Advertisement

ಇವರು ಕದಿಯಲೆಂದೇ ನಗರಕ್ಕೆ ಬರುತ್ತಿದ್ರು!

11:09 AM Sep 17, 2017 | Team Udayavani |

ಬೆಂಗಳೂರು: ಬ್ಯಾಂಕ್‌ ಗ್ರಾಹಕರನ್ನು ದೋಚಲೆಂದೇ ಬೆಂಗಳೂರಿಗೆ ಗುಂಪು ಗುಂಪುಗಳಾಗಿ ಬರುತ್ತಿದ್ದ ಆಂಧಪ್ರದೇಶದ ಡಕಾಯಿತರ ತಂಡದ ಇಬ್ಬರನ್ನು ನಗರ ಪೊಲೀಸರು ಬಂಧಿಸಿದ್ದಾರೆ. ಆಂಧ್ರಪ್ರದೇಶದ ಚಿತ್ತೂರಿನ ಓಜಿಕುಪ್ಪಂನ ವಿ.ಸುರೇಶ್‌ ಮತ್ತು ಶ್ರೀನಿವಾಸಲು ಬಂಧಿತರು. ಈ ತಂಡದಲ್ಲಿ ಇನ್ನು ಅನೇಕರಿದ್ದು, ಸದ್ಯ ತಲೆಮರೆಸಿಕೊಂಡಿದ್ದಾರೆ. ಆರೋಪಿಗಳ ಬಂಧನಕ್ಕಾಗಿ ವಿಶೇಷ ತಂಡ ರಚನೆ ಮಾಡಲಾಗಿದೆ. 

Advertisement

ಆಂಧ್ರಪ್ರದೇಶದ ಓಜಿಕುಪ್ಪಂ ಗ್ರಾಮದ ಸುಮಾರು 60ಕ್ಕೂ ಅಧಿಕ ಮಂದಿ ಪುರುಷರು 8 ಮಂದಿಯ 8 ತಂಡಗಳನ್ನು ಕಟ್ಟಿಕೊಂಡಿದ್ದಾರೆ. ಇವರಿಂದ ನಾಲ್ಕು ಬೈಕ್‌, ಬ್ಯಾಗ್‌ ಕತ್ತರಿಸಲು ಬಳಸುವ ಸಣ್ಣ ಚಾಕುಗಳು, 30 ಜತೆ ಬಟ್ಟೆ, ಹೆಲ್ಮೆಟ್‌ಗಳು, ಮೊಬೈಲ್‌ ಮತ್ತು ಸಿಮ್‌ಕಾರ್ಡ್‌ಗಳು, ಶೂಗಳು, ಕ್ಯಾಪ್‌ ಮತ್ತು ನಗದನ್ನು ವಶಪಡಿಸಿಕೊಳ್ಳಲಾಗಿದೆ ಎಂದು ನಗರ ಪೊಲೀಸ್‌ ಆಯುಕ್ತ ಟಿ.ಸುನೀಲ್‌ಕುಮಾರ್‌ ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಆರೋಪಿಗಳು ಆರು ತಿಂಗಳ ಹಿಂದೆ ನಗರಕ್ಕೆ ಬಂದಿದ್ದು, ಹೆಗಡೆ ನಗರ, ಹೆಣ್ಣೂರಿನ ವಡ್ಡರಪಾಳ್ಯ ಮತ್ತು ಬೇಗೂರಿನಲ್ಲಿ ಬಾಡಿಗೆ ಮನೆ ಪಡೆದು ನೆಲೆಸಿದ್ದಾರೆ. ಇಲ್ಲಿ ತಮ್ಮ ತಂಡದ ಸದಸ್ಯರನ್ನು ಉಳಿದುಕೊಳ್ಳಲು ವ್ಯವಸ್ಥೆ ಮಾಡಿದ್ದು, ಮನೆ ಮಾಲೀಕರಿಗೆ ಗ್ರಾನೈಟ್‌ ಮತ್ತು ಮನೆ ಕಟ್ಟುವ ಗುತ್ತಿಗೆದಾರರ ಕೆಲಸ ಮಾಡುತ್ತೇವೆ ಎಂದು ಹೇಳಿಕೊಂಡಿದ್ದಾರೆ.

