ಬೆಳ್ತಂಗಡಿ: ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಶನಿವಾರ (ಎ.15) ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಆಗಮಿಸಿ ವಾಸ್ತವ್ಯ ಹೂಡಿ ಇಂದು(ಎ.16) ಮುಂಜಾನೆ ಮಂಜುನಾಥ ಸ್ವಾಮಿಯ ದರ್ಶನ ಪಡೆದರು.
ಬಳಿಕ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆಯವರನ್ನು ಭೇಟಿಯಾಗಿ ಆಶೀರ್ವಾದ ಪಡೆದರು. ಹೆಗ್ಗಡೆಯವರು ಮಾಜಿ ಮುಖ್ಯಮಂತ್ರಿಗಳನ್ನು ಕ್ಷೇತ್ರದ ಪರವಾಗಿ ಗೌರವಿಸಿದರು.
ದೇವರ ದರ್ಶನ ಪಡೆದು ಹೊರಬರುವ ವೇಳೆ ನೆರೆದ ಭಕ್ತರಲ್ಲಿ ಅವರ ಬೆಂಬಲಿಗರು ಜೈಕಾರ ಹಾಕಿ ಹಸ್ತಲಾಘವ ಮಾಡಿದರು.
ಶನಿವಾರ ಸಂಜೆ ಅವರು ನಾಳ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನಕ್ಕೆ ಭೇಟಿ ನೀಡಿ ಶ್ರೀ ದೇವಿಗೆ ವಿಶೇಷ ದುರ್ಗಾ ಪೂಜೆ ಸಲ್ಲಿಸಿದರು. ಧಾರ್ಮಿಕ ಹೋಮ ಹವನ ನಡೆದು ಅದರ ಪೂರ್ಣಾಹುತಿಯಲ್ಲಿ ಅವರು ಭಾಗವಹಿಸಿ ಪ್ರಸಾದ ಸ್ವೀಕರಿಸಿದರು.
ಈ ಸಂದರ್ಭದಲ್ಲಿ ಬೆಂಗಳೂರು ಬೊಮ್ಮನಹಳ್ಳಿ ಕ್ಷೇತ್ರದ ನಾರಾಯಣ ರಾಜು, ವಿಧಾನ ಪರಿಷತ್ ಶಾಸಕ ಎಸ್.ಎಲ್ ಭೋಜೇಗೌಡ, ರಾಜ್ಯ ವಕ್ತಾರ ಹಾಗೂ ಮಾದ್ಯಮ ಸಂಚಾಲಕ ಎಂ.ಬಿ.ಸದಾಶಿವ, ರಾಜ್ಯ ಪ್ರಧಾನ ಕಾರ್ಯದರ್ಶಿ ಪ್ರವೀಣ್ ಚಂದ್ರ ಜೈನ್, ತಾಲೂಕು ನಿಯೋಜಿತ ಅಧ್ಯಕ್ಷ ಶ್ರೀನಿವಾಸ ಗೌಡ ಪಟ್ರಮೆ, ಪ್ರಮುಖರಾದ ಎಚ್.ಎನ್. ನಾಗರಾಜ್, ರಾಮ ಆಚಾರಿ, ಶಾಹಿದ್ ಪಾದೆ ಉಪಸ್ಥಿತರಿದ್ದರು.
ಮುಂದಿನ ದಿನಗಳಲ್ಲಿ ಧರ್ಮಸ್ಥಳ ಮಂಜುನಾಥ ಸ್ವಾಮಿ ಹಾಗೂ ನಾಳ ದುರ್ಗಾಪರಮೇಶ್ವರೀ ತಾಯಿಯ ಆಶೀರ್ವಾದದಿಂದ ರಾಜ್ಯದಲ್ಲಿ ಸುಸ್ಥಿರ ಆಡಳಿತ ಬರುವಂತೆ ಹಾಗೂ ದೇವರ ಅನುಗ್ರಹದಿಂದ ನಾಡಿನ ಜನತೆಗೆ ಒಳಿತಾಗಲಿ ಎಂದು ವಿಶೇಷ ಹೋಮ ಹವನ ಮಾಡಿದ್ದೇನೆ. ಪಕ್ಷದ ಮತ್ತು ಎಲ್ಲ ವಿಚಾರಗಳ ಬಗ್ಗೆಯೂ ಸಂಕಲ್ಪ ಮಾಡಿದ್ದೇನೆ ಎಂದು ಎಚ್.ಡಿ ಕುಮಾರಸ್ವಾಮಿ ಮಾಧ್ಯಮದೊಂದಿಗೆ ಪ್ರತಿಕ್ರಿಯೆ ನೀಡಿದರು.