Advertisement
ಈ ನವೆಂಬರ್‌ನಲ್ಲಿ ಆಚರಿಸಿದ್ದು ಮುಖ್ಯವಾಗಿ ಹಬ್ಬಗಳನ್ನೇ, ಅಪರೂಪಕ್ಕೆ ಬರುವ ಕ್ರಿಕೆಟ್ ವಿಶ್ವಕಪ್ಪನ್ನೂ ಸೇರಿ! ಕರ್ನಾಟಕ ರಾಜ್ಯೋತ್ಸವ, ನರಕ ಚತುರ್ದಶಿ ,ದೀಪಾವಳಿ ಹಬ್ಬಗಳು ಪ್ರತೀ ವರ್ಷವೂ ಶೋಭಾಯಮಾನವಾಗಿ ಆಚರಿಸುವ ಉತ್ಸವಗಳೇ. ಈ ಎಲ್ಲ ಉತ್ಸವಗಳ ಮಹತ್ವ ವಿಶಿಷ್ಟವಾದರೆ, ಆಚರಣೆಗಳೂ ವಿಭಿನ್ನ. ಈ ವೈವಿಧ್ಯತೆಗಳೇ ಹಬ್ಬಗಳನ್ನು ಸುಲಭವಾಗಿ ನೆನಪಿನಲ್ಲಿಡುವಂತೆ ಮಾಡುವುದು.
Related Articles
Advertisement
ದೀಪಾವಳಿ, ಸ್ನಾನದ ಹಬ್ಬ. ದೀಪಗಳೊಂದಿಗೆ ಸಡಗರ ನೂರ್ಮಡಿಯಾಗುವುದು ಬೆಳಕಿನ ಹಬ್ಬಕ್ಕೆ. ಸಹೋದರ-ಸಹೋದರಿಯರ ಜತೆ ಕುಳಿತು ಗೂಡುದೀಪ ಮಾಡುವುದು, ಮನೆಯ ಮುಂದೆ ಮನೆಯಲ್ಲೇ ಮಾಡಿದ ಗೂಡುದೀಪ ನೇತಾಡಿಸುವ ಅಲಿಖೀತ ಜವಾಬ್ದಾರಿ ಮನೆಯ ಚಿಣ್ಣರಿಗೆ. ಸಾಯಂಕಾಲ ಅಮ್ಮನ ಜತೆ ಮನೆಯ ಹೊರಗಡೆ ದೀಪ ಹಚ್ಚುವುದು. ಆಕಾಶದ ನಕ್ಷತ್ರದ ಜತೆ ನಮ್ಮ ಅಕ್ಕಪಕ್ಕದ ಮನೆಯವರು ಬಿಟ್ಟಿರುವ ಪಟಾಕಿಯನ್ನು ನೋಡಿ ಆನಂದಿಸಿದ್ದು, ನಕ್ಷತ್ರಕಡ್ಡಿ, ನೆಲಚಕ್ರ, ಮಳೆ ಪಟಾಕಿ, ಲಾಠಿ ಪಟಾಕಿ ಹೀಗೆ ಒಂದಿಷ್ಟು ಪಟಾಕಿಯನ್ನು ಜತೆಗೂಡಿ ಬಿಡುವುದು. ಚಿಣ್ಣರಿಗಂದೇ ಮೀಸಲಾಗಿದ್ದ ರೋಲ್-ಕಾಪ್ ರೀತಿಯ ಸಿಡಿ ಪೆಟ್ಟಿಗೆಗಳು, ಬೆಂಕಿಕಡ್ಡಿಯ ಗಾತ್ರದ ಬಣ್ಣದ ಸುರು ಕಡ್ಡಿಗಳು, ಆರಂಭಿಕರಿಗೆ ಬಿರುಸು ಪಟಾಕಿಗಳನ್ನು ಬಿಡಲು ಧೈರ್ಯವನ್ನು ನೀಡುತ್ತಿತ್ತು. ಈ ಹೊತ್ತಿಗೇ ಸರಿಸುಮಾರಾಗಿ ಶಾಲೆಯಲ್ಲಿ ತರಗತಿಯ ನಾಯಕ ಪ್ರತಿಯೊಬ್ಬರಿಂದಲೂ ಒಂದೆರಡು ರೂಪಾಯಿಗಳನ್ನು ಸಂಗ್ರಹಿಸಿ, ಬಣ್ಣದ ಕಾಗದ, ನೂಲು, ಅಂಟನ್ನು ಕೊಂಡು ತಂದು ತರಗತಿಯ ಚಾಣಾಕ್ಷನಿಗೆ ಒಪ್ಪಿಸುತ್ತಿದ್ದ. ಅವನು ತನ್ನೆಲ್ಲ ಕೌಶಲಗಳನ್ನು ಬಳಸಿ ಭರ್ಜರಿಯಾದ ಗೂಡುದೀಪವನ್ನು ತಯಾರಿಸುತ್ತಿದ್ದ. ಇನ್ನು ನಾಲ್ಕಾರು ಮಂದಿ ಸೇರಿ ತರಗತಿಯ ಛಾವಣಿಯ ಮಧ್ಯಕ್ಕೆ ಇಳಿಬಿಟ್ಟ ಜಂತಿಗೆ ಗೂಡುದೀಪವನ್ನು ಕಟ್ಟಿಬಿಡುತ್ತಿದ್ದರೆ, ತರಗತಿಯಲ್ಲಿ ಏನೋ ಸಾಧಿಸಿದ ವಾತಾವರಣ. ಕೊನೆಗೆ ನಾಲ್ಕಾರು ವಯರ್‌ಗಳನ್ನು ಬಳಸಿ ಗೂಡುದೀಪವನ್ನು ಮಿನುಗಿಸುವ ಕರ್ತವ್ಯ. ಇಷ್ಟಕ್ಕೆ ಪ್ರತೀ ತರಗತಿಯೂ ದೀಪಾವಳಿಗೆ ಮುನ್ನ ಸಿಂಗರಿಸಲ್ಪಡುತ್ತಿತ್ತು. ಮನೆಯ ತುಳಸಿ ಪೂಜೆಯ ಚೆಂದ, ಊರಿನ ದೇವಸ್ಥಾನದಲ್ಲಿ ನಡೆಯುವ ಕಾರ್ತಿಕ ಮಾಸದ ಹುಣ್ಣಿಮೆಯ ದೀಪೋತ್ಸವದಲ್ಲಿ ಲಗುಬಗೆಯಿಂದ ಭಾಗಿಯಾಗುವುದು ಬಾಲ್ಯದಲ್ಲಿ ಮಾತ್ರ ಸಾಧ್ಯವೇನೋ.
ಇಂದು ಬಹುತೇಕ ಹಬ್ಬಗಳ ಆಚರಣೆ ಸ್ಟೇಟಸ್-ರೀಲ್ಸ…ಗಳಿಗೆ ಆರಂಭವಾಗಿ ಅಲ್ಲಿಯೇ ಬಂಧಿಯಾಗುತ್ತದೆ. ಹಬ್ಬಗಳ ಸಡಗರದ ಪುಷ್ಕಳ ಭೋಜನವನ್ನು ಇದೀಗ ಮಹಾನಗರಗಳ ರೆಸ್ಟೋರೆಂಟ್‌ಗಳು ತಮ್ಮ ಮಾದರಿಗಳನ್ನಾಗಿ ಮಾಡಿಕೊಂಡಿವೆ. ಹೀಗೆ ಸಿದ್ಧ ಮಾದರಿಯಲ್ಲಿ ಎಲ್ಲವೂ ಕೂಗಳತೆಗೆ ಲಭ್ಯ. ಹಬ್ಬಗಳು ರಾಷ್ಟ್ರೀಯವಾಗಿರಲಿ, ಧಾರ್ಮಿಕವಾಗಿರಲಿ, ಅವುಗಳ ಅಂತಃಸತ್ವ ಆಚರಣೆ. ಭಾಷೆ ಯಾವುದೇ ಇರಲಿ, ಅದರ ಸತ್ವಯುತ ಸರಿಯಾದ ಬಳಕೆ ಅಗತ್ಯ. ಇಂದು ನಾವು ಉಲಿಯುವ ಕನ್ನಡ ಮತ್ತು ಗ್ರಾಂಥಿಕ ಕನ್ನಡದ ಶಾಸ್ತ್ರೀಯ ಚೌಕಟ್ಟು ಬೇರೆಬೇರೆಯಾಗಿದೆ. ಕನ್ನಡವನ್ನು ಮುದ್ರಾ ದೋಷಗಳ ನಡುವೆ ಓದುವ ಬಾಬತ್ತು ಬಂದುಬಿಟ್ಟಿದೆ. ಎಗ್ಗಿಲ್ಲದೇ ಭಾಷೆಯನ್ನು ಸಾಮಾಜಿಕ ಮಾಧ್ಯಮಗಳಲ್ಲಿ ವ್ಲಾಗ್ ರೀಲ್ಸ…ಗಳಲ್ಲಿ ಬಳಸುವುದುದು ಖುಷಿಯ ವಿಚಾರವಾದರೆ, ಅದನ್ನೇ ಸರಿಯಾದ ರೂಪ ಎಂದು ನೆಚ್ಚಿಕೊಂಡು ನಡೆಯುವ ಪಂಗಡವೂ ಇರುವುದು ಸುಳ್ಳಲ್ಲ. ಭಾಷೆ ಎಷ್ಟಾದರೂ ಸಂವಹನದ ಮಾಧ್ಯಮವಲ್ಲವೇ?