ನಗರದಲ್ಲಿ ಕಳ್ಳತನ ಕೃತ್ಯವೆಸಗಿದ ಬಳಿಕ ಆಗಾಗ್ಗೆ ಮನೆಗಳನ್ನು ಖಾಲಿ ಮಾಡುತ್ತಿದ್ದರು. ಕನ್ನಡ ಮಾತನಾಡಲು ಬಾರದ ಆರೋಪಿಗಳು ತೆಲುಗು ಭಾಷೆಯಲ್ಲಿ ಮಾತನಾಡುತ್ತಿದ್ದರು. ಆರೋಪಿಗಳು ಯಾರಿಗೂ ಅನುಮಾನ ಬಾರದಂತೆ ನಡೆದುಕೊಳ್ಳುತ್ತಿದ್ದರು.

ಬ್ಯಾಂಕ್‌ಗಳ ಬಳಿ ಠಿಕಾಣಿ ಹಾಕುತ್ತಿದ್ದ ತಂಡ: ಈ ತಂಡದ ಸದಸ್ಯರು ನಗರದ ವಿವಿಧ ಬ್ಯಾಂಕ್‌ ಬಳಿ ಹೋಗಿ ಗ್ರಾಹಕರು ಹಣ ಡ್ರಾ ಮಾಡಿಕೊಂಡು ಬರುವುದನ್ನೇ ಕಾಯುತ್ತಾರೆ. ಗ್ರಾಹಕರು ಬ್ಯಾಂಕಿನಿಂದ ಹೊರಗೆ ಬರುತ್ತಿದ್ದಂತೆ, ನೋಟುಗಳು ಕೆಳಗೆ ಬಿದ್ದಿವೆ ಎಂದು ಗಮನ ಬೇರೆಡೆ ಸೆಳೆದು ಹಣ ಕಳವು ಮಾಡುತ್ತಿದ್ದರು. ಓಜಿಕುಪ್ಪಂ ತಂಡ ಬೆಂಗಳೂರು ಸೇರಿದಂತೆ ಹೈದರಾಬಾದ್‌, ಚೆನ್ನೈ, ವಿಜಯವಾಡ ಸೇರಿದಂತೆ ದೇಶದ ವಿವಿಧ ನಗರಗಳಲ್ಲಿ ಕೃತ್ಯವೆಸಗುತ್ತಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ.  ಈ ತಂಡ ಸತತ ಮೂರು ವರ್ಷಗಳಿಂದ ಈ ಕೃತ್ಯದಲ್ಲಿ ತೊಡಗಿದ್ದರು ಇದುವರೆಗೂ ಯಾರನ್ನು ಬಂಧಿಸಿರಲಿಲ್ಲ.

Advertisement

ಪ್ರತಿ ಕೃತ್ಯಕ್ಕೂ ಬಟ್ಟೆ ಬದಲಾವಣೆ: ಬಹಳ ವ್ಯವಸ್ಥಿತವಾಗಿ ಕೃತ್ಯವೆಸಗುತ್ತಿದ್ದ ಆರೋಪಿಗಳು ಎಲ್ಲಿಯೂ ಒಂದು ಸುಳಿವು ಬಿಡದ್ದಂತೆ ತಮ್ಮ ಕೈಚಳಕ ತೋರಿದ್ದರು. ಅದರಂತೆ ಆರೋಪಿಗಳು ಸುಮಾರು 30ಕ್ಕೂ ಅಧಿಕ ಜತೆ ಬಟ್ಟೆ, ಹೆಲ್ಮೆಟ್‌ ಮತ್ತು ಬ್ಯಾಗ್‌ಗಳನ್ನು ಖರೀದಿಸಿದ್ದಾರೆ.ಯಾವುದೇ ದರೋಡೆ ಪ್ರಕರಣದಲ್ಲಿ ಪೊಲೀಸರು ದೂರುದಾರರ ಬಳಿ, ಆರೋಪಿಗಳು ಯಾವ ಬಣ್ಣದ ಉಡುಪು, ಹೆಲ್ಮೆಟ್‌ ಧರಿಸಿದ್ದರು ಎಂದು ಮಾಹಿತಿ ಪಡೆಯುತ್ತಾರೆ.

