ಬೆಳ್ತಂಗಡಿ: ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿಯ ಹಿನ್ನೆಲೆಯಲ್ಲಿ ರವಿವಾರ ಬೆಳ್ತಂಗಡಿಗೆ ಆಗಮಿಸಿದರು.
ರಸ್ತೆ ಮಾರ್ಗದ ಮೂಲಕ ಆಗಮಿಸಿದ ಮಾಜಿ ಸಿಎಂ ಅವರು ಧರ್ಮಸ್ಥಳ ದೇವಸ್ಥಾನಕ್ಕೆ ಭೇಟಿ ಶ್ರೀ ಮಂಜುನಾಥ ಸ್ವಾಮಿಯ ದರ್ಶನ ಪಡೆದರು. ಬಳಿಕ ಸನ್ನಿಧಿ ವಸತಿ ಗೃಹದಲ್ಲಿ ಪತ್ರಿಕಾಗೋಷ್ಠಿ ನಡೆಸಿದರು.
ಅಲ್ಲಿಂದ ಚಾರ್ಮಾಡಿ ಗ್ರಾ.ಪಂ.ಗೆ ಆಗಮಿಸಿ ಸಂತ್ರಸ್ತರ ಸಮಸ್ಯೆಗಳನ್ನು ಆಲಿಸಿದರು. ಬಳಿಕ ಜೆಡಿಎಸ್ ಶಾಸಕ ಮಂಜುನಾಥ್ ಅವರು ಪ್ರವಾಹ ಸಂತ್ರಸ್ತರಿಗೆ ನೀಡಿದ ಅಗತ್ಯ ವಸ್ತುಗಳನ್ನು ವಿತರಿಸಿದರು. ಸರಕಾರದಿಂದ ತಮಗೆ ಪರಿಹಾರವನ್ನು ಒದಗಿಸುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ತಿಳಿಸಿದರು.
ಜತೆಗೆ ಸಹಾಯಕ ಕಮೀಷನರ್ ಎಚ್.ಕೆ.ಕೃಷ್ಣಮೂರ್ತಿ ಅವರಿಂದ ಪ್ರವಾಹ ಸಂತ್ರಸ್ತರ ಮಾಹಿತಿ ಹಾಗೂ ಸರ್ಕಾರ ತೆಗೆದುಕೊಂಡಿರುವ ಕ್ರಮಗಳ ವಿವರ ಪಡೆದರು.
ಮಾಜಿ ಸಚಿವ ಸಾ.ರಾ.ಮಹೇಶ್, ವಿಧಾನ ಪರಿಷತ್ ಸದಸ್ಯ ಬೋಜೇಗೌಡ, ಜೆಡಿಎಸ್ ಪ್ರಮುಖರಾದ ಎಂ.ಬಿ.ಸದಾಶಿವ, ಅಕ್ಷಿತ್ ಸುವರ್ಣ, ಜಗನ್ನಾಥ ಗೌಡ ಮೊದಲಾದವರಿದ್ದರು.