ನಾನು ಮೊಟ್ಟ ಮೊದಲು ಚುನಾವಣೆ ಎದುರಿಸಿದ್ದು 1994ರಲ್ಲಿ. ಆಗ ಆ ಕ್ಷೇತ್ರದ ಹೆಸರು ಹುಬ್ಬಳ್ಳಿ ಗ್ರಾಮೀಣ ಎಂದಾಗಿತ್ತು. 2008ರಲ್ಲಿ ಕ್ಷೇತ್ರ ಪುನರ್‌ವಿಂಗಡಣೆ ಅನಂತರ ಇದು ಹುಬ್ಬಳ್ಳಿ ಸೆಂಟ್ರಲ್ ಕ್ಷೇತ್ರ ಎಂದಾಯಿತು. ಕಾಲೇಜು ದಿನಗಳಲ್ಲಿ ವಿದ್ಯಾರ್ಥಿ ನಾಯಕನಾಗಿದ್ದೆ. ನನ್ನ ವಿದ್ಯಾಭ್ಯಾಸದ ಅನಂತರ ಹುಬ್ಬಳ್ಳಿ ನ್ಯಾಯಾಲಯದಲ್ಲಿ ವಕೀಲನಾಗಿ ವೃತಿ ಆರಂಭಿಸಿದೆ. ವಕೀಲ ವೃತ್ತಿಯ ಪ್ರಾಕ್ಟೀಸ್ ಚೆನ್ನಾಗಿತ್ತು. ಇದರಿಂದ ಜನ ಸಂಪರ್ಕವೂ ಸಾಧ್ಯವಾಯಿತು. ಹುಬ್ಬಳ್ಳಿ ಗ್ರಾಮೀಣ ಘಟಕದ ಬಿಜೆಪಿ ಅಧ್ಯಕ್ಷನಾಗಿ ಕೆಲಸ ಮಾಡುತ್ತಾ ಪಕ್ಷದ ಸಂಘಟನೆಯಲ್ಲಿ ತೊಡಗಿಸಿಕೊಂಡೆ. ಹುಬ್ಬಳ್ಳಿ ಗ್ರಾಮೀಣ ಕ್ಷೇತ್ರದಲ್ಲಿ ಬಿಜೆಪಿ ಪ್ರತೀ ಅಸೆಂಬ್ಲಿ ಚುನಾವಣೆಯಲ್ಲಿಯೂ ಸೋಲುತ್ತಿತ್ತು. ಈ ಕ್ಷೇತ್ರದಲ್ಲಿ ಪಕ್ಷವನ್ನು ತಳಮಟ್ಟದಲ್ಲಿ ಸಂಘಟಿಸುತ್ತಾ ಬಂದೆ. ಇದೇ ಕ್ಷೇತ್ರದಿಂದಲೇ 1994ರಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದೆ. ಯಡಿಯೂರಪ್ಪ ಹಾಗೂ ಅನಂತಕು ಮಾರ್ ಅವರು ನನ್ನ ಗೆಲುವಿಗೆ ಶ್ರಮಿಸಿದರು.
ಹುಬ್ಬಳ್ಳಿ ಗ್ರಾಮೀಣ ಕ್ಷೇತ್ರದಲ್ಲಿ ಆಗೆಲ್ಲ ಕಾಂಗ್ರೆಸ್-ಜನತಾ ಪರಿವಾರದ ಮಧ್ಯೆ ಸ್ಪರ್ಧೆ ನಡೆಯುತ್ತಿತ್ತು. ಮಾಜಿ ಮುಖ್ಯಮಂತ್ರಿ ಜನತಾದಳದ ಎಸ್.ಆರ್.ಬೊಮ್ಮಾಯಿ ಹಾಗೂ ಕಾಂಗ್ರೆಸಿನ ಗೋಪಿನಾಥ ಸಾಂಡ್ರಾ ಅವರ ಮಧ್ಯೆ ಪೈಪೋಟಿ ಇರುತ್ತಿತ್ತು. ಈ ಕ್ಷೇತ್ರದಲ್ಲಿ 1994ರಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಮೊದಲ ಬಾರಿಗೆ ಸ್ಪರ್ಧಿಸಿದೆ. ಜನತಾದಳದಿಂದ ಈಗ ಮುಖ್ಯಮಂತ್ರಿಯಾಗಿರುವ ಬಸವರಾಜ ಬೊಮ್ಮಾಯಿ ಕಣಕ್ಕೆ ಇಳಿದಿದ್ದರು. ಕಾಂಗ್ರೆಸ್‌ನಿಂದ ರಾಜಾ ದೇಸಾಯಿ ಸ್ಪರ್ಧಿಸಿದ್ದರು. ಆಗ ರಾಜ್ಯದಲ್ಲಿ ಜನತಾದಳ ಅಲೆ ಇತ್ತು.
