Advertisement
ಭಾನುವಾರ ಮುಂಜಾನೆ 9 ಗಂಟೆಗೆ ನಂಜನಗೂಡಿಗೆ ಅಗಮಿಸಿದ ಕೇಂದ್ರ ಸಚಿವರಿಗೆ ದೇಗುಲದಿಂದ ಸ್ವಾಗತ ನೀಡಲಾಯಿತು. ಮೊದಲಿಗೆ ವಿಘ್ನೇಶ್ವರನ ದರ್ಶನ ಪಡೆದು ನಂತರದಲ್ಲಿ ಸ್ವಾಮಿ ಸನ್ನಿಧಾನಕ್ಕೆ ಬಂದ ಕುಮಾರಸ್ವಾಮಿ, 40 ನಿಮಿಷ ವಿಶೇಷ ಪೂಜೆ ಸಲ್ಲಿಸಿದರು. ಕುಮಾರಸ್ವಾಮಿ ಆಗಮನದ ಹಿನ್ನೆಲೆಯಲ್ಲಿ ಸ್ವಾಮಿಗೆ ಕ್ಷೀರಾಭಿಷೇಕ, ರುದ್ರಾಭಿಷೇಕ ಬಿಲ್ವಪತ್ರಾರ್ಚನೆ ಮಾಡಲಾಯಿತು.
Related Articles
ದೇವರ ದರ್ಶನ ಪಡೆದು ಮೈಸೂರಿಗೆ ತೆರಳುವ ಸಂದರ್ಭದಲ್ಲಿ ಮಾರ್ಗಮಧ್ಯ ನಂಜನಗೂಡಿನ ಪ್ರವಾಸಿ ಮಂದಿರದಲ್ಲಿ ಕೆಲಕಾಲ ವಿಶ್ರಾಂತಿ ಪಡೆದು ಸ್ಥಳೀಯರೊಂದಿಗೆ ಮಾತುಕತೆ ನಡೆಸುವ ಉದ್ದೇಶದಿಂದ ವಿಶ್ರಾಂತಿ ಗೃಹಕ್ಕೆ ತೆರಳಿದರು. ಆದರೆ, ಬೇಗ ತೆರೆದಿರಲಿಲ್ಲ. 15 ನಿಮಿಷ ಕಾರಿನಲ್ಲೇ ಕಾಯಬೇಕಾದ ಪರಿಸ್ಥಿತಿ ಎದುರಾಯಿತು. ಆದರೂ, ಯಾವುದೇ ಅಧಿಕಾರಿಯಾಗಲಿ ಅಥವಾ ಅತಿಥಿ ಗೃಹದ ಸಿಬ್ಬಂದಿಯಾಗಲಿ ಬಾರದ ಹಿನ್ನೆಲೆಯಲ್ಲಿ ಮೈಸೂರಿಗೆ ತೆರಳಿದ ಕೇಂದ್ರ ಸಚಿವರು, ತಮ್ಮ ಅಸಮಾಧಾನ ಹೊರಹಾಕಿದರು.
Advertisement
ನಾನು ನಂಜನಗೂಡು ಪ್ರವಾಸ ಕೈಗೊಂಡಿರುವುದು ಎಲ್ಲಾ ಅಧಿಕಾರಿಗಳಿಗೂ ಮಾಹಿತಿ ಕೇಂದ್ರ ಸಚಿವಾಲಯದಿಂದ ರವಾನೆಯಾಗಿದೆ. ಕೇಂದ್ರ ಸಚಿವರಿಗೆ ಈ ರೀತಿ ಅವಮಾನವಾದರೆ ಸಾಮಾನ್ಯ ಜನರ ಗತಿ ಏನು ಅಧಿಕಾರಿಗಳು ಬೇಜವಾಬ್ದಾರಿಯಿಂದ ಕೆಲಸ ಮಾಡುತ್ತಿರುವುದು ಎದ್ದು ಕಾಣುತ್ತದೆ. ನನ್ನನ್ನು ಜನರಿಂದ ದೂರ ಮಾಡಲು ಸಾಧ್ಯವಿಲ್ಲ ನಾನು ಅವರ ಮಧ್ಯೆ ಬೆಳೆದಿದ್ದೇನೆ ಮತ್ತು ಅವರ ಮಧ್ಯೆ ಇರುತ್ತೇನೆ ಎಂದು ಕಿಡಿಕಾರಿದರು.
ಸಚಿವರು ಬರುವ ಬಗ್ಗೆ ಮಾಹಿತಿ ನೀಡಿರಲಿಲ್ಲ:ಸಚಿವರು ಬರುವ ಯಾವುದೇ ಮಾಹಿತಿ ನಮಗೆ ಇರಲಿಲ್ಲ. ನಮ್ಮ ಕಚೇರಿಗೆ ಯಾವುದೇ ಮಾಹಿತಿ ಬಂದಿಲ್ಲ. ಅಲ್ಲದೆ, ಮಳೆ ಬಂದು ಅತಿವೃಷ್ಟಿ ಆದ ಹಿನ್ನೆಲೆಯಲ್ಲಿ ಅತಿಥಿ ಗೃಹದ ತಳ ಮಹಡಿ ಎಲ್ಲಾ ಸಾಮಾನುಗಳನ್ನು ಮೊದಲನೇ ಮಹಡಿಗೆ ಸ್ಥಳಾಂತರಿಸಲಾಗಿದೆ. ನೀರಿನ ಪ್ರಮಾಣ ಹೆಚ್ಚಾದ ಹಿನ್ನೆಲೆಯಲ್ಲಿ ವಿಶ್ರಾಂತಿ ಗೃಹಕ್ಕೆ ನೀರು ನುಗ್ಗುತ್ತದೆ ಎಂದು ಮುಂಜಾಗ್ರತೆ ಕ್ರಮವಾಗಿ ಈ ಕ್ರಮ ಕೈಗೊಳ್ಳಲಾಗಿದೆ. ಕಳೆದ 4 ವರ್ಷ ಹಿಂದೆ ಅತಿವೃಷ್ಟಿಯಿಂದ ಸಂಪೂರ್ಣ ಪ್ರವಾಸಿ ಮಂದಿರ ನೀರಿನಲ್ಲಿ ಮುಳುಗಿತ್ತು. ಬೆಲೆಬಾಳುವ ಎಲ್ಲಾ ವಸ್ತುಗಳು ನೀರಿನಿಂದ ಹಾಳಾಗಿದ್ದವು. ಈ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮ ವಹಿಸಲಾಗಿದೆ. ಮುಂದಿನ ದಿನಗಳಲ್ಲಿ ಈ ರೀತಿ ಆಗದಂತೆ ಕ್ರಮ ವಹಿಸುತ್ತೇವೆ ಎಂದು ಪಿಡಬ್ಲೂಡಿ ಇಲಾಖೆ ಎಇಇ ಸತ್ಯನಾರಾಯಣ ಸ್ಪಷ್ಟನೆ ನೀಡಿದರು.