ಯಾದಗಿರಿ: ದೇಶದ ಸಂವಿಧಾನ 18 ವರ್ಷ ಮೇಲ್ಪಟ್ಟ ಭಾರತೀಯ ನಾಗರಿಕರಿಗೆ ಮತದಾನ ಮಾಡುವ ಹಕ್ಕು ನೀಡಿದೆ. ಪ್ರಜಾಪ್ರಭುತ್ವ ವ್ಯವಸ್ಥೆ ಗಟ್ಟಿಗೊಳಿಸಲು ಅದನ್ನು ಚಲಾಯಿಸುವುದು ನಾಗರಿಕರ ಕರ್ತವ್ಯ. ಆದರೆ, ಇಲ್ಲೊಬ್ಬರು ಜನಪ್ರತಿನಿಧಿ ಎರಡು ಕಡೆ ಮತ ಚಲಾಯಿಸಿ ತಮ್ಮ ಸದಸ್ಯತ್ವವನ್ನೇ ಕಳೆದುಕೊಂಡಿದ್ದಾರೆ.
ಶಹಾಪುರ ತಾಲೂಕಿನ ಗೋಗಿ (ಕೆ) ತಾಪಂ ಕ್ಷೇತ್ರದ ಸದಸ್ಯೆಯಾಗಿ ಆಯ್ಕೆಯಾಗಿದ್ದ ಲಕ್ಷ್ಮೀ ಮಾಣಿಕರೆಡ್ಡಿ ಅವರು ಕರ್ನಾಟಕ ಪಂಚಾಯತ್ ರಾಜ್ ಕಾಯ್ದೆ 1993ರ ಸೆಕ್ಷನ್ 19(1)(ಎ) ನಿಯಮವನ್ನು ಉಲ್ಲಂಘಿಸಿದ್ದಕ್ಕೆ ಶಹಾಪುರ ಹಿರಿಯ ಶ್ರೇಣಿ ನ್ಯಾಯಾಲಯದ ನ್ಯಾಯಾಧೀಶ ಪ್ರಭು.ಎನ್.ಬಡಿಗೇರ ಮಹತ್ವದ ತೀರ್ಪು ನೀಡಿ, ಲಕ್ಷ್ಮೀ ಅವರ ಸದಸ್ಯತ್ವ ಅನರ್ಹಗೊಳಿಸಿದ್ದಾರೆ. ಇವರ ಪ್ರತಿಸ್ಪರ್ಧಿ ಚನ್ನಮ್ಮ ರಂಗಪ್ಪ ಅವರಿಗೆ ತಾಪಂ ಸದಸ್ಯೆಯ ಆಯ್ಕೆ ಪತ್ರ ನೀಡುವಂತೆ ರಾಜ್ಯ ಚುನಾವಣಾ ಆಯೋಗ, ಜಿಲ್ಲಾ ಚುನಾವಣಾಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ.
ಏನಿದು ಪ್ರಕರಣ?: 2016ರಲ್ಲಿ ನಡೆದ ತಾಪಂ ಚುನಾವಣೆಗೆ ಗೋಗಿ (ಕೆ) ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಲಕ್ಷ್ಮೀ ಸ್ಪರ್ಧಿಸಿದ್ದರು. ಲಕ್ಷ್ಮೀಯವರು ಅದೇ ಗ್ರಾಮದ ಮತಗಟ್ಟೆ ಸಂಖ್ಯೆ 55ರ ಮತದಾರರ ಪಟ್ಟಿಯಲ್ಲಿನ ಕ್ರಮ ಸಂಖ್ಯೆ 650 ಮತ್ತು ಮತಗಟ್ಟೆ 56ರಲ್ಲಿ ಮತದಾರರ ಪಟ್ಟಿ ಕ್ರಮ ಸಂಖ್ಯೆ 434, ಹೀಗೆ ಎರಡು ಕಡೆ ಹೆಸರು ಹೊಂದಿದ್ದರು. ಈ ಕುರಿತು ಪ್ರತಿಸ್ಪರ್ಧಿಯಾಗಿದ್ದ ಚನ್ನಮ್ಮ ಅವರು ತಮ್ಮ ವಕೀಲರ ಮೂಲಕ ಚುನಾವಣಾ ಅಧಿ ಕಾರಿಗಳಿಗೆ ತರಕಾರು ಅರ್ಜಿ ಸಲ್ಲಿಸಿದ್ದರು. ಆದರೂ, ಚುನಾವಣಾಧಿ ಕಾರಿಗಳು ಲಕ್ಷ್ಮೀಗೆ ಸ್ಪರ್ಧೆಗೆ ಅವಕಾಶ ನೀಡಿದ್ದರು. ಬಳಿಕ, ಲಕ್ಷ್ಮೀಯವರು 2,070 ಮತಗಳನ್ನು ಪಡೆದು ಜಯ ಗಳಿಸಿದ್ದರೆ, ಪ್ರತಿಸ್ಪರ್ಧಿ ಬಿಜೆಪಿಯ ಚನ್ನಮ್ಮ 1940 ಮತ ಪಡೆದಿದ್ದರು. ಇದನ್ನು ಪ್ರಶ್ನಿಸಿ ಚನ್ನಮ್ಮ ಅವರು 2016ರಲ್ಲಿ ಕೋರ್ಟ್ ಮೆಟ್ಟಿಲೇರಿದ್ದರು.
