Advertisement

1850ರಲ್ಲಿ ಅಯೋಧ್ಯೆಯಲ್ಲಿ ಮೊತ್ತ ಮೊದಲ ಗಲಭೆ; ರಾಮ, ಬಾಬರಿ ಮಸೀದಿ ಟು ಪಾಲಿಟಿಕ್ಸ್

01:09 PM Sep 29, 2020 | Nagendra Trasi |

ನವದೆಹಲಿ:ಅಯೋಧ್ಯೆಯ ರಾಮಜನ್ಮ ಭೂಮಿ ಮತ್ತು ಬಾಬ್ರಿ ಮಸೀದಿ ಭೂ ವಿವಾದದ ಸುದೀರ್ಘ ವಿಚಾರಣೆ ಸುಪ್ರೀಂಕೋರ್ಟ್ ನ ಮುಖ್ಯನ್ಯಾಯಮೂರ್ತಿ ರಂಜನ್ ಗೋಗೊಯಿ ನೇತೃತ್ವದ ಪಂಚಸದಸ್ಯ ಸಾಂವಿಧಾನಿಕ ಪೀಠದಲ್ಲಿ ಬುಧವಾರ ಮುಕ್ತಾಯಗೊಂಡಿದ್ದು, ಅಂತಿಮ ತೀರ್ಪನ್ನು ಕಾಯ್ದಿರಿಸಿದೆ.

Advertisement

ಅಯೋಧ್ಯೆಯ ರಾಮಜನ್ಮ ಸ್ಥಳಕ್ಕಾಗಿ ವಿವಾದ ಆರಂಭವಾಗಿದ್ದು ಯಾವಾಗ, ಅದಕ್ಕಾಗಿ ನಡೆದ ಹಿಂಸಾಚಾರ…ರಾಮಮಂದಿರ ಸ್ಥಳ ನಮಗೆ ಬಿಟ್ಟುಕೊಡಿ ಎಂಬ ಹೋರಾಟ ಶುರುವಾದ ಘಟನೆಯ ಕಿರು ಹಿನ್ನಲೆ ಇಲ್ಲಿದೆ.

1850ರಲ್ಲಿ ಅಯೋಧ್ಯೆಯ ಹನುಮಾನ್ ಗೃಹ ಸಮೀಪದ ಮಸೀದಿ ಸಮೀಪ ಮೊದಲ ಬಾರಿಗೆ ಧಾರ್ಮಿಕ ಹಿಂಸಾಚಾರ ನಡೆದಿತ್ತು. ಅಂದು ಬಾಬ್ರಿ ಮಸೀದಿ ಮೇಲೆ ಹಿಂದೂಗಳು ದಾಳಿ ನಡೆಸಿದ್ದರು. ಅಂದಿನಿಂದ ಸ್ಥಳೀಯ ಹಿಂದೂಗಳ ಗುಂಪು ಆ ಸ್ಥಳವನ್ನು ನಮ್ಮ ಒಡೆತನಕ್ಕೆ ಕೊಡಬೇಕು ಮತ್ತು ಅಲ್ಲಿ ರಾಮನ ದೇವಾಲಯ ಕಟ್ಟಲು ಅನುಮತಿ ಕೊಡಬೇಕು ಎಂಬ ಬೇಡಿಕೆ ಆರಂಭವಾಗಿತ್ತು. ಆದರೆ ಅಂದು ವಸಾಹತುಶಾಹಿ (ಬ್ರಿಟಿಷ್) ಸರಕಾರ ಅದಕ್ಕೆ ಅವಕಾಶ ನೀಡಿರಲಿಲ್ಲವಾಗಿತ್ತು.

1885ರಲ್ಲಿ ಅಯೋಧ್ಯೆ ಪ್ರಕರಣ ಮೊದಲ ಬಾರಿ ನ್ಯಾಯಾಲಯದ ಮೆಟ್ಟಿಲೇರಿತ್ತು. 1885ರಲ್ಲಿ ಮಹಂತಾ ರಘುವರ್ ದಾಸ್ ಎಂಬವರು ರಾಮನ ಜನ್ಮಸ್ಥಳಕ್ಕೆ ಮೇಲ್ಛಾವಣಿ ನಿರ್ಮಿಸಲು ಅವಕಾಶ ನೀಡಬೇಕೆಂದು ಕೋರಿ ಪ್ರಕರಣ ದಾಖಲಿಸಿದ್ದರು. ಆದರೆ ಅದಕ್ಕೆ ಅವಕಾಶ ಸಿಕ್ಕಿರಲಿಲ್ಲವಾಗಿತ್ತು. 1859ರಲ್ಲಿ ಹಿಂದೂ-ಮುಸ್ಲಿಮರ ಪೂಜಾ ಸ್ಥಳ ತೀವ್ರ ವಿವಾದಕ್ಕೆ ಕಾರಣವಾಗುತ್ತಿರುವುದನ್ನು ಮನಗಂಡ ಬ್ರಿಟಿಷರು, ಎರಡು ಗೋಡೆಗಳನ್ನು ಕಟ್ಟುವ ಮೂಲಕ ಪ್ರತ್ಯೇಕವಾಗಿ ಎರಡೂ ಧರ್ಮದವರಿಗೂ ಪೂಜೆ ಸಲ್ಲಿಸಲು ಅವಕಾಶ ನೀಡಿದರು.

ನಂತರ 1946ರಲ್ಲಿ ಹಿಂದೂ ಮಹಾಸಭಾ(ಅಖಿಲ್ ಭಾರತೀಯ ರಾಮಾಯಣ ಮಹಾಸಭಾ-ಎಬಿಆರ್ ಎಂ) ಅಯೋಧ್ಯೆಯಲ್ಲಿನ ಪೂಜಾ ಸ್ಥಳವನ್ನು ತಮ್ಮ ಒಡೆತನಕ್ಕೆ ಒಪ್ಪಿಸಬೇಕೆಂದು ಪ್ರತಿಭಟನೆ ಆರಂಭಿಸಿತ್ತು. 1949ರಲ್ಲಿ ಗೋರಖ್ ನಾಥ್ ಮಠದ ಸಂತ ದಿಗ್ವಿಜಯ್ ನಾಥ್ ಅವರು ಎಬಿಆರ್ ಎಂ ಜತೆ ಕೈಜೋಡಿಸುವ ಮೂಲಕ 9 ದಿನಗಳ ಕಾಲ ನಿರಂತರ ರಾಮಚರಿತ ಮಾನಸ ಪಠಣ ಕಾರ್ಯಕ್ರಮ ಆಯೋಜಿಸಿತ್ತು. ಹೀಗೆ ಕೊನೆಯ ದಿನ ಹಿಂದೂಗಳು ಮಸೀದಿಯ ಒಳನುಗ್ಗಿ ರಾಮ ಮತ್ತು ಸೀತೆಯ ವಿಗ್ರಹಗಳನ್ನು ಇಟ್ಟಿದ್ದರು.

Advertisement

ಪ್ರಧಾನಿ ಜವಾಹರಲಾಲ್ ನೆಹರು ಅವರು ವಿಗ್ರಹವನ್ನು ತೆರವುಗೊಳಿಸುವಂತೆ ಸೂಚನೆ ನೀಡಿದ್ದರು. ಏತನ್ಮಧ್ಯೆ ಸ್ಥಳೀಯ ಅಧಿಕಾರಿಯಾಗಿದ್ದ ಕೆಕೆ ನಾಯರ್ ವಿಗ್ರಹ ತೆರವುಗೊಳಿಸಲು ಸಾಧ್ಯವಿಲ್ಲ, ಇದರಿಂದ ಕೋಮುಗಲಭೆ ಭುಗಿಲೇಳಬಹುದು ಎಂದು ತಿಳಿಸಿದ್ದರು. ಬಳಿಕ ಪೊಲೀಸರು ಆ ಸ್ಥಳಕ್ಕೆ ಹೋಗದಂತೆ ಗೇಟ್ ಗಳಿಗೆ ಬೀಗ ಹಾಕಿದ್ದರು. ಆದರೆ ವಿಗ್ರಹ ಒಳಗಿದ್ದರು, ಪುರೋಹಿತರು ದಿನಂಪ್ರತಿ ಪೂಜೆ ಸಲ್ಲಿಸಲು ಹೊರಗೆ ಅವಕಾಶ ಕಲ್ಪಿಸಿಕೊಡಲಾಗಿತ್ತು. ಹೀಗೆ ಆರಂಭವಾದ ಜಟಾಪಟಿಯಿಂದಾಗಿ ನಂತರ ಸುನ್ನಿ ವಕ್ಫ್ ಮಂಡಳಿ ಮತ್ತು ಎಬಿಆರ್ ಎಂ ಸ್ಥಳೀಯ ನ್ಯಾಯಾಲಯದಲ್ಲಿ ವಿವಾದಿತ ಸ್ಥಳ ತಮಗೆ ಸೇರಿದ್ದು ಎಂದು ದಾವೆ ಹೂಡಿದ್ದವು. ನಂತರ ಇದನ್ನು ವಿವಾದಿತ ಸ್ಥಳವೆಂದು ಘೋಷಿಸಿ, ಗೇಟುಗಳಿಗೆ ಬೀಗ ಹಾಕಲಾಗಿತ್ತು.

