Advertisement

ಹೋಟೆಲ್‌ ಮಾಣಿಯಿಂದ ಹೈಸ್ಕೂಲ್‌ ಶಿಕ್ಷಕನಾದುದು

07:23 PM Mar 09, 2020 | Sriram |

ಈ ಜೀವನ ಬಲು ವಿಚಿತ್ರ .ಬದುಕಿನಲ್ಲಿ ಅಂದುಕೊಂಡ ಯಾವುದೇ ಕಾರ್ಯ ಆಗುತ್ತಿದೆ ಎನ್ನುವಾಗಲೇ ಅಂದುಕೊಂಡಿರದ ಹಲವಾರು ಕಾರ್ಯಗಳು ಜರುಗುತ್ತವೆ. ನಾನು ಪಿ.ಯು.ಸಿ ಪ್ರವೇಶ ಪಡೆಯುವವರಿಗೆ ಭವಿಷ್ಯದಲ್ಲಿ ಏನಾಗಬೇಕೆಂಬ ಸ್ಪಷ್ಟ ಪರಿಕಲ್ಪನೆಯಿರಲಿಲ್ಲ. ಕಾರಣ, ಮನೆಯ ಬಡತನ. ಕಲಿಕೆಯ ಹಾದಿಯಲ್ಲಿ ಎಲ್ಲಿ ಶಿಕ್ಷಣ ಮೊಟಕು ಗೊಳ್ಳುವುದೇ ಎಂಬ ಆತಂಕದಲ್ಲಿಯೇ ಕಾಲೇಜು ಮೆಟ್ಟಿಲು ಏರಿದ್ದೆ. ಸಹಪಠ್ಯ ,ಇನ್ನಿತರ ಚಟುವಟಿಕೆಗಳಲ್ಲಿ ಭಾಗವಹಿಸಿ, ಉತ್ತಮ ಪ್ರದರ್ಶನ ನೀಡುತ್ತಿದ್ದೆ.ನನ್ನ ವಾಕ್‌ ಚಾತುರ್ಯ ಕಂಡು ನಿನಗೆ ಶಿಕ್ಷಕ ವೃತ್ತಿ ಹೇಳಿ ಮಾಡಿಸುವಂತಿದೆ. ನಿನ್ನಲ್ಲಿನ ಸಹನೆ, ತಾಳ್ಮೆ, ಕಲಿಯುವ ಕಲಿಸುವ ಇಚ್ಛೆ ಅದಕ್ಕೆ ಪೂರಕ ಎಂದೆಲ್ಲಾ ಒಂದಷ್ಟು ಜನ ಸಲಹೆ ನೀಡಿದರು. ಅದೇ ವೇಳೆಗೆ ಟಿ.ಸಿ ಎಚ್‌ ಕಲಿತರೆ ನೌಕರಿ ಗ್ಯಾರಂಟಿ ಎಂಬ ನಂಬಿಕೆ ಬೆಳೆದಿತ್ತು. ಕಾರಣ, ಶಿಕ್ಷಣ ಮಂತ್ರಿಗಳಾಗಿದ್ದ ಗೋವಿಂದೇಗೌಡರು ಒಂದು ಲಕ್ಷಕ್ಕೂ ಅಧಿಕ ಶಿಕ್ಷಕರನ್ನು ನೇಮಕ ಮಾಡಿಕೊಂಡಿದ್ದರು.