ದೇಶದ ಹಾಗೂ ನಮ್ಮ ರಾಜ್ಯದ ಅದೆಷ್ಟೋ ಕುಟುಂಬಗಳು ವಿದೇಶದಲ್ಲಿ ನೆಲೆಯಾಗಿದ್ದಾರೆ. ಹತ್ತಿರವಿದ್ದಾಗ ಅದರ ಮಹತ್ವ ತಿಳಿಯುವುದು ಕಷ್ಟ (?) ಆದರೆ ದೂರ ಹೋದಾಗ ನಮ್ಮ ಆಚರಣೆ – ಭಾಷೆ ಇವುಗಳ ಮೇಲೆ ಅಪಾರ ಪ್ರೀತಿ ಗೌರವ ಮೂಡುವುದು ನಿಜ. ಪರದೇಶದಲ್ಲಿರುವ ಅದೆಷ್ಟೋ ಕುಟುಂಬಗಳು, ಕನ್ನಡ ಸಂಘಟನೆಗಳು, ಹಬ್ಬದ ಆಚರಣೆಗಳನ್ನು ಬಹಳ ಅದ್ದೂರಿಯಿಂದಾಗಿ ಆಚರಿಸುತ್ತಾರೆ. ಸುಮಾರು ಒಂದೆರಡು ತಿಂಗಳಿಂದ ಈ ರಾಜ್ಯೋತ್ಸವ, ದೀಪಾವಳಿ ಇತ್ಯಾದಿಗಳನ್ನೆಲ್ಲ ಆಚರಿಸಲು ಸಿದ್ಧತೆ ನಡೆಸುತ್ತಾರೆ. ತಮ್ಮ ಮಕ್ಕಳಿಗೆ ಕನ್ನಡ ಕಲಿಸುವುದು, ಕನ್ನಡ ಹಾಡು ಹಾಡಿಸುವುದರಲ್ಲಿ ಆನಂದ ಪಡುತ್ತಾರೆ. ವಿದೇಶದಲ್ಲಿ ಅದೆಷ್ಟೋ ಕನ್ನಡಿಗರು ಪರಿಚಯವಾಗುವುದೇ ಕನ್ನಡ ಸಂಘನೆಗಳ ರಾಜ್ಯೋತ್ಸವದ ಆಚರಣೆಗಳಲ್ಲಿ ಹಾಗೂ ದೀಪಾವಳಿಯಂತಹ ಕಾರ್ಯಕ್ರಮದಲ್ಲಿ.
ಅನಿವಾಸೀ ಕನ್ನಡಿಗರಲ್ಲಿ ಭಾಷೆಯ ಬಗೆಗಿನ ಆಸ್ಥೆ-ತುಮುಲತೆ ಉಳಿಯುವಲ್ಲಿ ಪತ್ರಿಕೆ-ಪುರವಣಿಗೆಗಳು ದಾರಿಯಾಗುತ್ತವೆ. ಅದೆಷ್ಟೋ ಕನ್ನಡ ಪ್ರಿಯರಿಗೆ ತಮ್ಮ ಅನಿಸಿಕೆ, ಲೇಖನ, ಕಾರ್ಯಕ್ರಮದ ವರದಿಗಳು, ಮಕ್ಕಳ ಚಿತ್ರಗಳು ಇವೆಲ್ಲವನ್ನೂ ಪ್ರದರ್ಶಿಸಲು ಒಂದು ದೊಡ್ಡ ವೇದಿಕೆಯಾಗಿದೆ. ಒಟ್ಟಿನಲ್ಲಿ ಇಂತಹ ವೇದಿಕೆಯಿಂದಾಗಿಯೇ ವಿದೇಶದಲ್ಲೂ ನಾಡಭಾಷೆ ಉಳಿಯಲು ಕಾರಣವಾಗಿವೆ. ಉದಯವಾಣಿಯ ದೇಸಿಸ್ವರ ಪತ್ರಿಕೆಗೆ ನೂರರ ಸಂಚಿಕೆಗೆಯ ಹಬ್ಬ. ನೂರು ಸಾವಿರವಾಗಲಿ. ಸಾಗರದಾಚೆಯ ಮನಸ್ಸುಗಳನ್ನು ಬೆಸೆಯುವ ದೇಸಿಸ್ವರದ ಅನುರಣನ ಇಮ್ಮಡಿಯಾಗಲಿ.
-ವಿಟ್ಲ ತನುಜ್ ಶೆಣೈ, ಚೆಲ್ಟೆನ್ಹ್ಯಾಮ್