ಇದನ್ನು ಅರಿತಿದ್ದ ತಂಡದ ಸದಸ್ಯರು ಪ್ರತಿ ಬಾರಿ ಕೃತ್ಯವೆಸಗುವಾಗಲು ಬೇರೆ ಬೇರೆ ಬಟ್ಟೆಗಳನ್ನು, ಹೆಲ್ಮೆಟ್‌ ಹಾಗೂ ಬ್ಯಾಗ್‌ಗಳನ್ನು ಧರಿಸುತ್ತಿದ್ದರು. ಒಂದು ಕೃತ್ಯದಲ್ಲಿ ಬಳಸಿದ ಬಟ್ಟೆಯನ್ನು ಮತ್ತೂಂದು ಕೃತ್ಯದಲ್ಲಿ ಬಳಸುತ್ತಿರಲಿಲ್ಲ. ಈ ಬಟ್ಟೆಗಳನ್ನು ಬಾಡಿಗೆ ಮನೆಯಲ್ಲೇ ಇಡುತ್ತಿದ್ದ ಕಳ್ಳರು, ಒಂದು ತಂಡ ಕೃತ್ಯವೆಸಗಿ ಆಂಧ್ರಪ್ರದೇಶಕ್ಕೆ ತೆರಳಿದರೆ, ಮತ್ತೂಂದು ತಂಡ ಬಂದು ಇದೇ ಬಟ್ಟೆ,ಬ್ಯಾಗ್‌, ಹೆಲ್ಮೆಟ್‌ಗಳನ್ನು ಧರಿಸಿ ಕೃತ್ಯವೆಸಗುತ್ತಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.

ಆರೋಪಿಗಳು ಇತ್ತೀಚೆಗೆ ಅಮೃತಹಳ್ಳಿಯಲ್ಲಿರುವ ಕರ್ನಾಟಕ ಬ್ಯಾಂಕ್‌ ಬಳಿ ಅನುಮಾನಾಸ್ಪದವಾಗಿ ನಿಂತಿದ್ದರು. ಅನುಮಾನಗೊಂಡ ಪೊಲೀಸರು ಆರೋಪಿಗಳ ಬಳಿ ಹೋಗುತ್ತಿದ್ದಂತೆ ಪರಾರಿಯಾಗಲು ಯತ್ನಿಸಿದರು. ಆಗ ಈ ಇಬ್ಬರು ಆರೋಪಿಗಳು ಸಿಕ್ಕಿ ಬಿದ್ದರು. ಈ ವೇಳೆ ಬ್ಯಾಗ್‌ ಕಟರ್‌ ಇನ್ನಿತರ ವಸ್ತುಗಳು ಪತ್ತೆಯಾದವು ಎಂದು ಅವರು ವಿವರಿಸಿದರು.

ಮೋಜು-ಮಸ್ತಿಗಾಗಿ ಕೃತ್ಯ: ಕಳವು ಮಾಡುತ್ತಿದ್ದ ಲಕ್ಷಾಂತರ ರೂಪಾಯಿ ಹಣವನ್ನು ಬಾರ್‌, ಪಬ್‌ ಮತ್ತು ವೇಶ್ಯಯರ ಸಹವಾಸಕ್ಕೆ ವ್ಯಯಿಸುತ್ತಿದ್ದರು. ಪ್ರತಿಷ್ಠಿತ ಮಾಲ್‌ಗ‌ಲ್ಲಿ ದುಬಾರಿ ಬೆಲೆಯ ಉಡುಪುಗಳನ್ನು ಖರೀದಿಸುತ್ತಿದ್ದರು. ಮೂರು ತಿಂಗಳಿಗೆ ಒಮ್ಮೆ ತಮ್ಮ ಊರಿಗೆ ಹೋಗಿ ಕುಟುಂಬಸ್ಥರಿಗೆ ಹಣ ನೀಡಿ ಬರುತ್ತಿದ್ದರು. ಬಳಿಕ ಪುನಃ ದರೋಡೆ ಕೃತ್ಯಗಳಲ್ಲಿ ಭಾಗಿಯಾಗುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next