Advertisement

ಹೀಗಿರಲು ನಾನೂ ಪಿ.ಯು.ಸಿ ಮುಗಿಸಿ, ಟಿ.ಸಿ.ಎಚ್‌ ಮಾಡಿ ಪ್ರಾಥಮಿಕ ಶಾಲಾ ಶಿಕ್ಷಕ ಆಗಬೇಕೆಂಬ ಬಯಕೆ ಹುಟ್ಟಿತು. ಆಗ ಟಿ.ಸಿ.ಎಚ್‌ ಸರಕಾರಿ ಕೋಟಾದಡಿ ಸೀಟು ಸಿಗಲು ತೀವ್ರ ಸ್ಪರ್ಧೆಯಿತ್ತು. ತುಂಬಾ ಕಷ್ಟ ಪಟ್ಟು ಓದಿದೆ. ದುರಾದೃಷ್ಟ 0.3 ಅಂಕಗಳ ಅಂತರದಲ್ಲಿ ನನಗೆ ಟಿ.ಸಿ ಎಚ್‌ ಸೀಟು ಸಿಗಲಿಲ್ಲ. ಎರಡನೆ ಪಟ್ಟಿಯಲ್ಲಿ ಸಿಗಬಹುದೆಂಬ ಆಶಾವಾದದಲ್ಲಿ ಬಿ.ಎ ಪ್ರವೇಶ ಪಡೆಯಲಿಲ್ಲ. ಆಗಲೂ ಕೇವಲ 0.1 ಅಂಕಗಳ ಅಂತರದಲ್ಲಿ ಸೀಟು ಸಿಗಲಿಲ್ಲ. ಇತ್ತ ಶಿಕ್ಷಣ ನಿಂತಿತು.

ಶಿಕ್ಷಕನಾಗಬೇಕೆಂಬ ಆಸೆ ತೊರೆದು ಮಂಗಳೂರು,ಉಡುಪಿ, ಗೋವಾ ಇತರೆಡೆ ಕೂಲಿ ಕೆಲಸಕ್ಕೆ ಹೋದೆ. ಈ ಅವಧಿಯಲ್ಲಿ ಹತ್ತಾರು ಕೆಲಸ ಮಾಡಿದೆ. ಒಂದು ವರ್ಷ ಆದ ಬಳಿಕ ಹಲವರ ಹೇಳಿಕೆಯಂತೆ ಬಿ.ಎಗೆ ಪ್ರವೇಶ ಪಡೆದೆ. ಮನೆಯಲ್ಲಿ ನೇಕಾರಿಕೆ ಕಾರ್ಯ ಮಾಡುತ್ತಾ ಓದಿ ಪದವಿಯನ್ನು ಅತ್ಯುನ್ನತ ದರ್ಜೆಯಲ್ಲಿ ಪಾಸಾದೆ.

ಮುಂದೇನು? ಬಿ.ಇಡಿ ಮಾಡಬೇಕೆಂಬ ಆಸೆ ಚಿಗುರಿತು. ತುಮಕೂರಿನ ಸಿದ್ದಗಂಗಾ ಶಿಕ್ಷಣ ಮಹಾವಿದ್ಯಾಲಯದಲ್ಲಿ ಸರಕಾರಿ ಕೋಟಾದಡಿ ಸೀಟು ಸಿಕ್ಕಿತು. ಸಿದ್ದಗಂಗಾ ಮಠದಲ್ಲಿ ಉಳಿದು ಅತ್ಯಂತ ಕಡಿಮೆ ಖರ್ಚಿನಲ್ಲಿ ಬಿ.ಇಡಿ ಓದಿ ಹೆಚ್ಚಿನ ಅಂಕ ಪಡೆದು ಪಾಸಾದೆ. ಈ ವೇಳೆಗೆ ಮನೆಯಲ್ಲಿ ಎಂಥ ಬಡತನವಿತ್ತು ಅಂದರೆ, ಬಿ.ಇಡಿ ಮುಗಿಸಿ ಊರಿಗೆ ಹೋಗಿ ಯಾವ ಕೆಲಸವಾದರೂ ಸರಿ ಮಾಡಬೇಕೆಂದು ನಿರ್ಧರಿಸುವಷ್ಟು. ಬಾಗಲಕೋಟೆಯ ಎಂ.ಬಿ.ಬಿ ಎಸ್‌ ಕಾಲೇಜು ಆವರಣದಲ್ಲಿರುವ ಬಸವೇಶ್ವರ ಕ್ಯಾಂಟಿನ್‌ನಲ್ಲಿ ಸಪ್ಲಾಯರ್‌ ಆಗಿ ಕೆಲಸಕ್ಕೆ ಸೇರಿದೆ. ತಿಂಗಳಿಗೆ ಊಟ, ವಸತಿ ಸಹಿತ 1,200 ರೂಪಾಯಿ ನನ್ನ ಪಗಾರ. ಕಷ್ಟದ ಕೆಲಸ. ಇಷ್ಟಪಟ್ಟು ಮಾಡಿದೆ. ಕೆವಲ ಒಂದು ತಿಂಗಳ ಒಳಗೆ ಉತ್ತಮ ಮಾಣಿ ಎಂದು ಹೆಸರು ಗಳಿಸಿದೆ.

