ಬೆಂಗಳೂರು: ಅಪ್ರಾಪ್ತೆಯನ್ನು ಎರಡು ಬಾರಿ ಅಪಹರಿಸಿ ಜೊತೆಯಲ್ಲಿಟ್ಟುಕೊಂಡಿದ್ದ ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಆರೋಪಿ ಗುರು ಎಂಬಾತನಿಗೆ 10 ವರ್ಷಗಳ ಜೈಲು ಶಿಕ್ಷೆ ಹಾಗೂ 2 ಲಕ್ಷ ರೂ.ದಂಡ ವಿಧಿಸಿ ನಗರದ 54ನೇ ನ್ಯಾಯಾಲಯದ ನ್ಯಾಯಾಧೀಶರಾದ ಎಂ. ಲತಾ ಕುಮಾರಿ ತೀರ್ಪು ನೀಡಿದ್ದಾರೆ.
ಆರೋಪಿ ಗುರು ಅಲಿಯಾಸ್ ಬೂಸಾ (22) ವಿರುದ್ಧ 2015ರಲ್ಲಿ ಬಾಲಕಿ ಅಪಹರಣ ಸಂಬಂಧ ಗಿರಿನಗರ ಠಾಣೆಯಲ್ಲಿ ದಾಖಲಾದ ಪ್ರಕರಣ ಮತ್ತು ಜಯನಗರ ಠಾಣೆಯ ಪ್ರಕರಣ ಸೇರಿ ಒಟ್ಟು 10 ವರ್ಷ ಜೈಲು ಹಾಗೂ 2 ಲಕ್ಷ ರೂ. ದಂಡ ವಿಧಿಸಿ ನ್ಯಾಯಾಧೀಶರು ತೀರ್ಪು ನೀಡಿದ್ದಾರೆ. ಈ ಎರಡೂ ಪ್ರಕರಣಗಳಲ್ಲಿ ಪ್ರಾಸಿಕ್ಯೂಶನ್ ಪರವಾಗಿ ಸರ್ಕಾರಿ ವಕೀಲ ಚಿನ್ನವೆಂಕಟರಮಣಪ್ಪ ವಾದ ಮಂಡಿಸಿದ್ದರು.
ಹೊಸಕೆರೆಹಳ್ಳಿಯ ನಿವಾಸಿಯಾದ ಶ್ರೀನಿವಾಸ್ ಎಂಬುವವರ 15 ವರ್ಷದ ಪುತ್ರಿಯನ್ನು ಆರೋಪಿ ಗುರು, 2015ರ ಜುಲೈ 14ರಂದು ಅಪಹರಿಸಿ ಬಲವಂತವಾಗಿ ಮೂರುದಿನಗಳ ಕಾಲ ತನ್ನ ಜೊತೆಯಲ್ಲಿಟ್ಟುಕೊಂಡಿದ್ದ. ಈ ಸಂಬಂಧ ಬಾಲಕಿ ತಂದೆ ಶ್ರೀನಿವಾಸ್ ನೀಡಿದ ದೂರು ಆಧರಿಸಿ ತನಿಖೆ ಕೈಗೊಂಡಿದ್ದ ಗಿರಿನಗರ ಠಾಣೆ ಪೊಲೀಸರು, ಬಾಲಕಿಯನ್ನು ರಕ್ಷಿಸಿಸಿ. ಆರೋಪಿಯನ್ನು ಬಂಧಿಸಿದ್ದರು.
ಆದರೆ, ಜಾಮೀನಿನ ಆಧಾರದಲ್ಲಿ ಕೆಲವೇ ದಿನಗಳಲ್ಲಿ ಹೊರಗಡೆ ಬಂದ ಆರೋಪಿ, ಬಾಲಕಿಯನ್ನು ಪ್ರೀತಿಯ ಮಾತುಗಳನ್ನಾಡಿ ಪುಸಲಾಯಿಸಿ ಅಕ್ಟೋಬರ್ 9ರಂದು ಪುನ: ಅಪಹರಿಸಿದ್ದ. ಈ ಕುರಿತು ಪ್ರತ್ಯೇಕ ಪ್ರಕರಣ ದಾಖಲಿಸಿಕೊಂಡಿದ್ದ ಜಯನಗರ ಠಾಣೆ ಪೊಲೀಸರು, ಆರೋಪಿಯನ್ನು ಬಂಧಿಸಿ ಬಾಲಕಿಯನ್ನು ರಕ್ಷಿಸಿದ್ದರು.
ಈ ಎರಡೂ ಪ್ರತ್ಯೇಕ ಪ್ರಕರಣಗಳ ಬಗ್ಗೆ ತನಿಖೆ ಪೂರ್ಣಗೊಳಿಸಿದ್ದ ಪೊಲೀಸರು ಪೋಕ್ಸೊ ಕಾಯಿದೆ ಅಡಿಯಲ್ಲಿ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ಬಾಲಕಿಯ ಸ್ವ ಇಚ್ಛಾ ಹೇಳಿಕೆ, ಸಾಕ್ಷ್ಯಾಧಾರಗಳು, 2ನೇ ಬಾರಿ ಅಪಹರಿಸಿದ್ದನ್ನು ಗಂಭೀರವಾಗಿ ಪರಿಗಣಿಸಿದ ನ್ಯಾಯಾಧೀಶರು ಆರೋಪಿಗೆ ಶಿಕ್ಷೆ ನೀಡಿದ್ದಾರೆ ಎಂದು ವಕೀಲರಾದ ಚಿನ್ನವೆಂಕಟರಮಣಪ್ಪ ತಿಳಿಸಿದರು.