Advertisement

ಚಾಲಕರಿಗೆ ಕಷ್ಟಕಾಲದಲ್ಲಿ ಪರಿಹಾರ ಕೊಡುವ ಬದಲು ದಂಡ ವಸೂಲಿ ಖಂಡನೀಯ : ಕುಮಾರಸ್ವಾಮಿ ಕಿಡಿ

03:18 PM Oct 20, 2020 | sudhir |

ಬೆಂಗಳೂರು : ಸರ್ಕಾರ ಚಾಲಕರನ್ನು ಸುಲಿಯುವ ನಿರ್ದಾಕ್ಷಿಣ್ಯ ಕ್ರಮಕ್ಕೆ ತಕ್ಷಣ ತಡೆಯೊಡ್ಡಿ ಔದಾರ್ಯ ತೋರುವ ಮೂಲಕ ಚಾಲಕರಿಗೆ ತುಸು ನೆಮ್ಮದಿ ನೀಡಬೇಕಾದ ತುರ್ತು ಅಗತ್ಯವಿದೆ. ಎಗ್ಗಿಲ್ಲದೆ ದಂಡ ವಸೂಲಿ ಮಾಡುವ ಪೋಲಿಸರ ಕ್ರಮದಿಂದ ಚಾಲಕರು ನಲುಗಿ ಹೋಗಿದ್ದಾರೆ. ಇಂತಹ ಕಡು ಕಷ್ಟಕಾಲದಲ್ಲಿ ಸರ್ಕಾರ ಮಾನವೀಯತೆಯನ್ನು ಪ್ರದರ್ಶಿಸಬೇಕು ಎಂದು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಸರಕಾರ ಹಾಗೂ ಪೊಲೀಸ್ ಇಲಾಖೆಯ ವಿರುದ್ಧ ಕಿಡಿಕಾರಿದ್ದಾರೆ.

Advertisement

ಈ ಕುರಿತು ತಮ್ಮ ಟ್ವಿಟರ್ ಖಾತೆಯಲ್ಲಿ ಬರೆದುಕೊಂಡಿದ್ದು ಹೀಗೆ :
ಕೋವಿಡ್-19 ವೇಳೆ ಸಂಕಟಕ್ಕೆ ಒಳಗಾಗಿದ್ದ ಚಾಲಕರಿಗೆ ₹5000 ಕೊಡುವ ವಿಶೇಷ ಪ್ಯಾಕೇಜ್ ಘೋಷಣೆ ಮಾಡಿದ ಸರ್ಕಾರ ಚಾಲಕರ ಮೂಗಿಗೆ ತುಪ್ಪ ಸವರುವ ಕೆಲಸ ಮಾಡಿತ್ತು, ಆದರೆ ಅನುಷ್ಠಾನಕ್ಕೆ ತರಲಿಲ್ಲ. ಚಾಲಕರಿಗೆ ಪರಿಹಾರ ಕೊಡದೆ ಮಾತು ತಪ್ಪಿದ ಸರ್ಕಾರ ಈಗ ದಂಡ ವಸೂಲಿಯ ನೆಪದಲ್ಲಿ ಚಾಲಕರ ಜೇಬಿಗೆ ಕತ್ತರಿ ಹಾಕುತ್ತಿದೆ.

ಕಳೆದ ಏಳು ತಿಂಗಳಿಂದ ಸಂಪಾದನೆ ಇಲ್ಲದೆ ಹತಾಶರಾಗಿರುವ ರಿಕ್ಷಾ, ಕ್ಯಾಬ್ ಚಾಲಕರಿಗೆ ದಂಡದ ರೂಪದಲ್ಲಿ ಹಗಲು ದರೋಡೆ ಮಾಡುತ್ತಿರುವ ಸರ್ಕಾರ, ಕಠಿಣ ಕ್ರಮದಿಂದ ಬಡ ಚಾಲಕರ ಮೂರುಕಾಸಿನ ಮೇಲೂ ಕೆಂಗಣ್ಣು ಬೀರಿರುವುದು ರಾಕ್ಷಸೀ ಪ್ರವೃತ್ತಿಎಂದಿದ್ದಾರೆ.

ಇದನ್ನೂ ಓದಿ:ಆಂತರಿಕ ಕಚ್ಚಾಟದಿಂದ ಸರ್ಕಾರ ಬಿದ್ದರೆ ನಾವು ಚುನಾವಣೆ ಎದುರಿಸಲು ಸಿದ್ಧ : ಸಿದ್ದರಾಮಯ್ಯ

ಬಡ ಚಾಲಕರ ಹಿಡಿಶಾಪ ಸರ್ಕಾರಕ್ಕೆ ತಗುಲುವ ಮುನ್ನವೇ ದರ್ಪ ದೌರ್ಜನ್ಯದ ಗದಾಪ್ರಹಾರ ತಕ್ಷಣವೇ ನಿಲ್ಲಿಸಬೇಕು. ಬೆಂದ ಮನೆಯಲ್ಲಿ ಗಳ ಅರಿಯುವ ಕೆಲಸ ಜವಾಬ್ದಾರಿಯುತ ಸರ್ಕಾರಕ್ಕೆ ಶೋಭೆಯಲ್ಲ. ಇಂತಹ ದುಂಡಾವರ್ತಿ ಪ್ರವೃತ್ತಿಯನ್ನು ಸರ್ಕಾರ ಕೂಡಲೇ ಕೈಬಿಡಬೇಕು ಎಂದರು.

