Advertisement

ವಿರಳ ರಕ್ತ ಹೊಂದಿದ್ದರೂ ಇವರು ಸರಳ ದಾನಿ

11:38 AM Jun 29, 2018 | |

ಬೆಂಗಳೂರು: ರಕ್ತದಾನ ಮಹಾದಾನ. ರಕ್ತದ ಮಹತ್ವ ಬಲ್ಲವರೇ ಬಲ್ಲರು. ಹೆಚ್ಚಿನ ಸಂದರ್ಭಗಳಲ್ಲಿ ರಕ್ತದ ಮಹತ್ವ ಅರಿತೂ, ಆ ಬಗ್ಗೆ ನಿರ್ಲಕ್ಷ್ಯ ತೋರುವವರೇ ಹೆಚ್ಚು. ಆದರೆ, ನಗರದ ನಿವಾಸಿಯೊಬ್ಬರು ರಕ್ತದಾನದ ಮೂಲಕ ಯುವ ಜನತೆಗೆ ಆದರ್ಶವಾಗಿದ್ದಾರೆ.

Advertisement

ನಗರದ ದೇವಯ್ಯ ಪಾರ್ಕ್‌ ನಿವಾಸಿ, ಐಟಿಐ ಸಂಸ್ಥೆ ಒಂದರಲ್ಲಿ ಹೆಚ್ಚುವರಿ ವ್ಯವಸ್ಥಾಪಕರಾಗಿ ಕಾರ್ಯ ನಿರ್ವಹಿಸುತ್ತಿರುವ 58 ವರ್ಷದ ಶ್ರೀಧರ್‌, ಈತನಕ 48 ಬಾರಿ ರಕ್ತದಾನ ಮಾಡಿ ಹಲವರ ಜೀವ ರಕ್ಷಣೆಗೆ ನೆರವಾಗಿದ್ದಾರೆ. ವಿಶೇಷ ಎಂದರೆ ಶ್ರೀಧರ್‌ ಅವರದು ಎ, ಬಿ, ಒ ಅಥವಾ ಎಬಿ ಪಾಸಿಟಿವ್‌, ನೆಗೆಟಿವ್‌ ಗುಂಪಿನ ರಕ್ತವಲ್ಲ.

10 ಲಕ್ಷದಲ್ಲಿ ಕೇವಲ ಮೂರ್‍ನಾಲ್ಕು ಮಂದಿಯಲ್ಲಷ್ಟೇ ಕಾಣಸಿಗುವ ಅತಿ ಅಪರೂಪದ “ಬಾಂಬೆ’ ಹೆಸರಿನ ರಕ್ತದ ಗುಂಪು. ಅತಿ ಕಡಿಮೆ ಮಂದಿಗಿರುವ ರಕ್ತದ ಗುಂಪು ಹೊಂದಿರುವ ಕಾರಣ ಇವರಿಗೆ ರಾಜ್ಯ ಹಾಗೂ ನೆರೆ ರಾಜ್ಯಗಳಿಂದಲೂ ರಕ್ತದಾನಕ್ಕೆ ಅನೇಕ ಕರೆಗಳು ಬರುತ್ತವೆ.

“ನನ್ನ ಮಗುವಿಗೆ ಹುಷಾರಿಲ್ಲ. ನನ್ನ ತಂದೆ ತಾಯಿಗೆ ರಕ್ತಸ್ರಾವ ಹೆಚ್ಚಾಗಿದೆ. ಡೆಂ à ಜ್ವರ ಕಾಣಿಸಿಕೊಂಡಿದೆ, ಅಪಘಾತವಾಗಿದೆ, ತುರ್ತಾಗಿ ರಕ್ತ ಬೇಕಿದೆ ಎಂದು ಒಂದು ದಿನದಲ್ಲಿ ಹತ್ತಾರು ಕರೆಗಳು ಬರುತ್ತವೆ. ನಾನು ಈವರೆಗೆ ಅಪಘಾತದಲ್ಲಿ ತೀವ್ರ ಗಾಯಗೊಂಡವರಿಗೆ ಹಾಗೂ ಗರ್ಭಿಣಿಯರಿಗೆ ಹೆಚ್ಚು ರಕ್ತದಾನ ಮಾಡಿದ್ದೇನೆ,’ ಎನ್ನುತ್ತಾರೆ ರಕ್ತದಾನಿ ಶ್ರೀಧರ್‌.

ರಕ್ತಕ್ಕಾಗಿ ಕಾದಿದ್ದರು: 10-12 ವರ್ಷಗಳ ಹಿಂದೆ ಮಹಾರಾಷ್ಟ್ರದ ನಾಗಪುರದಲ್ಲಿ ಮೂರು ತಿಂಗಳ ಮಗುವಿಗೆ ಹೃದಯದಲ್ಲಿ ರಂಧ್ರವಾಗಿತ್ತು. ವೆಬ್‌ಸೈಟ್‌ ಒಂದರ ಮೂಲಕ ಶ್ರೀಧರ್‌ ಅವರ ನಂಬರ್‌ ಪಡೆದು, ಕರೆ ಮಾಡಿದ ಪೋಷಕರು, “ಬಾಂಬೆ’ ಗುಂಪಿನ ರಕ್ತ ನೀಡುವಂತೆ ಮನವಿ ಮಾಡಿದ್ದರು.