Advertisement
ಕ್ಷೇತ್ರದಲ್ಲಿ ನಾನು ಹತ್ತು ಸಾವಿರ ಹೊಸ ಮತದಾರರನ್ನು ಮತದಾರರ ಪಟ್ಟಿಗೆ ನೋಂದಾಯಿಸಿದ್ದೆ. ಪಕ್ಷದ ಕಾರ್ಯಕರ್ತರ ಪಡೆಯೊಂದಿಗೆ ಮನೆಮನೆ ಪ್ರಚಾರ ಕೈಗೊಂಡೆ. ಕಾರ್ನರ್ ಸಭೆಗಳನ್ನು ಮಾಡಿದೆ. ಎತ್ತರದ ಪ್ರದೇಶಗಳಲ್ಲಿದ್ದ ಒಂಟಿ ಮನೆಗಳಿಗೂ ಹೋಗಿ ಮತ ಯಾಚಿಸಿದೆ. ಐದಾರು ಮಹಡಿಗಳಿರುವ ಅಪಾರ್ಟ್ ಮೆಂಟ್‌ಗಳಿಗೆ ತೆರಳಿ ಮತ ನೀಡುವಂತೆ ಕೋರಿದೆ. ಮತದಾರರ ನೇರ ಸಂಪರ್ಕ ನನಗೆ ಪ್ಲಸ್ ಪಾಯಿಂಟ್ ಆಯಿತು. ನನ್ನ ಕಕ್ಷಿದಾರರು, ನನ್ನ ವಕೀಲ ಸ್ನೇಹಿತರು, ಗೆಳೆಯರು ನನ್ನ ಪರವಾಗಿ ನಿಂತರು. ನಮ್ಮ ತಂದೆ ಎಸ್.ಎಸ್.ಶೆಟ್ಟರ್ ಒಮ್ಮೆ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಮೇಯರ್ ಆಗಿದ್ದರು. ಅವರ ನಾಮಬಲವೂ ಇತ್ತು. ನನ್ನ ಸ್ನೇಹಿತರೇ ಚುನಾವಣೆಯಲ್ಲಿ ಹಣ ಖರ್ಚು ಮಾಡಿದರು. ಅತ್ಯಂತ ಕಡಿಮೆ ಹಣವನ್ನು ಆ ಚುನಾವಣೆಯಲ್ಲಿ ವೆಚ್ಚ ಮಾಡಿದೆ. ಚುನಾವಣ ಕಣದಲ್ಲಿ ಹೊಸಮುಖ ಎಂಬುದು ನನಗೆ ಅನುಕೂಲವಾಯಿತು. ಆ ಚುನಾವಣೆಯಲ್ಲಿ ಸುಮಾರು 16 ಸಾವಿರ ಮತಗಳ ಅಂತರದಿಂದ ಜನತಾದಳ ಅಭ್ಯರ್ಥಿ ವಿರುದ್ಧ ಜಯ ಸಾಧಿಸಿದೆ. ಮೊದಲ ಬಾರಿಗೆ ಬಿಜೆಪಿಯ ಕಮಲ ಈ ಕ್ಷೇತ್ರದಲ್ಲಿ ಅರಳಿತು.
Related Articles
Advertisement