Advertisement

ಸೋಂಕು ಮತ್ತು ಲಾಕ್ಡೌನ್ ಪರಿಸ್ಥಿತಿಯಿಂದ ಸಂಪಾದನೆ ಇಲ್ಲದೆ ಕಂಗೆಟ್ಟಿರುವ ಆಟೋರಿಕ್ಷಾ ಚಾಲಕರು ಹಾಗೂ ಕ್ಯಾಬ್ ಡ್ರೈವರ್ ಗಳ ಮೇಲೆ ಮುಲಾಜಿಲ್ಲದೆ ದಂಡ ವಸೂಲಿ ಮಾಡುತ್ತಿರುವ ಸಂಚಾರಿ ಪೊಲೀಸರು ಮತ್ತು ಸಾರಿಗೆ ಅಧಿಕಾರಿಗಳ ಕಾರ್ಯಾಚರಣೆ ಬಡ ಚಾಲಕರಿಗೆ ಬರಸಿಡಿಲು ಬಡಿದಂತಾಗಿದೆ.

ಮಾಸ್ಕ್ ಧರಿಸಿದವರಿಗೆ ಕಾನೂನು-ಸುವ್ಯವಸ್ಥೆ ಹಾಗೂ ಸಂಚಾರಿ ಪೊಲೀಸರು ದಂಡ ವಸೂಲಿ ದಂಧೆಗೆ ಇಳಿದಿರುವುದು ನಾಗರಿಕರಿಗೆ ನುಂಗಲಾರದ ಬಿಸಿ ತುಪ್ಪವಾಗಿದೆ. ಜಾಗೃತಿ ಮೂಡಿಸಬೇಕಾದ ಪೊಲೀಸರು ವಾಹನ ತಪಾಸಣೆ ಹೆಸರಲ್ಲಿ ಬಡ ಚಾಲಕರನ್ನು ಸುಲಿಯುತ್ತಿರುವ ನಿರ್ದಾಕ್ಷಿಣ್ಯ ವರ್ತನೆ ಸರಿಯಲ್ಲ.

ಎಲ್ಲ ದಾಖಲಾತಿಗಳನ್ನು ತೋರಿಸಿದರೂ ಒಂದಲ್ಲಾ ಒಂದು ಕಾನೂನು ತಗಾದೆ ತೆಗೆದು ಚಾಲಕರನ್ನು ಹಗಲು ದರೋಡೆ ಮಾಡುತ್ತಿರುವುದನ್ನು ತಕ್ಷಣ ನಿಲ್ಲಿಸಬೇಕು. ಪೊಲೀಸರಿಗೆ ದಂಡ ವಸೂಲಿಗೆ ಟಾರ್ಗೆಟ್ ನೀಡಿರುವುದು ಈಗ ಗುಟ್ಟಾಗಿ ಉಳಿದಿಲ್ಲ ಎಂದಿದ್ದಾರೆ.

ಇದನ್ನೂ ಓದಿ:ಆಸ್ತಿಯಾಗುವವರನ್ನು ಮಾತ್ರ ಸೇರ್ಪಡೆ, ಹೊರೆಯಾಗುವವರಲ್ಲ:ಎಂಬಿಪಿ, ಕುಲಕರ್ಣಿಗೆ CT ರವಿ ಟಾಂಗ್

ಈಗಷ್ಟೇ ರಸ್ತೆಗೆ ಇಳಿದಿರುವ ಆಟೋರಿಕ್ಷಾ ಮತ್ತು ಕ್ಯಾಬ್ ಚಾಲಕರು ಪ್ರಯಾಣಿಕರ ಕೊರತೆಯಿಂದ ಒಂದೊತ್ತಿನ ಊಟಕ್ಕೂ ಪರದಾಡುತ್ತಿದ್ದಾರೆ. ಇಂಥ ಸಂಕಷ್ಟ ಪರಿಸ್ಥಿತಿಯಲ್ಲಿ ಪೊಲೀಸರು ದಂಡ ವಸೂಲಿಯನ್ನೇ ಮೂಲಮಂತ್ರವಾಗಿರಿಸಿ ಕೊಂಡಿರುವುದು ನಾಗರಿಕ ಸಮಾಜ ತಲೆ ತಗ್ಗಿಸುವಂತಹದ್ದು.

ಸರ್ಕಾರ ಚಾಲಕರನ್ನು ಸುಲಿಯುವ ನಿರ್ದಾಕ್ಷಿಣ್ಯ ಕ್ರಮಕ್ಕೆ ತಕ್ಷಣ ತಡೆಯೊಡ್ಡಿ ಔದಾರ್ಯ ತೋರುವ ಮೂಲಕ ಚಾಲಕರಿಗೆ ತುಸು ನೆಮ್ಮದಿ ನೀಡಬೇಕಾದ ತುರ್ತು ಅಗತ್ಯವಿದೆ. ಎಗ್ಗಿಲ್ಲದೆ ದಂಡ ವಸೂಲಿ ಮಾಡುವ ಪೋಲಿಸರ ಕ್ರಮದಿಂದ ಚಾಲಕರು ನಲುಗಿ ಹೋಗಿದ್ದಾರೆ. ಇಂತಹ ಕಡು ಕಷ್ಟಕಾಲದಲ್ಲಿ ಸರ್ಕಾರ ಮಾನವೀಯತೆಯನ್ನು ಪ್ರದರ್ಶಿಸಬೇಕು ಎಂದು ಆಗ್ರಹಿಸುತ್ತೇನೆ ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next