ಪ್ರಕರಣದ ಕುರಿತು ವಿಚಾರಣೆ ನಡೆಸಿದ ನ್ಯಾಯಾಲಯ, ಚುನಾವಣೆ ಫಲಿತಾಂಶ, ಮತಗಟ್ಟೆ 55 ಮತ್ತು 56ರ ಪಟ್ಟಿ, ಇನ್ನಿತರ 15 ದಾಖಲೆಗಳ ಪರಿಶೀಲನೆ ನಡೆಸಿತು. ಜಯ ಸಾಧಿಸಿದ ಅಭ್ಯರ್ಥಿಯನ್ನು ಅನರ್ಹಗೊಳಿಸಿದೆ. ಪ್ರತಿಸ್ಪರ್ಧಿ ಬಿಜೆಪಿಯ ಚನ್ನಮ್ಮಗೆ ಆಯ್ಕೆ ಪತ್ರ ನೀಡುವಂತೆ 2018ರ ನ.13ರಂದು ಆದೇಶಿಸಿದೆ. ಶಹಾಪುರ ತಾಪಂ 25 ಸದಸ್ಯರ ಬಲ ಹೊಂದಿದ್ದು, ಕಾಂಗ್ರೆಸ್‌ನಿಂದ 17, ಬಿಜೆಪಿಯಿಂದ 8 ಸದಸ್ಯರು ಆಯ್ಕೆಯಾಗಿದ್ದರು. ಸದ್ಯ ಕಾಂಗ್ರೆಸ್ ಅ ಧಿಕಾರದಲ್ಲಿರುವ ತಾಪಂನಲ್ಲಿ ಲಕ್ಷ್ಮೀಗೆ ಸಾಮಾಜಿಕ ಸ್ಥಾಯಿ ಸಮಿತಿಯ ಅಧ್ಯಕ್ಷಗಿರಿ ನೀಡಲಾಗಿತ್ತು.
ಜನಪ್ರತಿನಿಧಿ ಯೊಬ್ಬರು 2 ಕಡೆ ಮತದಾನ ಮಾಡಿದ್ದಾರೆಂದು ಕೋರ್ಟ್ ಮೆಟ್ಟಿಲೇರಿದ್ದೇವು. ನ್ಯಾಯಾಲಯ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ, ವಿಚಾರಣೆ ನಡೆಸಿದ್ದು, ಇದರಿಂದ ನಮಗೆ ನ್ಯಾಯ ಸಿಕ್ಕಿದೆ. ಚುನಾವಣಾ ಅ ಧಿಕಾರಿಗಳು ಕೋರ್ಟ್ ನಿರ್ದೇಶನದಂತೆ ನನಗೆ ಆಯ್ಕೆ ಆದೇಶವನ್ನು ನೀಡಬೇಕು.
– ಚನ್ನಮ್ಮ, ಬಿಜೆಪಿ ಅಭ್ಯರ್ಥಿ.