ಹಿಂದೂ ರಾಷ್ಟ್ರೀಯವಾದಿ ಮುಖ್ಯವಾಹಿನಿಯಾದ ಸಂಘಪರಿವಾರದಲ್ಲಿದ್ದವರು ಪ್ರತ್ಯೇಕವಾಗಿ 1964ರಲ್ಲಿ ವಿಶ್ವಹಿಂದೂ ಪರಿಷತ್ ಅನ್ನು(ಎಂಎಸ್ ಗೋಳ್ವಾಲ್ಕರ್) ಹುಟ್ಟುಹಾಕಿದ್ದರು. ಅದರ ಮುಂದುವರಿದ ಭಾಗವಾಗಿ ಬಾಬ್ರಿ ಮಸೀದಿ ಸ್ಥಳದಲ್ಲಿ ವಿಎಚ್ ಪಿ ಪ್ರತಿಭಟನೆ ಆರಂಭಿಸಿತ್ತು. ಈ ಸಂದರ್ಭದಲ್ಲಿಯೂ ಅಂದಿನ ಜಿಲ್ಲಾ ದಂಡಾಧಿಕಾರಿ ನಾಯರ್ ವಿಗ್ರಹ ತೆರವು ಮಾಡಬೇಕೆಂಬ ಆದೇಶವನ್ನು ತಿರಸ್ಕರಿಸಿದ್ದರು. ಇದರ ಪರಿಣಾಮ ಕೇರಳ ಮೂಲದ ನಾಯರ್ ಸ್ಥಳೀಯವಾಗಿ ಜನಪ್ರಿಯರಾಗಿಬಿಟ್ಟಿದ್ದರು. ಅಷ್ಟೇ ಅಲ್ಲ  ಭಾರತೀಯ ಜನ ಸಂಘಕ್ಕೆ ಸೇರ್ಪಡೆಗೊಂಡು 1967ರಲ್ಲಿ ಲೋಕಸಭೆಗೆ ಸಂಸದರಾಗಿ ಆಯ್ಕೆಯಾಗುವಂತೆ ಮಾಡಿತ್ತು.

ಹೀಗೆ ತಿರುವು ಪಡೆದುಕೊಂಡ ಈ ಪ್ರಕರಣ 1990ರ ಹೊತ್ತಿಗೆ ವಿಎಚ್ ಪಿ, ಸಂಘಪರಿವಾರ ರಾಮಜನ್ಮಭೂಮಿಯಲ್ಲಿ ರಾಮ ಮಂದಿರ ನಿರ್ಮಾಣ ಮಾಡಬೇಕೆಂಬ ಹೊಸ ಹೋರಾಟಕ್ಕೆ ಚಾಲನೆ ನೀಡಿತ್ತು.  1980ರಲ್ಲಿ ಜನಸಂಘ ಭಾರತೀಯ ಜನತಾ ಪಕ್ಷವಾಗಿ ಹೊರಹೊಮ್ಮಿತ್ತು. 1990ರಲ್ಲಿ ಎಲ್ ಕೆ ಅಡ್ವಾಣಿ ನೇತೃತ್ವದಲ್ಲಿ ನಡೆದ ರಥಯಾತ್ರೆ ರಾಮಮಂದಿರ ನಿರ್ಮಾಣದ ಕೂಗಿಗೆ ಮತ್ತಷ್ಟು ಬಲತುಂಬಿತ್ತು. 1992ರ ಡಿಸೆಂಬರ್ 6ರಂದು ಬಾಬ್ರಿ ಮಸೀದಿ ಧ್ವಂಸದ ನಂತರ ಅಯೋಧ್ಯೆ ವಿವಾದ ಮತ್ತೊಂದು ಮಜಲು ತಲುಪಿದ್ದು ಇದೀಗ ನಮ್ಮ ಕಣ್ಮುಂದೆ ಇರುವ ಇತಿಹಾಸವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next