ಗಿರಾಕಿಗಳ ಮಾಲೀಕರ ನೆಚ್ಚಿನ ಸಪ್ಲಾಯರ್‌ ಆದೆ. ನನ್ನ ವಿದ್ಯಾರ್ಹತೆ ತಿಳಿದು. ಕೆಲವರು ಅನುಕಂಪ ತೋರಿದರು. ಇನ್ನು ಕೆಲವರು ಸಲಹೆ ಕೊಟ್ಟರು. ಹೀಗಿರಲು, ಶಿಕ್ಷಕರ ನೇಮಕಕ್ಕೆ ಅರ್ಜಿ ಕರೆಯುತ್ತಾರೆ ಎಂಬ ಸುದ್ದಿ ಸಿಕ್ಕಿತು. ಹೋಟೆಲ್‌ ಮಾಣಿಯಾಗಿದ್ದುಕೊಂಡೇ ಕೆಲಸದ ನಂತರ ಸಿಗುವ ಒಂದೆರಡು ತಾಸು ಓದಿದೆ. ಪರೀಕ್ಷೆ ಬರೆದೆ. ಫ‌ಲಿತಾಂಶ ನಾನು ಪ್ರೌಢ ಶಾಲಾ ಶಿಕ್ಷಕನಾಗಿ ಆಯ್ಕೆಯಾಗಿದ್ದೆ. ಆ ಹುದ್ದೆ ಹಲವರಿಗೆ ಸಣ್ಣದು ಎನಿಸಬಹುದು. ಅವತ್ತು ನಾನಿದ್ದ ಪರಿಸ್ಥಿತಿಯಲ್ಲಿ ಅದೇ ನಂಗೆ ದೊಡ್ಡದು. ಇಂದು ಅದೇ ಹುದ್ದೆಯಲ್ಲಿ ಸಾರ್ಥಕ ಸೇವೆ ಸಲ್ಲಿಸುತ್ತಿರುವೆ. ಮಾಡುವ ಕೆಲಸದಲ್ಲಿ ನಿಷ್ಟೆ,ನಿಯತ್ತು,ಪ್ರಾಮಾಣಿಕತೆ ಇದ್ರೆ ಯಶಸ್ಸು ಖಚಿತ. ಹೋಟೆಲ್‌ ಸಪ್ಲಾಯರನಿಂದ ಹೈಸ್ಕೂಲ್‌ ಶಿಕ್ಷಕನಾಗಿ ಬದಲಾದೆನಲ್ಲ; ಆವರೆಗಿನ ನನ್ನ ಜೀವನದ ಹಾದಿ ನೆನಸಿಕೊಂಡರೆ ಈಗಲೂ ಸಂತಸ ಎನಿಸುತ್ತದೆ.

Advertisement

-ರಂಗನಾಥ ಎನ್‌ ವಾಲ್ಮೀಕಿ

Advertisement

Udayavani is now on Telegram. Click here to join our channel and stay updated with the latest news.

Next