Advertisement

BJP ವರಿಷ್ಠರಿಗೂ ತಲುಪಿದ ಎಚ್‌ಡಿಕೆ ಅಸಮಾಧಾನ

10:59 PM Mar 19, 2024 | Team Udayavani |

ಬೆಂಗಳೂರು: ಬಿಜೆಪಿ-ಜೆಡಿಎಸ್‌ ಮೈತ್ರಿ ಬಗ್ಗೆ ಮಾಜಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ವ್ಯಕ್ತಪಡಿಸಿದ ಅಸಮಾಧಾನ ಬಿಜೆಪಿಯ ದಿಲ್ಲಿ ವರಿಷ್ಠರಿಗೂ ತಲುಪಿದ್ದು, ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಜತೆಗೆ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಮಂಗಳವಾರ ಬೆಳಗ್ಗೆ ದೂರವಾಣಿಯಲ್ಲಿ ಮಹತ್ವದ ಮಾತುಕತೆ ನಡೆಸಿದ್ದಾರೆ.

Advertisement

ಎಚ್‌.ಡಿ. ಕುಮಾರಸ್ವಾಮಿ ಹೇಳಿಕೆ ಬಗ್ಗೆ ನಡ್ಡಾ ಸಂಪೂರ್ಣ ವಿವರ ಪಡೆದುಕೊಂಡಿದ್ದು, ತುರ್ತುಸಮನ್ವಯ ಸಾಧಿಸುವಂತೆ ಸೂಚಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಬೆಳ್ಳಂಬೆಳಗ್ಗೆಯೇ ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡ, ಮಾಜಿ ಸಿಎಂ ಎಚ್‌.ಡಿ. ಕುಮಾರಸ್ವಾಮಿ ಜತೆಗೆ ವಿಜಯೇಂದ್ರ ದೂರವಾಣಿಯಲ್ಲಿ ಚರ್ಚೆ ನಡೆಸಿದ್ದು, ಕೋಲಾರ ಟಿಕೆಟ್‌ ವಿಚಾರವೂ ಸೇರಿ ಮೈತ್ರಿ ಗಟ್ಟಿಗೊಳಿಸುವುದಕ್ಕೆ ಅಗತ್ಯವಾದ ಕ್ರಮ ತೆಗೆದುಕೊಂಡಿದ್ದಾರೆ. ಇದಾದ ಬಳಿಕ ತುರ್ತು ಪತ್ರಿಕಾಗೋಷ್ಠಿ ಕರೆದು ಮಾತನಾಡಿದ ವಿಜಯೇಂದ್ರ, ಬಿಜೆಪಿ- ಜೆಡಿಎಸ್‌ ನಡುವೆ ಏನೇ ಸಣ್ಣಪುಟ್ಟ ವ್ಯತ್ಯಾಸಗಳಿದ್ದರೂ ಎಲ್ಲವೂ ಸುಖಾಂತ್ಯ ಆಗಲಿದೆ. ಬಿಜೆಪಿ- ಜೆಡಿಎಸ್‌ ಮೈತ್ರಿ ಸುಸೂತ್ರವಾಗಿ ಮುಂದುವರಿಯಲಿದೆ’ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಚರ್ಚೆ ಮಾಡಿದ್ದೇನೆ
ಜೆಡಿಎಸ್‌ನವರಿಗೆ ಸಮಾಧಾನ ಆಗುವ ರೀತಿಯಲ್ಲಿ ನಮ್ಮ ರಾಷ್ಟ್ರೀಯ ನಾಯಕರು ಸಮರ್ಪಕ ತೀರ್ಮಾನ ಮಾಡುವ ವಿಶ್ವಾಸ ಇದೆ. ಎಲ್ಲವೂ ಮಾತುಕತೆಯಿಂದ ಬಗೆಹರಿಯುತ್ತದೆ. ನಮ್ಮ ರಾಷ್ಟ್ರೀಯ ನಾಯಕರ ಜತೆ ನಿನ್ನೆ ದೂರವಾಣಿ ಮೂಲಕ ಚರ್ಚೆ ಮಾಡಿದ್ದೇನೆ. ಬಳಿಕ ಮಾಜಿ ಪ್ರಧಾನಿ ದೇವೇಗೌಡರು ಹಾಗೂ ಕುಮಾರಸ್ವಾಮಿಯವ ಬಳಿಯೂ ಚರ್ಚಿಸಿದ್ದೇನೆ. ಎಲ್ಲವೂ ಕೂಡ ಸುಖಾಂತ್ಯ ಕಾಣಲಿದೆ ಎಂದು ಹೇಳಿದರು.