Advertisement

ಆಗ ಶ್ರೀಧರ್‌ ದೆಹಲಿಯಿಂದ ಬೆಂಗಳೂರಿಗೆ ಪಯಾಣಿಸುತ್ತಿದ್ದರು. ಆ ಮಗುವಿನ ಪೋಷಕರು ಅವರನ್ನು ನಾಗಪುರದ ರೈಲು ನಿಲ್ದಾಣದಲ್ಲಿ ಭೇಟಿಯಾಗಿ ಪರಿಸ್ಥಿತಿ ವಿವರಿಸಿದರು. ಶ್ರೀಧರ್‌ ಆಗಿನ್ನೂ ರಕ್ತದಾನ ಮಾಡಿ ಮೂರು ತಿಂಗಳಾಗಿರಲಿಲ್ಲ. ಹೀಗಾಗಿ ಮೂರು ತಿಂಗಳವರೆಗೂ ಮಗುವಿನ ಪೋಷಕರು ಕಾದು ಶ್ರೀಧರ್‌ ರಕ್ತದಾನ ಮಾಡಿದ ಬಳಿಕ ಶಸ್ತ್ರಚಿಕಿತ್ಸೆ ಮಾಡಿಸಿದರು. 

48ನೇ ಬಾರಿ ಮಾಡಿದ ರಕ್ತದಾನ: ವಿಶಾಖಪಟ್ಟಣದ ರೋಗಿಯೊಬ್ಬರಿಗೆ ಬೆನ್ನುಹುರಿ ಸಂಬಂಧಿ ಶಸ್ತ್ರಚಿಕಿತ್ಸೆ ನಡೆಸಬೇಕಿತ್ತು. ಆ ರೋಗಿಗೆ ವಿಶಾಖಪಟ್ಟಣದ ಆಸ್ಪತ್ರೆಯಲ್ಲಿ ಬಾಂಬೆ ಗುಂಪಿನ ಬದಲಿಗೆ “ಒ ಪಾಸಿಟಿವ್‌’ ರಕ್ತ ನೀಡಲಾಗಿತ್ತು. ಇದರಿಂದ ಪರಿಸ್ಥಿತಿ ಚಿಂತಜನಕವಾಗಿತ್ತು. ಬಳಿಕ ರೋಗಿಯನ್ನು ವೆಲ್ಲೂರಿನಲ್ಲಿರುವ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು. ಕಳೆದ ಮೇ ತಿಂಗಳ ಮೊದಲ ವಾರದಲ್ಲಿ ಶ್ರೀಧರ್‌ ಅವರೇ ಆ ರೋಗಿಗೆ ರಕ್ತದಾನ ಮಾಡಿ ಬಂದಿದ್ದಾರೆ. ಅದು ಶ್ರೀಧರ್‌ರ 48ನೇ ರಕ್ತದಾನ.

ಏನಿದು ಬಾಂಬೆ ಬ್ಲಿಡ್‌?: “ಒ’ ಪಾಸಿಟಿವ್‌ ರಕ್ತದ ಗುಂಪಿನಲ್ಲಿ ಎಚ್‌ ಆ್ಯಂಟಿಜನ್‌ ಎಂಬ ಅಂಶವಿರುತ್ತದೆ. ಆ್ಯಂಟಿಜನ್‌ ಅಂಶ ಇಲ್ಲದ ರಕ್ತ “ಬಾಂಬೆ’ ಗುಂಪಿಗೆ ಸೇರುತ್ತದೆ. ಎಚ್‌ ಆ್ಯಂಟಿಜನ್‌ ಅಂಶ ಬಾಂಬೆ ಗುಂಪಿನವರಿಗೆ ಹುಟ್ಟಿನಿಂದಲೇ ಇರುವುದಿಲ್ಲ. ಅಷ್ಟಕ್ಕೂ ಇದರಿಂದ ಯಾವುದೇ ಸಮಸ್ಯೆಯೂ ಇಲ್ಲ. “ಒ’ ಪಾಸಿಟಿವ್‌ ರಕ್ತದ ಗುಂಪನ್ನು ಹೊಂದಿರುವವರು ಎಚ್‌ ಆ್ಯಂಟಿಜನ್‌ ಪರೀಕ್ಷೆ ಮಾಡಿಸಿಕೊಂಡರೆ ಅವರು ಬಾಂಬೆ ಗುಂಪಿಗೆ ಸೇರುತ್ತಾರೋ ಇಲ್ಲವೋ ಎಂದು ತಿಳಿಯುತ್ತದೆ.

ರಕ್ತದಾನವನ್ನು ಪ್ರತಿಯೊಬ್ಬರೂ ತಮ್ಮ ಜವಾಬ್ದಾರಿ ಎಂದು ಭಾವಿಸಿದರೆ ರಕ್ತದಾನಿಗಳ ಕೊರತೆ ಇರುವುದಿಲ್ಲ. ಅದರಲ್ಲೂ ತೀರಾ ಅಪರೂಪದ ಗುಂಪಿನ ರಕ್ತವನ್ನು ಹೊಂದಿರುವವರಿಗೆ ಈ ಜವಾಬ್ದಾರಿ ಹೆಚ್ಚಿರಬೇಕು. ರಕ್ತದಾನಿಗಳು ಹೆಚ್ಚಾದಷ್ಟು, ಬದುಕಿಗಾಗಿ ಆಸ್ಪತ್ರೆಯಲ್ಲಿ ಹೋರಾಟ ನಡೆಸುತ್ತಿರುವವ ಸಂಖ್ಯೆ ಕಡಿಮೆಯಾಗಲಿದೆ.
-ಶ್ರೀಧರ್‌ ಬಿ.ಎಸ್‌, ರಕ್ತದಾನಿ.

* ಶ್ರುತಿ ಮಲೆನಾಡತಿ

Advertisement

Udayavani is now on Telegram. Click here to join our channel and stay updated with the latest news.

Next