Advertisement

ಆಪರೇಷನ್ ಕಮಲʼದಂಥ ʼನೀಚʼ ರಾಜಕಾರಣವನ್ನು ಆರ್ ಎಸ್ಎಸ್ ಶಾಖೆಯಲ್ಲೇ ಕಲಿಸಲಾಯಿತಾ:ಎಚ್ ಡಿಕೆ

01:29 PM Oct 06, 2021 | Team Udayavani |

ಬೆಂಗಳೂರು: ಸಂಘದ ಶಾಖೆಗೆ ಬನ್ನಿ ಎಂದು ಬಿಜೆಪಿ ನಾಯಕ ಸಿ.ಟಿ.ರವಿ ಅವರು ನೀಡಿದ ಆಹ್ವಾನಕ್ಕೆ ಸರಣಿ ಟ್ವೀಟ್ ಗಳ ಮೂಲಕ ಮಾಜಿ ಮುಖ್ಯಮಂತ್ರಿ, ಜೆಡಿಎಸ್ ನಾಯಕ ಎಚ್.ಡಿ. ಕುಮಾರಸ್ವಾಮಿ ಅವರು ಬುಧವಾರ ತಿರುಗೇಟು ನೀಡಿದ್ದಾರೆ.

Advertisement

ಕುಮಾರಸ್ವಾಮಿ ಅವರು ಮಾಡಿರುವ ಟ್ವೀಟ್ ಗಳು

”ಸಿ.ಟಿ.ರವಿ ಅವರೇ, ಮನೆಯಲ್ಲಿ ಕೂತು ಪುಸ್ತಕ ಓದಿದರೆ ಸಾಲದು ಎಂದಿದ್ದೀರಿ. ಆರ್ ಎಸ್ ಎಸ್ ಬಗ್ಗೆ ಜ್ಞಾನಾರ್ಜನೆ, ಅಧ್ಯಯನ, ಸಂಶೋಧನೆ ಮಾಡಲು ಸಂಘದ ಶಾಖೆಗೆ ಬನ್ನಿ ಎಂದು ನನಗೆ ಆಹ್ವಾನ ಕೊಟ್ಟಿದ್ದೀರಿ. ನಿಮ್ಮ ಸಂಘದೊಳಗಿನ ವಾಸ್ತಾವಾಂಶಗಳನ್ನು ಪ್ರತ್ಯಕ್ಷವಾಗಿ ನೋಡಿದವರೇ ಬರೆದ ಪುಸ್ತಕ ಓದಿ ನನಗೆ ಅಲ್ಲಿನ ವ್ಯವಹಾರಗಳ ವಿರಾಟ್ ದರ್ಶನ ಆಗಿದೆ. ಇನ್ನು ಶಾಖೆಯನ್ನೇ ಸೇರಿಕೊಂಡರೆ ಇನ್ನೆಷ್ಟು ಸತ್ಯ ಸಂಗತಿಗಳು ಗೊತ್ತಾಗಬಹುದು. ನೀವೇ ಒಮ್ಮೆ ಊಹಿಸಿ.

ಸ್ವಜನ ಪಕ್ಷಪಾತ, ಭ್ರಷ್ಟಾಚಾರ, ಕುಟುಂಬ ರಾಜಕಾರಣದ ಬಗ್ಗೆ ಮಾತನಾಡಿದ್ದೀರಿ. ನಿಮ್ಮ ಪಕ್ಷ ಮತ್ತು ನಿಮ್ಮ ಸರಕಾರದಲ್ಲಿ ತಾಂಡವವಾಡುತ್ತಿರುವ ಅಪರಿಮಿತ ಭ್ರಷ್ಟಾಚಾರ, ಕುಟುಂಬ ರಾಜಕಾರಣ, ಸ್ವಜನ ಪಕ್ಷಪಾತದ ಬಗ್ಗೆಯೂ ನೀವು ಹೇಳಬೇಕು. ಅದಕ್ಕೂ ಆರ್ ಎಸ್ಎಸ್ ಶಾಖೆಯಲ್ಲೇ ತರಬೇತಿ ನೀಡಲಾಯಿತಾ?

