕೆ ವಿರುದ್ಧವಾಗಿ ಚಲಿಸದಿರಿ. ಬದುಕೆಂದರೆ ಹೀಗೆಯೇ ಇರುತ್ತೆ ಎನ್ನುವ ಭಾವ ಅವಳೊಳಗೆ ಬಂದುಬಿಟ್ಟರೆ, ನೀವು ಆಕೆಯ ಮನವನ್ನು ಗೆದ್ದಿರಿ ಅಂತಲೇ ಲೆಕ್ಕ.

Advertisement

ಕಾವ್ಯ ಎಚ್‌.ಎನ್‌. ದಾವಣಗೆರೆ

Advertisement

Udayavani is now on Telegram. Click here to join our channel and stay updated with the latest news.

Next