ಡಿವಿಎಸ್‌ ಬಿಜೆಪಿ ಬಿಡುವುದಿಲ್ಲ
ಕಳೆದ ಒಂದು ವಾರದ ಘಟನೆಗಳನ್ನು ಅವಲೋಕನ ಮಾಡಿದರೆ, ಕಾಂಗ್ರೆಸ್‌ ಪಕ್ಷದ ಮುಖಂಡರಿಗೆ ಅವರ ನಾಯಕರುಗಳಿಗಿಂತ ಬಿಜೆಪಿ ಬಗ್ಗೆ ಹೆಚ್ಚು ವಿಶ್ವಾಸ ಬಂದಿದೆ. ಎಂ.ಬಿ. ಪಾಟೀಲ್‌ ಮತ್ತು ಇತರರ ಹೇಳಿಕೆ ಗಮನಿಸಿದಾಗ ಅದು ಸ್ಪಷ್ಟವಾಗುತ್ತದೆ. ಈಶ್ವರಪ್ಪನವರು ನಮ್ಮ ಪಕ್ಷದ ಹಿರಿಯರು. ಅವರ ಪುತ್ರನಿಗೆ ಟಿಕೆಟ್‌ ಕೈ ತಪ್ಪಿದ ವಿಚಾರಕ್ಕೆ ಸಂಬಂಧಪಟ್ಟಂತೆ ಯಡಿಯೂರಪ್ಪ ಹಾಗೂ ನನ್ನ ಬಗ್ಗೆ ಯಾರೋ ತಪ್ಪು ಮಾಹಿತಿ ನೀಡಿದ್ದಾರೆ. ಭವಿಷ್ಯದಲ್ಲಿ ಅವರಿಗೆ ಸತ್ಯ ಅರಿವಾಗುತ್ತದೆ. ಡಿ.ವಿ. ಸದಾನಂದಗೌಡರು ಕೂಡ ಬಿಜೆಪಿಯಲ್ಲೇ ಇರುತ್ತಾರೆ ಎಂದು ಹೇಳಿದರು.

ಪ್ರವಾಸ, ಸಭೆ ಯಶಸ್ವಿ
ರಾಜ್ಯದಲ್ಲಿ ದಿನೇದಿನೇ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಜನಪ್ರಿಯತೆ ಇನ್ನೂ ಎತ್ತರಕ್ಕೆ ಹೋಗುತ್ತಿದೆ. ಇದು ಚುನಾವಣ ರಣಭೂಮಿಯಲ್ಲಿರುವ ನಮ್ಮ ಕಾರ್ಯಕರ್ತರಿಗೆ ಉತ್ಸಾಹ ತಂದುಕೊಟ್ಟಿದೆ. ಪ್ರಧಾನಿ ನರೇಂದ್ರ ಮೋದಿಯವರ ಶಿವಮೊಗ್ಗದ ಪ್ರವಾಸ, ಸಭೆ ಯಶಸ್ವಿಯಾಗಿದೆ. ಕೇವಲ ಒಂದು ವಾರದಲ್ಲಿ ಇಷ್ಟು ದೊಡ್ಡ ಸಮಾವೇಶ ಆಯೋಜಿಸಲಾಗಿದೆ. ಶಿವಮೊಗ್ಗ, ಕಲಬುರಗಿ ಕಾರ್ಯಕ್ರಮಗಳ ಕುರಿತು ಸ್ವತಃ ಪ್ರಧಾನಿಯವರು ಸಂತಸ ವ್ಯಕ್ತಪಡಿಸಿದ್ದಾರೆ ಎಂದರು.

Advertisement

 

Advertisement

Udayavani is now on Telegram. Click here to join our channel and stay updated with the latest news.

Next