ಪ್ರಜಾಪ್ರಭುತ್ವ ವ್ಯವಸ್ಥೆಯನ್ನೇ ಬುಡಮೇಲು ಮಾಡುವಂಥ ʼಆಪರೇಷನ್ ಕಮಲʼದಂಥ ʼಅನೈತಿಕʼ, ʼನಿರ್ಲಜ್ಜʼ, ʼನೀಚʼ ರಾಜಕಾರಣವನ್ನು ಆರ್ ಎಸ್ಎಸ್ ಶಾಖೆಯಲ್ಲೇ ಕಲಿಸಲಾಯಿತಾ ಎಂಬುದನ್ನೂ ನೀವು ಜನರಿಗೆ ಹೇಳಬೇಕು ಸಿ.ಟಿ.ರವಿಯವರೇ?

Advertisement

ಶಿವಮೊಗ್ಗದಲ್ಲಿ 2,000 ರೂ. ಪರಿಹಾರ ಪಡೆಯಲು 100 ರೂ. ಲಂಚ ಕೇಳಿದ ವರದಿಗಳು ಬಂದಿವೆ. ಇದಾ ನಿಮ್ಮ ಸಮಾಜ ಸೇವೆ? ಛಿದ್ರವಾದ ಬದುಕುಗಳನ್ನೊಮ್ಮೆ ನೋಡಿ. ಜನರ ಬವಣೆಗಳ ಬಗ್ಗೆ ಆರ್ ಎಸ್ಎಸ್ ಶಾಖೆಗಳಲ್ಲಿ ನಿಮಗೆಲ್ಲರಿಗೂ ಏನನ್ನೂ ಹೇಳಿಕೊಡುವುದಿಲ್ಲವಾ ಸಿ.ಟಿ.ರವಿಯವರೇ?

ಸೇವೆಯ ಸೋಗಿನಲ್ಲಿ ಸಂಸ್ಥೆಗಳು ರಾಜಕೀಯ ಮಾಡಬಾರದು. ಜನರ ಬವಣೆಗಳ ನಿವಾರಣೆ ನಿಟ್ಟಿನಲ್ಲಿ ದುಡಿಯಬೇಕೆ ಹೊರತು ಬದುಕಿಗೇ ಬೆಂಕಿ ಇಡಬಾರದು. ಸಮಾಜದ ಶಾಂತಿಯನ್ನು ಕಾಪಾಡಬೇಕೇ ಹೊರತು, ಅದಕ್ಕೆ ಕೊಳ್ಳಿ ಇಡಬಾರದು. ಆರ್ ಎಸ್ಎಸ್ ಹುಟ್ಟಿದಾಗಿನಿಂದಲೂ ಏನೆಲ್ಲ ಮಾಡಿಕೊಂಡು ಬಂದಿದೆ ಎನ್ನುವುದು ಜಗತ್ತಿಗೇ ಗೊತ್ತಿರುವ ಸಂಗತಿ.

ಜನ ಪ್ರತಿನಿಧಿಗಳನ್ನು, ಸರಕಾರಗಳನ್ನು, ಆಡಳಿತ ಯಂತ್ರಾಂಗವನ್ನು ಕಪಿಮುಷ್ಠಿಯಲ್ಲಿ ಇಟ್ಟುಕೊಳ್ಳುವ ಪರಿಪಾಠ ದೇಶಕ್ಕೆ ಒಳ್ಳೆಯದಲ್ಲ. ಅರ್ಥ ಮಾಡಿಕೊಳ್ಳಿ ಸಿ.ಟಿರವಿಯರೇ. ನಾನು ಸತ್ಯದ ಪರ” ಎಂದು ಬರೆದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next